Sunday, November 24, 2024
Homeರಾಜ್ಯಮುನಿರತ್ನ ಪ್ರಕರಣದಲ್ಲಿ ದ್ವೇಷ ರಾಜಕಾರಣ ಮಾಡಿಲ್ಲ : ಗೃಹಸಚಿವ ಪರಮೇಶ್ವರ್

ಮುನಿರತ್ನ ಪ್ರಕರಣದಲ್ಲಿ ದ್ವೇಷ ರಾಜಕಾರಣ ಮಾಡಿಲ್ಲ : ಗೃಹಸಚಿವ ಪರಮೇಶ್ವರ್

No hate politics in Munirath's case: Home Minister Parameshwar

ಬೆಂಗಳೂರು,ಸೆ.19- ಜನಪ್ರತಿನಿಧಿಯಾಗಿ ಶಾಸಕ ಮುನಿರತ್ನ ಅವರು ಮಾಡಿರುವ ಕೃತ್ಯಗಳ ವಿರುದ್ಧ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಅದರ ಅನುಸಾರ ಪ್ರಕರಣ ದಾಖಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ನನ್ನ ಬಳಿ ಹೆಚ್ಚಿನ ಮಾಹಿತಿ ಇಲ್ಲ. ಹಾಗಾಗಿ ವ್ಯಾಪಕ ವಿವರಣೆ ನೀಡುವುದಿಲ್ಲ ಎಂದರು.

ದೂರಿನಲ್ಲಿ ನಮೂದಿಸಿರುವಂತಹ ಕೃತ್ಯ ಮಾಡುವುದನ್ನು ಯಾರೂ ಒಪ್ಪಿಕೊಳ್ಳುವುದಿಲ್ಲ. ಅದರಲ್ಲೂ ಜನಪ್ರತಿನಿಧಿಗಳಾಗಿ ಕಾನೂನುಬಾಹಿರವಾಗಿ ಈ ರೀತಿ ಕೆಲಸಗಳನ್ನು ಮಾಡಿದ್ದಾರೆ ಎಂದರೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
ನಾವು ಯಾವುದೇ ದ್ವೇಷದ ರಾಜಕಾರಣ ಮಾಡಿಲ್ಲ. ನಾಗಮಂಗಲದ ಗಲಭೆ ವಿಚಾರವಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಹಾಗೂ ಮತ್ತಿತರರು ನೀಡಿರುವ ಹೇಳಿಕೆಗಳಿಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ. ನಾವು ಕಾನೂನುಬಾಹಿರವಾಗಿ ಯಾವುದನ್ನೂ ಮಾಡುವುದಿಲ್ಲ. ದ್ವೇಷ ರಾಜಕಾರಣ ನಮಗೆ ಅಗತ್ಯವೇ ಇಲ್ಲ ಎಂದರು.

ಒಂದು ದೇಶ, ಒಂದು ಚುನಾವಣೆ ವಿಚಾರವಾಗಿ ಇನ್ನಷ್ಟು ವಿಚಾರಣೆ ನಡೆಯಬೇಕು. ಕನಿಷ್ಠ 2/3 ರಾಜ್ಯಗಳ ಒಪ್ಪಿಗೆ ಬೇಕು. ಮಾಜಿ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರ ಉನ್ನತಾಧಿಕಾರ ಸಮಿತಿ ವರದಿ ನೀಡಿದೆ. ಮುಂದೆ ಯಾವ ರೀತಿ ಬೆಳವಣಿಗೆಯಾಗಲಿದೆ ಎಂದು ಕಾದುನೋಡಬೇಕಿದೆ.

ರಾಜ್ಯದ ಅಭಿಪ್ರಾಯ ಕೇಳಿದರೆ ಅದನ್ನು ವಿಧಾನಸಭೆಯಲ್ಲಿ ಚರ್ಚಿಸಬೇಕೇ, ಸಂಪುಟದಲ್ಲಿ ವಿಶ್ಲೇಷಣೆ ನಡೆಸಿ ಸರ್ಕಾರದ ಅಭಿಪ್ರಾಯ ಹೇಳಬಹುದೇ? ಎಂದೆಲ್ಲಾ ಕುರಿತು ಚರ್ಚಿಸಲಾಗುವುದು ಎಂದರು.

ವಿಶ್ವವಿದ್ಯಾಲಯಗಳಿಗೆ ಕುಲಪತಿಗಳನ್ನು ನೇಮಿಸುವ ವಿಚಾರವಾಗಿ ಹಲವು ರಾಜ್ಯಗಳಲ್ಲಿ ಬೇರೆ ಬೇರೆ ರೀತಿಯ ವ್ಯವಸ್ಥೆಗಳಿವೆ. ಗುಜರಾತ್ಸರ್ಕಾರ ರಾಜ್ಯಪಾಲರನ್ನು ಕೇವಲ ಸೆರೋನಿಯಲ್ ಎಂದು ಪರಿಗಣಿಸಿದೆ. ಉಳಿದಂತೆ ಆಡಳಿತಾತಕವಾಗಿ ರಾಜ್ಯಪಾಲರು ಯಾವುದೇ ನಿರ್ಧಾರ ತೆಗೆದುಕೊಳ್ಳಲು ಅವಕಾಶ ಇಲ್ಲ. ಈ ಹಿಂದೆ ತಾವು ಉನ್ನತ ಶಿಕ್ಷಣ ಸಚಿವರಾಗಿದ್ದಾಗ ಕುಲಪತಿ ನೇಮಕದ ಅಧಿಕಾರವನ್ನು ಮೊಟಕುಗೊಳಿಸಲಾಗಿತ್ತು.

