Friday, September 20, 2024
Homeರಾಜ್ಯಸಿಂಡಿಕೇಟ್‌ ಸದಸ್ಯರ ನೇಮಕಾತಿಯಲ್ಲಿ ಭ್ರಷ್ಟಾಚಾರ : ಕಾಂಗ್ರೆಸ್‌‍ ಕಾರ್ಯಕರ್ತರ ಆರೋಪ

ಸಿಂಡಿಕೇಟ್‌ ಸದಸ್ಯರ ನೇಮಕಾತಿಯಲ್ಲಿ ಭ್ರಷ್ಟಾಚಾರ : ಕಾಂಗ್ರೆಸ್‌‍ ಕಾರ್ಯಕರ್ತರ ಆರೋಪ

Corruption in the appointment of syndicate members: Congress workers allege

ಬೆಂಗಳೂರು,ಸೆ.14- ವಿಶ್ವವಿದ್ಯಾಲಯ ಗಳಿಗೆ ಸಿಂಡಿಕೇಟ್‌ ಸದಸ್ಯರ ನೇಮಕಾತಿಯ ವೇಳೆ ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್‌‍ ಕಾರ್ಯಕರ್ತರು ಗಂಭೀರ ಆರೋಪ ಮಾಡಿ, ಆಕ್ರೋಶ ಹೊರಹಾಕಿದ ಘಟನೆ ಕೆಪಿಸಿಸಿ ಕಚೇರಿಯಲ್ಲಿ ನಡೆದಿದೆ.

ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌, ಶಾಲಾ ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರು ಪಕ್ಷದ ಕಚೇರಿಗೆ ಆಗಮಿಸಿ ಕಾರ್ಯಕರ್ತರ ಅಹವಾಲು ಸ್ವೀಕರಿಸಿದರು. ಈ ವೇಳೆ ಚಿಕ್ಕಬಳ್ಳಾಪುರದ ಸಮೀವುಲ್ಲಾ ಎಂಬುವರು ರಾಜ್ಯದ ಪ್ರಮುಖ ವಿಶ್ವವಿದ್ಯಾಲಯಗಳಿಗೆ ಸಿಂಡಿಕೇಟ್‌ ಸದಸ್ಯರನ್ನು ನೇಮಿಸುವಾಗ ಭ್ರಷ್ಟಾಚಾರ ನಡೆದಿದೆ, ಹಣ ಕೊಟ್ಟವರಿಗೆ ಹಾಗೂ ಬಿಜೆಪಿ ಪಕ್ಷದಲ್ಲಿರುವವರನ್ನು ಸಿಂಡಿಕೇಟ್‌ಗೆ ನೇಮಿಸಲಾಗಿದೆ. ನಾವು ಕಾಂಗ್ರೆಸ್‌‍ ಪಕ್ಷದಲ್ಲಿ 10 ರಿಂದ 20 ವರ್ಷ ದುಡಿದಿದ್ದೇವೆ. ತಳಮಟ್ಟದಿಂದ ಸಂಘಟನೆ ಮಾಡಿದ್ದೇವೆ. ಈಗ ನಿಮಗೆ ಬೇಕಾದವರಿಗೆ ಅವಕಾಶ ಮಾಡಿಕೊಡುವುದಾದರೆ ಹಗಲು-ರಾತ್ರಿ ದುಡಿದ ನಾವು ಎಲ್ಲಿಗೆ ಹೋಗಬೇಕು ಎಂದು ಸಚಿವ ಎಂ.ಸಿ.ಸುಧಾಕರ್‌ ವಿರುದ್ಧ ಆಕ್ರೋಶ ಹೊರಹಾಕಿದರು.

ಇದರಿಂದ ತಬ್ಬಿಬ್ಬಾದ ಸಚಿವ ಡಾ.ಸುಧಾಕರ್‌, ಸಿಂಡಿಕೇಟ್‌ಗೆ ಸದಸ್ಯರ ನೇಮಕಾತಿ ಉನ್ನತ ಶಿಕ್ಷಣ ಸಚಿವಾಲಯದಿಂದಾಗಿಲ್ಲ. ಮುಖ್ಯಮಂತ್ರಿ ಕಚೇರಿಯಿಂದ ನೇಮಕಾತಿಯಾಗಿದೆ ಎಂದು ಸಮಾಧಾನ ಪಡಿಸಿದರು. ಆದರೆ ಸಿಟ್ಟಿಗೆದ್ದ ಸಮೀವುಲ್ಲಾ ಟೇಬಲ್‌ ಕುಟ್ಟಿ ಆಕ್ರೋಶ ಹೊರಹಾಕಿದರು.

