Friday, September 20, 2024
Homeರಾಜ್ಯಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಿಡಿಕೇಡಿಗಳಿಂದ ಕಲ್ಲು ತೂರಾಟ, ದಾವಣಗೆರೆ ಉದ್ವಿಘ್ನ

ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಿಡಿಕೇಡಿಗಳಿಂದ ಕಲ್ಲು ತೂರಾಟ, ದಾವಣಗೆರೆ ಉದ್ವಿಘ್ನ

Six Injured In Stone Pelting During Ganesha Idol Immersion Procession In Davanagere

ದಾವಣಗೆರೆ, ಸೆ.20– ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ಕಲ್ಲುತೂರಾಟ ನಡೆಸಿ ದಾಂಧಲೆ ನಡೆಸಿದ ಘಟನೆ ಮಾಸುವ ಮುನ್ನವೇ ರಾತ್ರಿ ಇಲ್ಲಿನ ಇಮಾಂನಗರದಲ್ಲಿ ಕಲ್ಲುತೂರಾಟ ನಡೆಸಿ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದಾರೆ.

ಈ ಘಟನೆಯಿಂದ ನಗರಾದಾದ್ಯಂತ ಭಯದ ವಾತಾವರಣ ಮನೆ ಮಾಡಿದ್ದು, ಕಲ್ಲು ತೂರಾಟ ನಡೆದ ಇಮಾಂ ನಗರದಲ್ಲಿ ರಸ್ತೆಯುದ್ದಕ್ಕೂ ಪೊಲೀಸರು ಬಿಗಿ ಬಂದೋಬಸ್ತ್‌ ಮಾಡಿದ್ದಾರೆ.

ಸ್ಥಳೀಯ ಪೊಲೀಸರ ಜೊತೆಗೆ ಹಾವೇರಿ, ಶಿವಮೊಗ್ಗ ಜಿಲ್ಲೆಗಳ ರಿಸರ್ವ್‌ ಪೊಲೀಸ್‌‍ ತುಕಡಿಗಳು ಸ್ಥಳದಲ್ಲಿ ಬೀಡುಬಿಟ್ಟು, ರಾತ್ರಿಯಿಡೀ ನಿದ್ದೆಗೆಟ್ಟು ಗಸ್ತು ನಡೆಸಿವೆ. ಕೆಲ ಕಾಲ ಈ ಪ್ರದೇಶದಲ್ಲಿ ಉದ್ವಿಘ್ನ ವಾತಾವರಣ ಉಂಟಾಗಿದ್ದು, ಪ್ರಸ್ತುತ ನಗರ ಬೂದಿ ಮುಚ್ಚಿದ ಕೆಂಡದಂತಿದೆ.

ಸ್ಥಳದಲ್ಲಿ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿರುವ ಎಸ್ಪಿ ಉಮಾ ಅವರು, ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ.ಈ ಘಟನೆಯಿಂದಾಗಿ ಜನ ಜಂಗುಳಿಯಿಂದ ತುಂಬಿರುತ್ತಿದ್ದ ಇಮಾಂ ನಗರದ ಜನನಿಬಿಡ ರಸ್ತೆಗಳು ಬೆಳ್ಳಂಬೆಳ್ಳಗ್ಗೆ ಖಾಲಿಖಾಲಿಯಾಗಿದ್ದು ಬಿಕೊ ಎನ್ನುತ್ತಿವೆ.

ಇಲ್ಲಿರುವ ಮಸೀದಿ ಬಳಿ 10ಕ್ಕೂ ಹೆಚ್ಚು ಪೊಲೀಸ್‌‍ ವಾಹನಗಳನ್ನು ಸ್ಥಳದಲ್ಲಿರಿಸಿ ಬಿಗಿ ಭದ್ರತೆ ಒದಗಿಸಲಾಗಿದೆ. ಹಾಗೆಯೇ ಬೆಳಗಿನ ಜಾವ 5 ಗಂಟೆಗೆ ವ್ಯಾಪಾರ ವಹಿವಾಟಿಗೆ ತೆರಳುತಿದ್ದ ಜನರು ತಡವಾಗಿ ಹೊರಬರುತ್ತಿದ್ದು ನಾಗರಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಬೇತೂರು ರಸ್ತೆಯಲ್ಲಿ ನಿನ್ನೆ ಸಂಜೆ ಗಣೇಶಮೂರ್ತಿ ವಿಸರ್ಜನೆ ವೇಳೆ ಏಕಾಏಕಿ ಮೆರವಣಿಗೆ ಮೇಲೆ ಕಿಡಿಗೇಡಿಗಳು ಕಲ್ಲುತೂರಾಟ ಮಾಡಿದ್ದಾರೆ. ನಗರದ ಅರಳಿಮರ ಸರ್ಕಲ್‌ ಬಳಿ ಮೊದಲು ಕಲ್ಲು ತೂರಾಟ ಶುರುವಾಗಿದ್ದು, ಬಳಿಕ ಕೆ.ಆರ್‌ ರಸ್ತೆ, ಹಂಸಬಾವಿ ಸರ್ಕಲ್‌, ಕೆಆರ್‌ ಮಾರ್ಕೆಟ್‌ ಸೇರಿದಂತೆ ಬಂಬೂ ಬಜಾರ್‌ ರಸ್ತೆ, ಮಟ್ಟಿಕಲ್ಲು ಏರಿಯಾದಲ್ಲಿಯೂ ಕಲ್ಲುತೂರಾಟ ನಡೆದಿದೆ.