ಕರ್ನಾಟಕ ಒಂದೇ ಈ ರೀತಿಯ ಕ್ರಮಗಳನ್ನು ಕೈಗೊಂಡಿಲ್ಲ. ಹಾಗಾಗಿ ಇದನ್ನು ರಾಜ್ಯಪಾಲರ ವಿರುದ್ಧದ ಸೇಡು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಅಭಿಯೋಜನೆಗೆ ಪೂರ್ವಾನುಮತಿ ಸೇರಿದಂತೆ ಹಲವಾರು ಸಂದರ್ಭಗಳಲ್ಲಿ ರಾಜ್ಯಪಾಲರು ಸರ್ಕಾರಕ್ಕೆ ಸ್ಪಷ್ಟನೆಗಳನ್ನು ಕೇಳುತ್ತಾರೆ. ಕಾಲಕಾಲಕ್ಕೆ ಆಡಳಿತ ವ್ಯವಸ್ಥೆ ಕೂಡ ಇದಕ್ಕೆ ಮಾಹಿತಿಯನ್ನು ಒದಗಿಸಲಿದೆ. ಇದರಲ್ಲಿ ಯಾವುದೇ ವಿಶೇಷಗಳಿರುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ರವರು ದೆಹಲಿಗೆ ಭೇಟಿ ನೀಡಿರುವ ವಿಚಾರ ನನಗೆ ಗೊತ್ತಿಲ್ಲ. ನಾನು ಅವರ ದೈನಂದಿನ ಪ್ರವಾಸ ಕಾರ್ಯಕ್ರಮಗಳನ್ನು ಗಮನಿಸುವುದಿಲ್ಲ. ಪಕ್ಷದ ಅಧ್ಯಕ್ಷರು ಎಂಬ ಕಾರಣಕ್ಕೆ ಹೈಕಮಾಂಡ್ ಹಲವು ಸಲಹೆ, ಸೂಚನೆಗಳನ್ನು ನೀಡುತ್ತಿರುತ್ತದೆ. ಈ ಹಿಂದೆ ತಾವು ಅಧ್ಯಕ್ಷರಾಗಿದ್ದಾಗಲೂ ಹಲವು ಬಾರಿ ದೆಹಲಿಗೆ ಹೋಗಿದ್ದೆವು ಎಂದು ಹೇಳಿದರು.

ಮಾದಕವಸ್ತುಗಳ ಹಾವಳಿಯನ್ನು ಮಟ್ಟ ಹಾಕಲು ಈ ಹಿಂದೆ 2013 ರಿಂದ 2018ರವರೆಗಿನ ಸರ್ಕಾರದಲ್ಲೂ ಹಲವು ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಕಳೆದ ಒಂದೂವರೆ ವರ್ಷದಿಂದೀಚೆಗೆ ಸಮರೋಪಾದಿಯಲ್ಲಿ ಕ್ರಮಗಳನ್ನು ಜರುಗಿಸಲಾಗಿದೆ. ನೂರಾರು ಕೋಟಿ ರೂ. ಮಾದಕವಸ್ತುಗಳನ್ನು ಜಪ್ತಿ ಮಾಡಿ ನಾಶಪಡಿಸಲಾಗಿದ್ದು, ಪ್ರಕರಣ ದಾಖಲಿಸಲಾಗಿದೆ. ಸಾವಿರಕ್ಕೂ ಹೆಚ್ಚು ಜನರಿಗೆ ಶಿಕ್ಷೆ ಕೊಡಿಸಲಾಗಿದೆ ಎಂದರು.

ಇತ್ತೀಚೆಗೆ ಹಾಸ್ಟೆಲ್ಗಳಲ್ಲಿ, ಕಾಲೇಜುಗಳಲ್ಲಿ ಈ ಪಿಡುಗು ಹೆಚ್ಚುತ್ತಿದೆ ಎಂಬ ವರದಿ ಇದೆ. ಅದಕ್ಕಾಗಿ ಕಡಿವಾಣ ಹಾಕಲು ತಮ ನೇತೃತ್ವದಲ್ಲಿ ವಿಶೇಷ ಕಾರ್ಯಪಡೆ ರಚಿಸಲಾಗಿದೆ. ಹಲವು ಸಚಿವರು ಸದಸ್ಯರಾಗಿದ್ದು, ಮಾದಕವಸ್ತುಗಳ ನಿಯಂತ್ರಣಕ್ಕೆ ತೀವ್ರ ನಿಗಾ ವಹಿಸಲಾಗಿದೆ ಎಂದು ಹೇಳಿದರು.

RELATED ARTICLES

Latest News