ಇದು ಪಕ್ಷದ ಕಚೇರಿಯಲ್ಲಿ ಕಾವೇರಿದ ವಾತಾವರಣ ನಿರ್ಮಿಸಿತ್ತು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಎಂ.ಸಿ.ಸುಧಾಕರ್‌, ಸಿಂಡಿಕೇಟ್‌ ಸದಸ್ಯರ ನೇಮಕಾತಿ ವಿಚಾರದಲ್ಲಿ ಕೆಲ ಕಾರ್ಯಕರ್ತರಿಗೆ ಅಸಮಾಧಾನವಿದೆ. ಕೆಲವರು ಬೇಸರ ಹಾಗೂ ನೋವನ್ನು ವ್ಯಕ್ತಪಡಿಸಿದ್ದಾರೆ. ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ನಮ ಇಲಾಖೆಯಲ್ಲಿ ಯಾವ ಸಮಸ್ಯೆಗಳೂ ಇಲ್ಲ. ಸಿಂಡಿಕೇಟ್‌ ನೇಮಕಾತಿಯಲ್ಲಿ ಬಿಜೆಪಿ, ಆರ್‌ಎಸ್‌‍ಎಸ್‌‍ ಬೆಂಬಲಿಗರಿಗೆ ಅವಕಾಶ ನೀಡಲಾಗಿದೆ ಎಂಬುದು ಸರಿಯಲ್ಲ. ಶಿಕ್ಷಣ ಕ್ಷೇತ್ರದಲ್ಲಿರುವವರನ್ನು ಪರಿಗಣಿಸಲಾಗಿದೆ. ಬಳ್ಳಾರಿ ಸೇರಿದಂತೆ ಹಲವು ಭಾಗಗಳಿಂದ ಆರೋಪಗಳು ಬಂದಿವೆ. ಸ್ಪಷ್ಟ ಮಾಹಿತಿ ನೀಡಿದರೆ ಅದನ್ನು ಸರಿಪಡಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.

ಸಿಂಡಿಕೇಟ್‌ಗಳ ನೇಮಕಾತಿಯಲ್ಲಿ ಈ ಹಿಂದೆ ರಾಜ್ಯಪಾಲರು ಬಿಜೆಪಿಯವರನ್ನು ಪರಿಗಣಿಸಿದ್ದರು. ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ನಮ ಇಲಾಖೆ ಹಾಗೂ ಮುಖ್ಯಮಂತ್ರಿ ಕಚೇರಿ ಮೇಲೆ ಒತ್ತಡವಿತ್ತು. ಮುಖ್ಯಮಂತ್ರಿಗಳ ಕಚೇರಿಗೆ ಮಾಹಿತಿ ನೀಡಿದ್ದೆವು. ಅಳೆದೂತೂಗಿ ನೇಮಕಾತಿಯಾಗಿದೆ ಎಂದು ಉತ್ತರಿಸಿದರು.

ಸಚಿವ ಮಧುಬಂಗಾರಪ್ಪ ಮಾತನಾಡಿ, ಇದು ಕಾರ್ಯಕರ್ತರ ಅಸಮಾಧಾನ ಸಹಜ. ಅದನ್ನು ದೊಡ್ಡದಾಗಿ ಬಿಂಬಿಸುವುದು ಬೇಡ. ನಾನು ಜೆಡಿಎಸ್‌‍ನಿಂದ ಬಂದವನು, ತಮೊಂದಿಗೆ ಕೆಲವರು ಕಾಂಗ್ರೆಸ್‌‍ಗೆ ಸೇರ್ಪಡೆಯಾಗಿದ್ದಾರೆ. ಅವರಿಗೂ ಮಾನ್ಯತೆ ನೀಡಬೇಕಾಗುತ್ತದೆ. ಹಾಗೆಂದ ಮಾತ್ರಕ್ಕೆ ಜೆಡಿಎಸ್‌‍ನವರಿಗೆ ಅವಕಾಶ ನೀಡಲಾಗಿದೆ ಎಂಬುದು ಸರಿಯಲ್ಲ, ಕಾರ್ಯಕರ್ತರ ಅಸಮಾಧಾನವನ್ನು ಪರಿಹರಿಸಲಾಗುತ್ತದೆ ಎಂದು ಹೇಳಿದರು.

RELATED ARTICLES

Latest News