ಮೈಸೂರು, ಸೆ.6– ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಅರಮನೆಗೆ ಆಗಮಿಸಿರುವ 2ನೇ ತಂಡದ ಐದು ಆನೆಗಳಿಗಿಂದು ತೂಕ ಪರೀಕ್ಷೆ ಮಾಡಲಾಗಿದ್ದು, ಸುಗ್ರೀವಾ 2ನೇ ಅತಿ ಹೆಚ್ಚು ಭಾರ ಹೊಂದಿದ್ದಾನೆ.ನಾಡ ಹಬ್ಬ ದಸರಾ ಮಹೋತ್ಸವದ ಸಿದ್ಧತೆಗಳು ಈಗಾಗಲೇ ಆರಂಭವಾಗಿದ್ದು, ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಮೊದಲ ಗಜಪಡೆಯು ಆ. 21ರಂದು ಅರಮನೆಗೆ ಆಗಮಿಸಿ ಈಗಾಗಲೇ ತಾಲೀಮಿನಲ್ಲಿ ನಿರತವಾಗಿವೆ.
ಈ ನಡುವೆ ಎರಡನೇ ತಂಡದ ಐದು ಆನೆಗಳು ವಿವಿಧ ಶಿಬಿರಗಳಿಂದ ಅರಮನೆ ಆವರಣ ತಲುಪಿದ್ದು, ಜಯಮಾರ್ತಾಂಡ ದ್ವಾರದ ಬಳಿ ಪೂಜೆ ಸಲ್ಲಿಸಿ ಸ್ವಾಗತಿಸಲಾಗಿದೆ. ಇಂದು ಬೆಳಗ್ಗೆ ಐದು ಆನೆಗಳಿಗೂ ತೂಕ ಪರೀಕ್ಷೆ ನಡೆಸಲಾಗಿದೆ.
ಪ್ರಶಾಂತ, ಹಿರಣ್ಯಾ, ಮಹೇಂದ್ರ, ದೊಡ್ಡ ಹರವೇಲಕ್ಷ್ಮೀ, ಸುಗ್ರೀವಾ ಆನೆಗಳು ಎರಡನೇ ತಂಡದಲ್ಲಿ ಬಂದಿದ್ದು, ಇದರಲ್ಲಿ ಸುಗ್ರೀವಾ 5190 ಕೆಜಿ ಹೊಂದಿದ್ದು, ಕ್ಯಾಪ್ಟನ್ ಅಭಿಮಾನ್ಯು ನಂತರ ಎರಡನೇ ಅತೀ ತೂಕದ ಆನೆಯಾಗಿದ್ದಾನೆ.
ಪ್ರಶಾಂತ 4875, ಹಿರಣ್ಯಾ 2930, ಮಹೇಂದ್ರ 4910, ದೊಡ್ಡಹರವೇಲಕ್ಷ್ಮೀ 3485 ತೂಕ ಹೊಂದಿದ್ದಾವೆ. ದೊಡ್ಡ ಹರವೇ ಆನೆ ಶಿಬಿರದಿಂದ ಲಕ್ಷ್ಮೀ ಆಗಮಿಸಿದ್ದು, ಕಳೆದ ಎರಡು ವರ್ಷಗಳಿಂದ ದಸರಾದಲ್ಲಿ ಪಾಲ್ಗೊಳ್ಳುತ್ತಿದ್ದು, ಸೌಮ್ಯ ಸ್ವಭಾವದ ಆನೆಯಾಗಿದೆ.
ರಾಮಪುರ ಆನೆ ಶಿಬಿರದಿಂದ ಹಿರಣ್ಯಾ(47) ಎಂಬ ಹೆಣ್ಣು ಆನೆಗೆ ಇದು ಎರಡನೇ ದಸರಾವಾಗಿದೆ. ದುಬಾರೆ ಆನೆ ಶಿಬಿರದಿಂದ ಆಗಮಿಸಿರುವ ಪ್ರಶಾಂತ(51) ಗಂಡಾನೆ ಕಳೆದ ಹದಿನಾಲ್ಕು ವರ್ಷದಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದು, ಈ ಆನೆ ಹುಲಿ ಹಾಗೂ ಕಾಡಾನೆಗಳ ಸೆರೆ ಕಾರ್ಯಾಚರಣೆಯಲ್ಲಿ ವಿಶೇಷ ಪರಿಣಿತಿ ಹೊಂದಿದ್ದಾನೆ.
ಸುಗ್ರೀವಾ(42) ಕೂಡ ದುಬಾರಿ ಆನೆ ಶಿಬಿರದಿಂದ ಆಗಮಿಸಿದ್ದು, ಈ ಆನೆಗೆ ಮೂರನೇ ದಸರಾವಾಗಿದೆ.ಮತ್ತಿಗೋಡು ಆನೆ ಶಿಬಿರದಿಂದ ಆಗಮಿಸಿರುವ ಮಹೇಂದ್ರನಿಗೆ ಇದು ಎರಡನೇ ದಸರಾವಾಗಿದೆ.ಇಂದು ಸಂಜೆಯಿಂದಲೇ ಎರಡನೇ ತಂಡದ ಆನೆಗಳು ತಾಲೀಮಿನಲ್ಲಿ ಭಾಗವಹಿಸಲಿದ್ದು, ಎಲ್ಲಾ ಆನೆಗಳು ಆರೋಗ್ಯವಾಗಿವೆ ಎಂದು ಡಿಸಿಎಫ್ ಪ್ರಭುಗೌಡ ತಿಳಿಸಿದ್ದಾರೆ.