ಬೆಂಗಳೂರು, ಸೆ.3- ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ಬಹುತೇಕ ಪೂರ್ಣವಾಗಿದ್ದು, ಇಂದು ಅಥವಾ ನಾಳೆಯೊಳಗೆ ಚಾರ್ಜ್ಶೀಟ್ಅನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದೆಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಸಾಕ್ಷ್ಯಾಧಾರಗಳನ್ನು ಆಧರಿಸಿ ದೋಷಾರೋಪಣಾ ಪಟ್ಟಿ ಸಿದ್ಧಪಡಿಸಿದ್ದು, ಅದನ್ನು ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್ಎಸ್ಪಿ) ಪರಿಶೀಲನೆ ನಡೆಸಿದ್ದು,
ಕೆಲವೊಂದು ವಿಷಯಗಳ ಬಗ್ಗೆ ಸ್ಪಷ್ಟನೆ ಕೇಳಿದ್ದಾರೆ. ಅದಕ್ಕೂ ನಾವು ಉತ್ತರ ಸಿದ್ಧಪಡಿಸಿದ್ದೇವೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಲವು ಸಾಕ್ಷ್ಯಾಧಾರಗಳುಚಸಿಕ್ಕಿದ್ದು, ಅದರ ಪೂರ್ಣ ವಿವರ ಒಳಗೊಂಡಿರುವ ಚಾರ್ಜ್ಶೀಟ್ಅನ್ನು ಇನ್ನೆರಡು ದಿನಗಳೊಳಗೆ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಆಯುಕ್ತರು ತಿಳಿಸಿದರು. ಬೆಂಗಳೂರಿನ ವಿಧಿ-ವಿಜ್ಞಾನ ಪ್ರಯೋಗಾಲಯದಿಂದ ಎಲ್ಲಾ ವರದಿಗಳು ಬಂದಿದ್ದು, ಜೊತೆಗೆ ಅದಕ್ಕೆ ಸೇರಿದ ಪೂರಕ ಪ್ರಶ್ನೆಗಳಿಗೆ ಉತ್ತರ ಸಿದ್ಧಪಡಿಸಲಾಗಿದೆ.
ಹೈದರಾಬಾದ್ನ ಎಫ್ಎಸ್ಎಲ್ನಿಂದ ಕೆಲ ವರದಿಗಳು ಬರುವುದು ಬಾಕಿ ಇದೆ. ಆದರೂ ಸಹ ಅದರ ತನಿಖೆ ಬಾಕಿ ಇಟ್ಟು ನಾವು ಮುಂದುವರೆಯುತ್ತಿದ್ದೇವೆ ಎಂದು ಅವರು ಮಾಹಿತಿ ನೀಡಿದರು.ಆರೋಪಿಗಳಿಗೆ ಯಾವ ಸೆಕ್ಷನ್ನಡಿ ಶಿಕ್ಷೆಯಾಗಬಹುದು ಎಂಬುದನ್ನು ಸಾಕ್ಷಿ ಆಧಾರಗಳ ಮೇಲೆ ನಿರ್ಧಾರವಾಗುತ್ತದೆ ಎಂದು ಆಯುಕ್ತರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ವೈರಲ್ ಆದ ೇಟೋದೊಳಗೆ ನಟ ದರ್ಶನ್ ಜೊತೆ ಇದ್ದ ವಿಲ್ಸನ್ ಗಾರ್ಡನ್ ನಾಗ ಮತ್ತು ಇತರರ ಬಗ್ಗೆ ಜೈಲು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅವರ ಸ್ಥಳಾಂತರ ಬಗ್ಗೆ ನ್ಯಾಯಾಲಯ ನಿರ್ಧರಿಸಲಿದೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ಪ್ರಕರಣ ದಾಖಲಿಸಿದ ಮಹಿಳೆಯ ಸಾವು ಕುರಿತಂತೆ ಮಹಿಳೆ ಆಯೋಗವು ಬರೆದಿರುವ ಪತ್ರ ನಮಗೆ ಇನ್ನು ತಲುಪಿಲ್ಲ ಪತ್ರ ಬಂದ ನಂತರ ಅದನ್ನು ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ದಯಾನಂದ ಅವರು ತಿಳಿಸಿದರು.