ಲಖ್ನೋ,ಸೆ.16– ವಾರಣಾಸಿಯ ಕಾಶಿ ವಿಶ್ವನಾಥನ ಹಿಂದಿಕ್ಕಿದ ಅಯೋಧ್ಯೆಯ ಶ್ರೀರಾಮಮಂದಿರಕ್ಕೆ ಈ ವರ್ಷದ ಆರಂಭಿಕ ಆರು ತಿಂಗಳಲ್ಲೇ 11 ಕೋಟಿಗೂ ಹೆಚ್ಚು ಭಕ್ತರು ಆಗಮಿಸಿ ಬಾಲರಾಮನ ದರ್ಶನ ಪಡೆದಿದ್ದಾರೆ. ಅಯೋಧ್ಯಗೆ ಹೋಲಿಸಿದರೆ ಕಾಶಿಗೆ ಭೇಟಿ ಕೊಟ್ಟ ಭಕ್ತರ ಸಂಖ್ಯೆ 4.61 ಕೋಟಿಯಷ್ಟಿದೆ ಎಂದು ಉತ್ತರಪ್ರದೇಶದ ಪ್ರವಾಸೋದ್ಯಮ ಇಲಾಖೆ ಅಂಕಿಅಂಶವನ್ನು ಬಹಿರಂಗಗೊಳಿಸಿದೆ.
ರಾಜ್ಯಕ್ಕೆ ಕಳೆದ ಆರು ತಿಂಗಳಲ್ಲಿ ಭೇಟಿ ನೀಡಿದ ಪ್ರವಾಸಿಗರ ಅಂಕಿ ಅಂಶ ತೆರೆದಿಟ್ಟಿರುವ ಪ್ರವಾಸೋದ್ಯಮ ಇಲಾಖೆ, ಈ ಆರು ತಿಂಗಳಲ್ಲಿ ಅಯೋಧ್ಯ ಹಾಗೂ ಕಾಶಿ ಸೇರಿಸಿ ಒಟ್ಟು ಉತ್ತರಪ್ರದೇಶಕ್ಕೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ ಒಟ್ಟಾರೆಯಾಗಿ 33 ಕೋಟಿಗೆ ತಲುಪಿದೆ.
ಒಟ್ಟು 32 ಕೋಟಿ 98 ಲಕ್ಷ 18 ಸಾವಿರದ 122 ಮಂದಿ ಭಕ್ತರು ಈ ಭಾರಿ ಉತ್ತರಪ್ರದೇಶದ ಹಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದಾರೆ. 2022ಕ್ಕೆ ಹೋಲಿಕೆ ಮಾಡಿ ನೋಡಿದಾಗ, ಉತ್ತರಪ್ರದೇಶಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗಿದೆ.
2022ರ ಇಡೀ ವರ್ಷದಲ್ಲಿ ಉತ್ತರಪ್ರದೇಶಕ್ಕೆ ಭೇಟಿ ನೀಡಿದ ಭಕ್ತರ ಸಂಖ್ಯೆ ಒಟ್ಟು 31.86 ಕೋಟಿ ಎಂದು ಉತ್ತರಪ್ರದೇಶದ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಇಲಾಖೆಯ ಸಚಿವ ಜೈವೀರ್ ಸಿಂಗ್ ಹೇಳಿದ್ದಾರೆ.