ಚಿತ್ರದುರ್ಗ,ಸೆ.5- ರೇಣುಕಾ ಸ್ವಾಮಿ ಮಂಡಿಯೂರಿ ಅಂಗಲಾಚಿ ಬೇಡಿ ಕೊಂಡರೂ ಕರುಣೆ ತೋರಿಸದೆ ಕ್ರೂರವಾಗಿ ಕೊಲೆ ಮಾಡಿರುವುದನ್ನು ನೋಡಿ ಸಹಿಸಿಕೊಳ್ಳಲಾಗುತ್ತಿಲ್ಲ ಎಂದು ರೇಣುಕಾಸ್ವಾಮಿಯವರ ತಂದೆ ಕಾಶಿನಾಥಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೇಣುಕಾಸ್ವಾಮಿಯವರ 2 ಫೋಟೊಗಳು ವೈರಲ್ ಆದ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಟ ದರ್ಶನ್ ಹಾಗೂ ಅವರ ಗ್ಯಾಂಗ್ನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನನ್ನ ಮಗ ಎಷ್ಟು ಹಿಂಸೆಯಿಂದ ಒದ್ದಾಡಿರಬಹುದು. ಕಿರುಚಿ ಅತ್ತಿರಬಹುದು ಎಂದು ನೆನೆಸಿಕೊಂಡರೆ ಎದೆನೋವು ಹೆಚ್ಚಾಗುತ್ತದೆ. ಅವರನ್ನು ಬರೀ ರಾಕ್ಷಸರು ಎಂದು ಕರೆದರೆ ಸಾಲುವುದಿಲ್ಲ. ಚಿತ್ರಗಳಲ್ಲಿ ಮಾತ್ರ ನಾವು ರಾಕ್ಷಸರನ್ನು ನೋಡಿ ಕಲ್ಪಿಸಿಕೊಳ್ಳುತ್ತಿದ್ದೆವು. ಇವರು ನಿಜಜೀವನದಲ್ಲಿ ರಾಕ್ಷಸರಿಗಿಂತಲೂ ಭಯಾನಕ ರಾಕ್ಷಸರು.
ಎಳ್ಳುಕಾಳಷ್ಟೂ ಮಾನವೀಯತೆ ಇಲ್ಲದ ಇವರಿಗೆ ಸರ್ಕಾರವು ನನ್ನ ಮಗನಿಗಾದಂತೆ ಕಠಿಣ ಶಿಕ್ಷೆ ನೀಡಬೇಕು ಎಂದು ಅಳಲು ತೋಡಿಕೊಂಡರು.ನನ್ನ ಮಗನ ಮೇಲೆ ಹಲ್ಲೆ ಮಾಡಿರುವುದನ್ನು ಫೋಟೊದಲ್ಲಿ ನೋಡಿದರೆ ದಿಗ್ಭ್ರಮೆಯಾಗುತ್ತಿದೆ. ತಲೆಸುತ್ತು, ಎದೆನೋವು ಬರುತ್ತಿದೆ. ಆತ ಸಾಯುವಾಗ ಎಷ್ಟು ಒದ್ದಾಡಿರಬಹುದು ಎಂದು ಕಲ್ಪಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ.
ಮಗನ ಕೊಲೆಯ ಬಳಿಕ ಆತನ ತಾಯಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ನನ್ನ ತಾಯಿಯೂ ಹಾಸಿಗೆ ಹಿಡಿದಿದ್ದಾರೆ. ರೇಣುಕಾಸ್ವಾಮಿಯ ಪತ್ನಿ ಕುಗ್ಗಿ ಹೋಗಿದ್ದಾರೆ. ಆಕೆ ಗರ್ಭಿಣಿಯಾಗಿದ್ದು, ಮಗುವಿನ ತೂಕ ಕಡಿಮೆಯಾಗಿದೆ. ವೈದ್ಯರು ನಿರಂತರ ಉಪಚಾರ ಮಾಡುತ್ತಿದ್ದಾರೆ ಎಂದರು.
