Monday, November 25, 2024
Homeರಾಜ್ಯಶಾಸಕ ಮುನಿರತ್ನ ಜಾಮೀನು ಭವಿಷ್ಯ ನಾಳೆ ನಿರ್ಧಾರ

ಶಾಸಕ ಮುನಿರತ್ನ ಜಾಮೀನು ಭವಿಷ್ಯ ನಾಳೆ ನಿರ್ಧಾರ

MLA Munirathna bail plea

ಬೆಂಗಳೂರು,ಸೆ.18- ಬಿಬಿಎಂಪಿ ಗುತ್ತಿಗೆ ದಾರರಿಗೆ ಜಾತಿ ನಿಂದನೆ, ಪ್ರಾಣ ಬೆದರಿಕೆ ಹಾಕಿದ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ರಾಜರಾಜೇಶ್ವರಿನಗರ ಕ್ಷೇತ್ರದ ಶಾಸಕ ಮುನಿರತ್ನ ನಾಯ್ಡು ಜಾಮೀನು ಭವಿಷ್ಯ ನಾಳೆ ನಿರ್ಧಾರವಾಗಲಿದೆ.

ಮುನಿರತ್ನ ಪ್ರಕರಣದ ವಾದ-ಪ್ರತಿವಾದವನ್ನು ಆಲಿಸಿದ ಬೆಂಗಳೂರಿನ 82ನೇ ಎಸಿಸಿಎಂ ನ್ಯಾಯಾಲಯದ ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ಅವರು ತೀರ್ಪನ್ನು ನಾಳೆಗೆ ಕಾಯ್ದಿರಿಸಿದ್ದಾರೆ. ನ್ಯಾಯಾಲಯ ನೀಡುವ ತೀರ್ಪಿನ ಮೇಲೆ ಮುನಿರತ್ನ ಬಿಡುಗಡೆ ಭವಿಷ್ಯ ನಿರ್ಧಾರವಾಗಲಿದೆ.

ಇದಕ್ಕೂ ಮುನ್ನ ಶಾಸಕ ಮುನಿರತ್ನ ಪರ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ಹಾಗೂ ಸರ್ಕಾರದ ಪರ ವಿಶೇಷ ಸಾರ್ವಜನಿಕ ಅಭಿಯೋಜಕ(ಎಸ್ಪಿಪಿ) ಪ್ರದೀಪ್ ಪ್ರಬಲ ವಾದ ಮಂಡಿಸಿದರು.

ಮೊದಲು ಮುನಿರತ್ನ ಪರ ವಾದ ಮಂಡಿಸಿದ ಅಶೋಕ್ ಹಾರನಹಳ್ಳಿಯವರು, ಪೊಲೀಸರು ತಮ ಕಕ್ಷಿದಾರರಿಗೆ ಕನಿಷ್ಟ ನೋಟಿಸ್ ಕೊಡದೆ ಬಂಧಿಸಿದ್ದಾರೆ. ಅಷ್ಟಕ್ಕೂ ಅವರೇನು ದೇಶಬಿಟ್ಟು ಹೋಗುತ್ತಿರಲಿಲ್ಲ. ವಿಚಾರಣೆಗೆ ಬರುವಂತೆ ಸೂಚಿಸಿದ್ದರೆ ಹಾಜರಾಗುತ್ತಿದ್ದರು. ಪೊಲೀಸರು ಆತುರದಲ್ಲಿ ಬಂಧಿಸಿದ್ದಾರೆಂದು ವಾದಿಸಿದರು.

ಈ ಪ್ರಕರಣ ನಡೆದಿರುವುದು ಶಾಸಕರ ಕಚೇರಿಯಲ್ಲಿ ಸಾರ್ವಜನಿಕವಾಗಿ ಯಾವುದೇ ಒಬ್ಬ ವ್ಯಕ್ತಿಯನ್ನು ನಿಂದಿಸುವುದು, ಉದ್ದೇಶಪೂರ್ವಕವಾಗಿ ಅಪಮಾನ ಮಾಡುವುದು ಕಂಡುಬಂದರೆ ಜಾತಿ ನಿಂದನೆ ಪ್ರಕರಣ ದಾಖಲಿಸಬಹುದು. ಕಚೇರಿಯೊಳಗೆ ನಡೆದಿರುವ ಸಂಭಾಷಣೆ ಆಧಾರದ ಮೇಲೆ ಪ್ರಕರಣ ದಾಖಲಿಸಿರುವುದು ಸರಿಯಲ್ಲ ಎಂದು ನ್ಯಾಯಮೂರ್ತಿಗಳ ಗಮನಕ್ಕೆ ತಂದರು.

