ಬೆಂಗಳೂರು,ಸೆ.14– ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ಸಂಭವಿಸಿದ ಗಲಭೆಗೆ ಪೊಲೀಸರ ಕರ್ತವ್ಯ ವೈಫಲ್ಯವೇ ಕಾರಣ ಎಂಬುದು ಕೇಳಿಬರುತ್ತಿದೆ.
ಇದೇ ಪಟ್ಟಣದಲ್ಲಿ ಕಳೆದ ವರ್ಷವೂ ಸಹ ಗಣೇಶ ಮೂರ್ತಿ ಮೆರವಣಿಗೆ ಸಂದರ್ಭದಲ್ಲಿ ಗಲಾಟೆ ನಡೆದಿತ್ತು. ಅದನ್ನು ಗಮನದಲ್ಲಿಟ್ಟುಕೊಂಡು ಮೆರವಣಿಗೆ ಮಾರ್ಗ ಮತ್ತು ಪೊಲೀಸ್ ಭದ್ರತೆಯನ್ನು ಸೂಕ್ತ ರೀತಿಯಲ್ಲಿ ಮಾಡಬೇಕಿತ್ತು. ಈ ಬಗ್ಗೆ ಮುನ್ನೆಚ್ಚರಿಕೆ ಮತ್ತು ಸೂಕ್ತ ಪೊಲೀಸ್ ಸಿಬ್ಬಂದಿ ಭದ್ರತೆ ನಿಯೋಜಿಸಿಕೊಳ್ಳದಿರುವುದೇ ಗಲಭೆಗೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.
ಒಟ್ಟಾರೆ ನಾಗಮಂಗಲದ ಗಲಭೆ ಗಮನಿಸಿದರೆ ಇದು ಪೂರ್ವನಿಯೋಜಿತ ಕೃತ್ಯ ಎಂಬುದು ಕಂಡುಬರುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಪೆಟ್ರೋಲ್ ಬಾಂಬ್, ತಲ್ವಾರ್‌ಗಳು ಹಾಗೂ ಭಾರೀ ಪ್ರಮಾಣದ ಕಲ್ಲುಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದುದು.
ಇದರ ಜೊತೆಗೆ ಪೆಟ್ರೋಲ್ ಬಾಂಬ್ ಸಂಗ್ರಹಿಸುವ ಮೂಲಕ ಮೊದಲೇ ಗಲಭೆಗೆ ಬೇಕಾದ ವಸ್ತುಗಳನ್ನು ಗೌಪ್ಯವಾಗಿ ಇಟ್ಟುಕೊಂಡಿದ್ದರ ಜೊತೆಗೆ ಭಾರೀ ಸಂಖ್ಯೆಯಲ್ಲಿ ಯುವಕರು ಮಸೀದಿ ರಸ್ತೆ ಬಳಿ ಸೇರಿದ್ದರು ಎಂಬುದು ತಿಳಿದುಬಂದಿದೆ.
ಇಷ್ಟೆಲ್ಲ ನಡೆದರೂ ಸ್ಥಳೀಯ ಪೊಲೀಸರು ಎಚ್ಚೆತ್ತುಕೊಳ್ಳದೆ ಕರ್ತವ್ಯಲೋಪ ಎಸಗಿರುವ ಹಿನ್ನಲೆಯಲ್ಲಿ ಇಷ್ಟೆಲ್ಲ ಅನಾಹುತ ಸಂಭವಿಸಿದೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಪೊಲೀಸರು ಸೂಕ್ತ ರೀತಿಯಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ಬಂದೋಬಸ್ತ್‌ಗೆ ನಿಯೋಜಿಸಿಕೊಂಡು ಪೂರ್ವ ಸಿದ್ದತೆ ಮಾಡಿಕೊಂಡಿದ್ದರೆ ಗಲಭೆಯನ್ನು ತಡೆಗಟ್ಟಬಹುದಾಗಿತ್ತು.
ಆದರೆ ಸ್ಥಳೀಯ ಪೊಲೀಸರು ಮೈ ಮರೆತಿದ್ದಾರೆ. ಬದ್ರಿಕೊಪ್ಪಲು ಗ್ರಾಮದಿಂದ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಹೊರಟು ಮಂಡ್ಯ ವೃತ್ತಕ್ಕೆ ಬಂದಾಗ ಅನ್ಯಕೋಮಿನವರು ಖ್ಯಾತಿ ತೆಗೆದಿದ್ದಾರೆ. ಆ ಸಂದರ್ಭದಲ್ಲಿಯೇ ಯುವಕರಿಗೆ ತಿಳಿ ಹೇಳಿಬಹುದಿತ್ತು. ಆದರೆ ಅಲ್ಲೂ ಸಹ ಪೊಲೀಸರು ಕರ್ತವ್ಯ ಲೋಪವೆಸಗಿರುವುದು ಕಂಡುಬಂದಿದೆ.
ಹಾಗಾಗಿ ಮೆರವಣಿಗೆಯ ದಾರಿಯನ್ನು ಬದಲಿಸಿ ಮತ್ತೆ ಪ್ರಾರ್ಥನಾ ಮಂದಿರ ರಸ್ತೆಯಲ್ಲೇ ಮೆರವಣಿಗೆಗೆ ಅವಕಾಶ ನೀಡಿದ್ದರಿಂದ ಮೆರವಣಿಗೆ ಸಾಗುತ್ತಿದ್ದಂತೆ ವಿವಿಧ ಘೋಷಣೆಗಳು ಮೊಳಗಿದಾಗ ಏಕಾಏಕಿ ಕಲ್ಲು ತೂರಾಟ ನಡೆದು ಗಲಭೆಗೆ ಕಾರಣವಾಗಿದೆ.
ಕಳೆದ ಬಾರಿ ಪ್ರತಿಭಟನೆ ನಡೆದ ಅಂಶವನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ಗಣೇಶಮೂರ್ತಿ ಮೆರವಣಿಗೆ ಯಾವ ರಸ್ತೆಯಲ್ಲಿ ಹೋಗಬೇಕು, ಎಷ್ಟು ಮಂದಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಬೇಕು ಎಂಬುದನ್ನು ಮೊದಲೇ ಸಿದ್ದತೆ ಮಾಡಿಕೊಂಡಿದ್ದರೆ ಗಲಾಟೆ ತಪ್ಪಿಸಬಹುದಿತ್ತು.
ಮತ್ತೊಂದೆಡೆ ಪ್ರತಿಭಟನಾ ಯುವಕರಿಗೆ ಮಂಡ್ಯ ವೃತ್ತದ ಬಳಿ ತಿಳಿ ಹೇಳಿ ಮನವೊಲಿಸಿದ್ದರೆ ಗಲಭೆ ಆಗುತ್ತಿರಲಿಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಒಟ್ಟಾರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗಮಂಗಲ ಟೌನ್ ಠಾಣೆ ಇನ್‌ಸ್ಪೆಕ್ಟರ್ ಅಶೋಕ್ ಕುಮಾರ್ ಅವರ ತಲೆದಂಡವಾಗಿದೆ.