ಆರೋಪಿ ದರ್ಶನ್ ಸೇರಿದಂತೆ ಇತರರಿಗೆ ಜೈಲಿನಲ್ಲಿ ಸುಖಾಸೀನ ಸೌಲಭ್ಯ ನೀಡುತ್ತಿರುವುದು ಸರಿಯಲ್ಲ. ಹೀಗಾದರೆ ಶಿಕ್ಷೆಗೆ ಅರ್ಥವೇನಿದೆ. ಒಂದು ಮನೆಯಿಂದ ಮತ್ತೊಂದು ಮನೆ ಬದಲಾದಂತೆ ವಾತಾವರಣ ನಿರ್ಮಾಣವಾಗುತ್ತದೆಯೋ ಹೊರತು ಶಿಕ್ಷೆ ಎನಿಸುವುದಿಲ್ಲ. ಈ ವಿಚಾರವಾಗಿ ಸರ್ಕಾರ ನ್ಯಾಯೋಚಿತವಾಗಿ ನಡೆದುಕೊಳ್ಳಬೇಕು ಎಂದು ಹೇಳಿದರು.
ಕೆಲವರು ಈಗಲೂ ದರ್ಶನ್ ಮೇಲೆ ಅಭಿಮಾನ ಪ್ರದರ್ಶಿಸುತ್ತಿರುವುದನ್ನು ನೋಡಿದರೆ ನನಗೆ ಆತಂಕವಾಗುತ್ತಿದೆ. ನಮ ಮನೆಯ ಮಗನಿಗಾದಂತ ಪರಿಸ್ಥಿತಿ ಅಭಿಮಾನ ತೋರಿಸುವವರ ಮನೆಯಲ್ಲಿ ನಡೆದಿದ್ದರೆ ಏನು ಮಾಡುತ್ತಿದ್ದರು. ರೇಣುಕಾಸ್ವಾಮಿ ತಪ್ಪು ಮಾಡಿದ್ದರೆ ಪೊಲೀಸರಿಗೆ ದೂರು ನೀಡಬಹುದಿತ್ತು.
ಇಲ್ಲವೇ ತಂದೆ-ತಾಯಿಗಳಾದ ನಮಗೆ ಹೇಳಬಹುದಿತ್ತು, ರೇಣುಕಾಸ್ವಾಮಿ ಬುದ್ಧಿ ಮಾತು ಹೇಳಿದ್ದರೆ ತಿದ್ದಿಕೊಳ್ಳುವ ಸ್ವಭಾವದವನು. ಒಂದು ವೇಳೆ ಹಲ್ಲೆ ಮಾಡಿದ ಬಳಿಕವಾದರೂ ಬಿಟ್ಟು ಕಳುಹಿಸಬಹುದಿತ್ತು. ಅಷ್ಟು ಕ್ರೂರವಾಗಿ ಅತ್ತು ಬೇಡಾಡಿದರೂ ಬಿಡದೇ ಕ್ರೂರವಾಗಿ ಕೊಂದಿರುವುದು ಮಾನವೀಯತೆಯೇ? ಎಂದು ಪ್ರಶ್ನಿಸಿದರು.
ಸಮಾಜಕ್ಕೆ ಉತ್ತಮ ಸಂದೇಶ ನೀಡುವ, ಜವಾಬ್ದಾರಿ ಸ್ಥಾನದಲ್ಲಿರುವ ನಟ ಈ ರೀತಿ ನಡೆದುಕೊಂಡಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಆತ ಚಿತ್ರರಂಗದಲ್ಲಿ ನಟಿಸುವುದಕ್ಕಿಂತಲೂ ನಿಜ ಜೀವನದಲ್ಲಿ ವ್ಯತಿರಿಕ್ತವಾಗಿ ನಡೆದುಕೊಂಡಿದ್ದಾನೆ ಎಂದು ಕೇಳರಿಯದ, ನೋಡದ ಕ್ರೂರತ್ವವನ್ನು ದರ್ಶನ್ ಮತ್ತು ಅವರ ಸಂಗಡಿಗರು ಪ್ರದರ್ಶಿಸಿದ್ದಾರೆ ಎಂದರು.
