Sunday, September 15, 2024
Homeರಾಜ್ಯಬೆಳ್ಳುಳ್ಳಿ-ಈರುಳ್ಳಿ ಬೆಲೆ ಏರಿಕೆ : ಗ್ರಾಹಕರಿಗೆ ಹೊರೆ

ಬೆಳ್ಳುಳ್ಳಿ-ಈರುಳ್ಳಿ ಬೆಲೆ ಏರಿಕೆ : ಗ್ರಾಹಕರಿಗೆ ಹೊರೆ

ಬೆಂಗಳೂರು,ಆ.30- ಕಳೆದ ಫೆಬ್ರವರಿ ತಿಂಗಳಿನಲ್ಲಿ ಬರೋಬ್ಬರಿ ಕೆಜಿಗೆ 500 ರೂ. ತಲುಪಿ ಭಾರಿ ದುಬಾರಿಯಾಗಿತ್ತು. ಮತ್ತೆ ಇನ್ನೇನು ಶ್ರಾವಣ ಮುಗಿಯುತ್ತಿರುವ ಬೆನ್ನಲ್ಲೇ ಮತ್ತೆ ಬೆಲೆ ಏರಿಕೆಯಾಗಿದೆ. ಶ್ರಾವಣ ಮಾಸದಲ್ಲಿ ಕೆಲವರು ಅಷ್ಟಾಗಿ ಮಾಂಸಾಹಾರ ಸೇವಿಸುವುದಿಲ್ಲ. ಹಾಗಾಗಿ ಒಗ್ಗರಣೆಗೆ ಹೆಚ್ಚಾಗಿ ಬೆಳ್ಳುಳ್ಳಿ ಕೂಡ ಬಳಸುತ್ತಿಲ್ಲ. ಶ್ರಾವಣ ಮುಗಿದು ದಸರಾ ಪ್ರಾರಂಭವಾಗುತ್ತಿದೆ. ಮನೆಗಳಲ್ಲಿ ಒಗ್ಗರಣೆ ಘಾಟು ಹೆಚ್ಚಲಿದೆ. ಈ ನಡುವೆ ಬೆಳ್ಳುಳ್ಳಿ ಬೆಲೆ ಗ್ರಾಹಕರ ಜೇಬು ಸುಡುತ್ತಿದೆ. ಈಗ ಮಾರುಕಟ್ಟೆಯಲ್ಲಿ ಕೆಜಿಗೆ 400 ರೂ. ದಾಟಿದ್ದು, ಮಸಾಲೆಗೆ ಬೆಳ್ಳುಳ್ಳಿ ಬಳಸಲು ಹಿಂದೇಟು ಹಾಕುವಂತಾಗಿದೆ.

ತಿಂಡಿಗಳಿಗೆ, ಸಾಂಬಾರಿಗೆ ಬೆಳ್ಳುಳ್ಳಿ ಇಲ್ಲದಿದ್ದರೆ ರುಚಿ ಇರುವುದಿಲ್ಲ. ಆದರೆ ಬೆಲೆ ಏರಿಕೆಯಾಗಿದ್ದು, ಗೃಹಿಣಿಯರಿಗೆ ಕೈ ಕಟ್ಟಿದಂತಾಗಿದೆ.
ಬೆಂಗಳೂರಿನ ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆಗೆ ಪ್ರತಿದಿನ 5000 ರಿಂದ 6000 ಚೀಲ ಬೆಳ್ಳುಳ್ಳಿ ಮಾರಾಟವಾಗುತ್ತಿತ್ತು. ಸದ್ಯ ಬೆಲೆ ಹೆಚ್ಚಳದಿಂದ ಕೇವಲ 2,500 ಚೀಲ ಮಾರಾಟವಾಗುತ್ತಿದೆ. ಮಾರುಕಟ್ಟೆಯಿಂದ ರಾಜ್ಯದ ವಿವಿಧೆಡೆಗೆ ಪೂರೈಕೆಯಾಗುತ್ತಿದೆ.
ರಾಜ್ಯದ ವಿವಿಧೆಡೆ ಈ ಬಾರಿ ಭಾರಿ ಮಳೆಯಾಗಿದ್ದು, ಬೆಳೆಗಳು ನಾಶವಾಗಿದ್ದು, ಹೊಸ ಬೆಳ್ಳುಳ್ಳಿ ಇನ್ನು 2-3 ತಿಂಗಳಲ್ಲಿ ಕಟಾವಿಗೆ ಬರಲಿದೆ. ಅಲ್ಲಿಯವರೆಗೂ ಬೆಲೆ ಇಳಿಕೆಯಾಗುವ ಲಕ್ಷಣಗಳಿಲ್ಲ ಎಂದು ವ್ಯಾಪಾರಿಯೊಬ್ಬರು ತಿಳಿಸಿದ್ದಾರೆ.

ಈರುಳ್ಳಿ ಬೆಲೆಯೂ ಏರಿಕೆ :
ಕಳೆದ ಕೆಲವು ದಿನಗಳಿಂದ ಈರುಳ್ಳಿ ಬೆಲೆ ನಿರಂತರವಾಗಿ ಏರುತ್ತಲೇ ಇದ್ದು, ಗ್ರಾಹಕರ ಕಣ್ಣಲ್ಲಿ ಕೊಳ್ಳುವಾಗಲೇ ನೀರು ತರಿಸುತ್ತಿದೆ. ಗುಣಮಟ್ಟದ ಈರುಳ್ಳಿ ಕೆ.ಜಿ.ಗೆ 60 ರೂ.ಗೆ ಮಾರಾಟವಾಗುತ್ತಿದೆ. ಕಳೆದ ಕೆಲವು ತಿಂಗಳ ಹಿಂದೆ 100 ರೂ.ಗೆ 5 ಕೆ.ಜಿ. ಮಾರಾಟವಾಗುತ್ತಿದ್ದ ಈರುಳ್ಳಿ ಈಗ 250 ರೂ.ಗೆ 4 ಕೆ.ಜಿ. ಮಾರಾಟ ಮಾಡಲಾಗುತ್ತಿದೆ.

ಹೆಚ್ಚಾಗಿ ಈರುಳ್ಳಿ ಬೆಳೆಯುವ ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ಬೆಳಗಾವಿ ಸೇರಿದಂತೆ ಮತ್ತಿತರ ಭಾಗಗಳಲ್ಲಿ ಭಾರಿ ಮಳೆಯಾಗಿದ್ದು, ಬೆಳೆ ನಾಶವಾಗಿರುವ ಹಿನ್ನೆಲೆಯಲ್ಲಿ ಬೆಲೆ ಹೆಚ್ಚಳವಾಗಿದೆ.

RELATED ARTICLES

Latest News