ತಕ್ಷಣವೇ ಘಟನಾಸ್ಥಳಕ್ಕೆ ಆಗಮಿಸಿದ ಪೊಲೀಸರು ಎಷ್ಟೇ ನಿಯಂತ್ರಿಸಿದರೂ ಪೊಲೀಸರ ಎದುರೇ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರಿಂದ ಪೊಲೀಸರು ಪೊಲೀಸರು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.

ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಆಗಮಿಸುತ್ತಿದ್ದಂತೆ ಕಿಡಿಗೇಡಿಗಳು ಅಲ್ಲಿಂದ ಪಾರಾಗಿ, ಏರಿಯಾಗಳಿಗೆ ನುಗ್ಗಿ, ಮಟ್ಟಿಕಲ್ಲು, ಅನೆಕೊಂಡ ಪ್ರದೇಶದ ಮನೆಗಳ ಕಿಟಕಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಗಾಬರಿಯಾಗಿ ನಿವಾಸಿಗಳು ಮನೆಗಳಿಂದ ಹೊರಗೆ ಬಂದು ದೊಣ್ಣೆ ಹಿಡಿದು ಓಡಿಸಿದ್ದಾರೆ.

ಸುಮಾರು 60 ರಿಂದ 70 ಯುವಕರ ಗುಂಪುಗಳು ಹಲವು ಕಡೆಗಳಲ್ಲಿ ಕಲ್ಲು ತೂರಾಟ ನಡೆಸಿದ್ದಲ್ಲದೆ, ಮನೆ ಮುಂಭಾಗದಲ್ಲಿ ನಿಲ್ಲಿಸಿದಂತಹ ವಾಹನಗಳಿಗೆ ಹಾನಿ ಮಾಡಿದ್ದಾರೆ.
ಏಕಾಎಕಿ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದ ಹಿನ್ನಲೆ ಭಯದ ವಾತಾವರಣ ಸೃಷ್ಟಿಯಾಗಿದೆ. ಮನೆಗಳಿಗೂ ಕೂಡ ಬೀಗ ಹಾಕಿಕೊಂಡು ನಿವಾಸಿಗಳು ಬೇರೆಡೆ ಹೋಗಿದ್ದಾರೆ.

ಬಂಧನ:
ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಿದ 20ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿ ಉಳಿದವರಿಗಾಗಿ ಶೋಧ ನಡೆಸುತ್ತಿದ್ದಾರೆ.ಒಟ್ಟಾರೆ ನಗರದ ಇಮಾಂನಗರ ಬೂದಿ ಮುಚ್ಚಿದ ಕೆಂಡದಂತಾಗಿದ್ದು, ಭಯದ ವಾತಾವರಣ ಸೃಷ್ಟಿಯಾಗಿದೆ. ನಗರಾದಾದ್ಯಂತ ಪೊಲೀಸ್‌‍ ಸರ್ಪಗಾವಲು ಹಾಕಲಾಗಿದೆ.

30 ಮಂದಿ ಬಂಧನ:
ದಾವಣಗೆರೆಯಲ್ಲಿ ರಾತ್ರಿ ಗಣೇಶ ಮೂರ್ತಿ ವಿಸರ್ಜನಾ ವೇಳೆ ನಡೆದ ಘಟನೆಗೆ ಸಂಬಂಧಿಸಿದಂತೆ ಈ ತನಕ 30 ಮಂದಿಯನ್ನು ಬಂಧಿಸಲಾಗಿದೆ ಎಂದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್‌‍ ಮಹಾನಿರ್ದೇಶಕರಾದ ಹಿತೇಂದ್ರ ಅವರು ತಿಳಿಸಿದ್ದಾರೆ.

ಈ ಸಂಜೆಯೊಂದಿಗೆ ಮಾತನಾಡಿದ ಅವರು ಪರಿಸ್ಥಿತಿ ಸದ್ಯ ಶಾಂತಿಯುತವಾಗಿದೆ. ಸ್ಥಳದಲ್ಲಿ ಬಿಗಿ ಪೊಲೀಸ್‌‍ ಬಂದೋಬಸ್ತ್‌ ಮಾಡಲಾಗಿದ್ದು, ಎಸ್ಪಿ ಅವರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ ಎಂದರು.ಬೇರೆ ಜಿಲ್ಲೆಗಳಿಂದ ಹೆಚ್ಚುವರಿ ಪೊಲೀಸರನ್ನು ಹಾಗೂ ಕೆಎಸ್‌‍ಆರ್‌ಪಿ ತುಕಡಿಗಳನ್ನು ಕರೆಸಿಕೊಂಡು ಸ್ಥಳದಲ್ಲಿ ನಿಯೋಜಿಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಗಸ್ತಿನಲ್ಲಿದ್ದಾರೆ ಎಂದರು.

RELATED ARTICLES

Latest News