ಅಭಿಮಾನ ಇರಬೇಕು ನಿಜ, ಆದರೆ ದುರಭಿಮಾನ ಇರಬಾರದು. ಕ್ರೂರ ಮನಸ್ಥಿತಿಯಲ್ಲಿ ತಪ್ಪು ಮಾಡಿದವರನ್ನೂ ಅಭಿಮಾನದ ಕಾರಣಕ್ಕಾಗಿ ಬೆಂಬಲಿಸುವುದು ಸರಿಯಲ್ಲ. ಮನುಷ್ಯತ್ವ ಇಲ್ಲದ ರಾಕ್ಷಸರ ಮುಖವಾಡಗಳು ಜನರ ಮುಂದೆ ಬಯಲುಗೊಂಡಿವೆ ಎಂದು ಹೇಳಿದರು. ದರ್ಶನ್ ಮತ್ತು ಆತನ ಸಂಗಡಿಗರಲ್ಲಿ ಯಾರಿಗೂ ಮನುಷ್ಯತ್ವವೇ ಇಲ್ಲವೇ?, ಅಷ್ಟು ಅಂಗಲಾಚಿದರೂ ಕೊಂದು ಹಾಕಿದ್ದಾರೆ ಎಂದರೆ ಇವರನ್ನು ಮನುಷ್ಯರು ಎನ್ನಬೇಕೇ? ಎಂದು ತಮ ದುಃಖ ತೋಡಿಕೊಂಡರು.
ಇದೇ ವೇಳೆ ಮಾತನಾಡಿದ ರೇಣುಕಾಸ್ವಾಮಿಯವರ ಸಹೋದರಿ ಸುಚಿತ್ರಾ, ದರ್ಶನ್ ಅವರು ರೇಣುಕಾಸ್ವಾಮಿಯನ್ನು ಸಹೋದರ ಎಂದು ಭಾವಿಸಿ ಬುದ್ಧಿ ಹೇಳಿ ಬಿಟ್ಟುಕಳುಹಿಸಬಹುದಿತ್ತು. ಜೈಲಿಗೆ ಹೋದರೂ ದರ್ಶನ್ ಬದಲಾಗಿಲ್ಲ ಎಂದರೆ ದೇವರೇ ಬುದ್ಧಿ ಕೊಡಬೇಕು. ಕಾನೂನು ಯಾವ ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡುತ್ತೇವೆ ಎಂದರು.
ನನ್ನ ಸಹೋದರ ನರಳಿ ಪ್ರಾಣ ಭಿಕ್ಷೆ ಬೇಡಿದ ರೀತಿ ದರ್ಶನ್ ಕೂಡ ಜೀವ ಹಾಗೂ ಜೀವನಕ್ಕಾಗಿ ಅಂಗಲಾಚುವ ಪರಿಸ್ಥಿತಿ ಬರಬೇಕು. ರೇಣುಕಾಸ್ವಾಮಿಯ ಕೊನೆಕ್ಷಣದ ಫೋಟೊಗಳನ್ನು ನೋಡಿ ನಮ ತಂದೆ ಕುಸಿದುಹೋದರು. ಮತ್ತೊಮೆ ನನಗೆ ಆ ಫೋಟೊವನ್ನು ತೋರಿಸಬೇಡಿ ಎಂದು ಅಳಲಾರಂಭಿಸಿದರು. ನಮ ಕುಟುಂಬ ಎಂದಿಗೂ, ಯಾರ ಬಳಿಯೂ ಬೇಡಿರಲಿಲ್ಲ. ಆದರೆ ರೇಣುಕಾಸ್ವಾಮಿ ಕೊನೆಕ್ಷಣದಲ್ಲಿ ಅಂಗಲಾಚಿದ್ದರೂ ಬಿಡದೇ ಇರುವುದು ಘೋರ ಅನ್ಯಾಯ ಎಂದು ಹೇಳಿದರು.