ಬೆಳಗಾವಿ, ಸೆ.4– ಕಂಡ ಕಂಡವರ ಬಳಿ ಸಾಲ ಮಾಡಿ ತಲೆಮರೆಸಿಕೊಂಡಿದ್ದ ಪತಿಯನ್ನು ಪತ್ನಿ ಹಾಗು ಅತ್ತೆ ಸೇರಿಕೊಂಡು ಕೊಲೆ ಮಾಡಿ ನಾಟಕವಾಡಿರುವುದು ಇದೀಗ ಬೆಳಕಿಗೆ ಬಂದಿದೆ.
ನಗರದ ಪೀರವನಾಡಿ ನಿವಾಸಿ ವಿನಾಯಕ್ ಜಾಧವ(48) ಕೊಲೆಯಾದ ವ್ಯಕ್ತಿ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಹೆಂಡತಿ ರೇಣುಕಾ ಮತ್ತು ಆಕೆಯ ತಾಯಿ ಶೋಭಾಳನ್ನು ಪೊಲೀಸರು ಬಂಧಿಸಿದ್ದಾರೆ. ವಿನಾಯಕ್ ಜಾಧವ್ ಅವರು ಕೊರೊನಾ ಸಮಯದಲ್ಲಿ ಸ್ವಂತ ವ್ಯವಹಾರದಲ್ಲಿ ನಷ್ಟ ಹೊಂದಿದ್ದರು. ಈ ನಡುವೆ ಹಲವರ ಬಳಿ ಸಾಲ ಮಾಡಿ ಅದನ್ನು ತೀರಿಸಲಾಗದೆ ಸಂಕಷ್ಟದ ಸುಳಿಗೆ ಸಿಲುಕಿದ್ದರು. ಹೀಗಾಗಿ ಸಾಲಗಾರರ ಕಾಟಕ್ಕೆ ಬೇಸತ್ತು ಬೆಳಗಾವಿ ಬಿಟ್ಟು ಹೋಗಿದ್ದರು.
ಈತ ಮನೆಯನ್ನೂ ಸಾಲಕ್ಕೆ ಅಡಮಾನವಾಗಿ ಇಟ್ಟಿದ್ದರಿಂದ ಆಗಾಗ ಸಾಲಗಾರರು ಮನೆ ಬಳಿ ಬರುತ್ತಿದ್ದರು. ಆದರೆ ವಿನಾಯಕ್ ಜಾಧವ್ ಹೆಂಡತಿ ಹಾಗೂ ಅತ್ತೆ ತಮಗೂ ಸಾಲಕ್ಕೂ ಸಂಬಂಧ ಇಲ್ಲ ಎಂದು ಸಾಲಗಾರರನ್ನು ಬೈದು ಕಳುಹಿಸುತ್ತಿದ್ದರು.
ಸುಮಾರು ಮೂರು ವರ್ಷದ ಬಳಿಕ ವಿನಾಯಕ್ ಜಾಧವ್ ವಾಪಸ್ ಆಗಿದ್ದು ಮದ್ಯಪಾನ ಮಾಡಿ ತಡ ರಾತ್ರಿ ಮನೆಗೆ ಹೋಗಿದ್ದಾರೆ. ಪತಿಯನ್ನು ಕಂಡ ಪತ್ನಿ ಹಾಗು ಆಕೆಯ ತಾಯಿ ಗಾಬರಿಯಾಗಿದ್ದರು. ಆ ವೇಳೆ ಇಷ್ಟು ದಿನ ಎಲ್ಲಿ ತಲೆಮರೆಸಿಕೊಂಡಿದ್ದೀರೆಂದು ಕೇಳಿದ್ದಾರೆ.
ಆ ವೇಳೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ನಂತರ ವಿನಾಯಕ ನಿದ್ರೆಗೆ ಜಾರಿದ್ದಾರೆ. ಆ ವೇಳೆ ಈತನನ್ನು ಮುಗಿಸಿದರೆ ಸಾಲಗಾರರು ಸುಮನಾಗುತ್ತಾರೆ. ತಮಗೂ ಗಂಡನ ಕಿರಿಕಿರಿ ತಪ್ಪುತ್ತೆ ಎಂದು ಕೆಟ್ಟ ಆಲೋಚನೆ ಮಾಡಿ ಮಲಗಿದ್ದ ವಿನಾಯಕ್ನ ಮೇಲೆ ಪತ್ನಿ ಹಾಗೂ ಆತನ ತಾಯಿ ಸೇರಿಕೊಂಡು ಹಲ್ಲೆ ಮಾಡಿ ಹಗ್ಗದಿಂದ ಕುತ್ತಿಗೆ ಕಟ್ಟಿ, ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ ಮನೆಯ ಮುಂಭಾಗದಲ್ಲಿ ಬಿಸಾಡಿ, ನಂತರ ತನ್ನ ಪತಿ ಕುಡಿದು ಬಂದು ಬಿದ್ದು ಮೃತಪಟ್ಟಿದ್ದಾನೆ ಎಂದು ಬಿಂಬಿಸಿದ್ದರು.
ಸುದ್ದಿ ತಿಳಿದು ಸ್ಥಳಕ್ಕೆ ಬಂದ ಗ್ರಾಮೀಣ ಠಾಣೆ ಪೊಲೀಸರು ಪರಿಶೀಲಿಸಿದಾಗ ಮೃತನ ಮೈಮೇಲೆ ಗಾಯದ ಗುರುತು ನೋಡಿ ಅನುಮಾನದಿಂದ ಶವ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಈಗ ವರದಿ ಬಂದಿದ್ದು ತಿಂಗಳ ಬಳಿಕ ಕೊಲೆ ಅಸಲಿ ಸತ್ಯ ಹೊರ ಬಿದ್ದಿದೆ. ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಪತ್ನಿ ರೇಣುಕಾ, ಅತ್ತೆ ಶೋಭಾ ಅವರನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.