ಇಲ್ಲಿ ಗುತ್ತಿಗೆದಾರರಾಗಿರುವ ಚೆಲುವರಾಜು ಅವರು ತಮ ಕಕ್ಷಿದಾರರ ಜೊತೆ ನಡೆಸಿರುವ ಮೊಬೈಲ್ ಸಂಭಾಷಣೆಯನ್ನು ದಾಖಲಿಸಿಕೊಂಡು ಸಾರ್ವಜನಿಕವಾಗಿ ಹಂಚಿದ್ದಾರೆ. ಅಂದರೆ ಅವರ ಉದ್ದೇಶವೇ ಈ ಪ್ರಕರಣದಲ್ಲಿ ಶಾಸಕರನ್ನು ಸಿಲುಕಿಸಬೇಕೆಂಬ ಹುನ್ನಾರವಿದೆ. ನಾವು ವಿಚಾರಣೆಗೆ ಸಂಪೂರ್ಣ ಸಹಕಾರ ಕೊಡುತ್ತೇವೆ. ಹೀಗಾಗಿ ನ್ಯಾಯಾಲಯ ಜಾಮೀನು ಮಂಜೂರು ಮಾಡುವಂತೆ ಕೋರಿದರು.

ಮೂರನೇ ವ್ಯಕ್ತಿಯ ಮುಂದೆ ನಿಂದನೆ ಮಾಡಿದಾಗ ಜಾತಿ ನಿಂದನೆ ಪ್ರಕರಣವನ್ನು ದಾಖಲಿಸಲಿ. ಇಲ್ಲಿ ಇಬ್ಬರ ನಡುವೆ ಮಾತ್ರ ಮಾತುಕತೆ ನಡೆದಿದೆ. ಅದನ್ನೇ ದೊಡ್ಡ ವಿವಾದದಂತೆ ಬಿಂಬಿಸಲಾಗುತ್ತಿದೆ. ಹೀಗಾಗಿ ಅವರು ಜಾಮೀನು ಪಡೆಯಲು ಅರ್ಹರು ಎಂದು ವಾದಿಸಿದರು.

ಇದಕ್ಕೆ ತೀವ್ರ ಆಕ್ಷೇಪಿಸಿದ ಸರ್ಕಾರಿ ಪರ ಅಭಿಯೋಜಕ ಪ್ರದೀಪ್ ಅವರು, ಶಾಸಕರ ಕೊಠಡಿ ಸಾರ್ವಜನಿಕರ ವ್ಯಾಪ್ತಿಗೆ ಒಳಪಡುತ್ತದೆ. ಅವರು ದುರದ್ದೇಶಪೂರ್ವಕವಾಗಿಯೇ ಜಾತಿ ನಿಂದನೆ ಮಾಡಿ ಪ್ರಾಣ ಬೆದರಿಕೆ ಹಾಕಿದ್ದಾರೆ. ಇನ್ನು ಕೆಲವರು ಮಾಹಿತಿಗಳನ್ನು ಬಹಿರಂಗಪಡಿಸಲು ಸಾಧ್ಯವಾಗಿಲ್ಲ ಎಂದರು.

ಜಾತಿ ನಿಂದನೆ ಮಾಡಿದಾಗ ಸೆಕ್ಷನ್ 17ರಡಿ ನೋಟಿಸ್ ನೀಡದೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಬಹುದು. ಅಗತ್ಯವಿದ್ದರೆ ತನಿಖಾಧಿಕಾರಿಗಳು ಬಂಧಿಸಬಹುದು. ಇಲ್ಲಿ ಪೊಲೀಸರ ಕ್ರಮ ಕಾನೂನಿನ ಪ್ರಕಾರವಾಗಿಯೇ ನಡೆದಿದೆ ಎಂದು ಸಮರ್ಥಿಸಿಕೊಂಡರು.

ಮುನಿರತ್ನ ಜೈಲಿನಿಂದ ಹೊರಗೆ ಬಂದರೆ ದೂರುದಾರರಿಗೆ ಮತ್ತೆ ಪ್ರಾಣಬೆದರಿಕೆ ಹಾಕುವುದಿಲ್ಲ ಎನ್ನುವುದಕ್ಕೆ ಗ್ಯಾರಂಟಿಯಾದರೂ ಏನು? ಸಾಕ್ಷಿದಾರರ ಮೇಲೆ ಪ್ರಭಾವ ಬೀರುವುದಿಲ್ಲವೇ? ಹೀಗಾಗಿ ಅವರಿಗೆ ಯಾವುದೇ ಕಾರಣಕ್ಕೂ ಜಾಮೀನು ಕೊಡಬಾರದು.
ಪ್ರಕರಣವು ತನಿಖಾ ಹಂತದಲ್ಲಿರುವಾಗ ಜಾಮೀನು ನೀಡದರೆ ಅವರು ಯಾರ ಮೇಲೂ ಪ್ರಭಾವ ಬೀರಬಹುದು.

ಮುನಿರತ್ನ ಹಿನ್ನಲೆ ಏನೆಂಬುದು ಎಲ್ಲರಿಗೂ ಗೊತ್ತಿದೆ. ಅವರ ಮೇಲೆ ಈಗಾಗಲೇ 8 ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಜಾಮೀನು ನೀಡದಂತೆ ಪ್ರದೀಪ್ ಅವರು ನ್ಯಾಯಾಧೀಶರಿಗೆ ಮನವಿ ಮಾಡಿದರು.

RELATED ARTICLES

Latest News