ಬೆಂಗಳೂರು, ಸೆ.20– ಬಿಜೆಪಿ ಶಾಸಕ ಮುನಿರತ್ನ ಅವರ ಹೊಸ ಮತ್ತು ಹಳೆಯ ಪ್ರಕರಣಗಳನ್ನು ಸಮಗ್ರವಾಗಿ ತನಿಖೆಗೊಳಪಡಿಸಲು ಎಸ್‌ಐಟಿ ರಚಿಸುವಂತೆ ಒಕ್ಕಲಿಗ ಸಮುದಾಯದ ಸಚಿವರು, ಶಾಸಕರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.
ಸಮುದಾಯದ ಹಿರಿಯ ನಾಯಕರು ಹಾಗೂ ಜನ ಪ್ರತಿನಿಧಿಗಳು ನಿನ್ನೆ ಸಭೆ ನಡೆಸಿ ಇತ್ತೀಚಿನ ರಾಜಕೀಯ, ಸಾಮಾಜಿಕ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದರು. ನಂತರ ಸಚಿವ ಕೃಷ್ಣಬೈರೇ ಗೌಡ ಅವರ ನೇತೃತ್ವದಲ್ಲಿ ಇಂದು ಬೆಳಗ್ಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದರು.ಸಚಿವರಾದ ಡಾ. ಎಂ.ಸಿ. ಸುಧಾಕರ್, ಶಾಸಕರಾದ ಶರತ್ ಬಚ್ಚೇಗೌಡ, ಡಾ. ರಂಗನಾಥ್, ಮಂಥರ್ ಗೌಡ, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಮುಖಂಡರಾದ ಮರಿ ತಿಬ್ಬೇಗೌಡ ಸೇರಿದಂತೆ ಮತ್ತಿತರರು ನಿಯೋಗದಲ್ಲಿದ್ದರು.
ಈ ಕುರಿತು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕೃಷಿ ಸಚಿವ ಚೆಲುವರಾಯ ಸ್ವಾಮಿ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದರು. ಇಷ್ಟು ದಿನ ನಾವು ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಹಗರಣಗಳ ತನಿಖೆ ನಂತರದ ಆದ್ಯತೆ ಎಂಬ ಧೋರಣೆಯಲ್ಲಿ ಕೆಲಸ ಮಾಡುತ್ತಿದ್ದೆವು. ಇನ್ನೂ ಮುಂದೆ ತನಿಖೆಗೆ ಮೊದಲ ಆದ್ಯತೆ, ನಂತರ ಅಭಿವೃದ್ಧಿ ಎಂಬ ನಿಲುವನ್ನು ಬದಲಾಯಿಸಿಕೊಂಡಿದ್ದೇವೆ ಎಂದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಯಲ್ಲಿದ್ದ ಕಾರಣ ನಿನ್ನೆ ಸಭೆಗೆ ಬರಲು ಸಾಧ್ಯವಾಗಲಿಲ್ಲ. ಉಳಿದಂತೆ ಸಚಿವರು, ಶಾಸಕರು ಸೇರಿ 40ಕ್ಕೂ ಹೆಚ್ಚು ಮಂದಿ ಸಭೆಯಲ್ಲಿ ಭಾಗವಹಿಸಿದ್ದೆವು.ಇವತ್ತಿನ ಪರಿಸ್ಥಿತಿಯಲ್ಲಿ ಬಿಜೆಪಿ-ಜೆಡಿಎಸ್ ಪಕ್ಷಗಳು ನಡೆಸುತ್ತಿರುವ ಅನಗತ್ಯ ವಿಚಾರಗಳ ಬಗ್ಗೆಯೂ ಪ್ರಸ್ತಾಪವಾಗಿದೆ.
ಒಕ್ಕಲಿಗ ಸಮುದಾಯದ ಮುಖಂಡರು ಪಕ್ಷ ಮತ್ತು ಸರ್ಕಾರದ ಜೊತೆಗೆ ದೃಢವಾಗಿ ನಿಲ್ಲಬೇಕು. ಸಮುದಾಯದ ಸಂಘಟನೆ, ಅಭಿವೃದ್ಧಿ, ಮುಂದಿನ ಸ್ಥಳಿಯ ಸಂಸ್ಥೆಗಳ ಚುನಾವಣೆ ವಿಚಾರವಾಗಿ ಮತ್ತಷ್ಟು ಆಕ್ರಮಣಕಾರಿಯಾಗಿ ಹಾಗೂ ಬೆಂಬಲವಾಗಿ ನಿಲ್ಲಬೇಕು ಎಂಬ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಆರ್‌ಟಿನಗರದಲ್ಲಿ ಒಂದು ಎಕರೆ ಭೂಮಿಯನ್ನು ಡಿನೋಟಿಫಿಕೇಷನ್ ಮಾಡಿರುವ ಪ್ರಕರಣ ಕಣ್ಣ ಮುಂದಿದೆ. ಕುಮಾರಸ್ವಾಮಿ ತಮ ಕಾಲದಲ್ಲಿ ಡಿನೋಟಿಫಿಕೇಷನ್ ಮಾಡದೇ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಮಾಡಿಸಿದ್ದಾರೆ. ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಇಬ್ಬರ ಹೆಸರು ಒಳಗೊಂಡ ಎಫ್‌ಐಆರ್ ಇದೆ. ಈ ಎಲ್ಲ ವಿಚಾರಗಳನ್ನು ಎಸ್‌ಐಟಿ ತನಿಖೆಗೆ ಒಳಪಡಿಸಲು ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಲಾಗಿದೆ ಎಂದರು.
ಬಿಜೆಪಿ ಶಾಸಕ ಮುನಿರತ್ನ ಒಕ್ಕಲಿಗ ಸಮುದಾಯ ಹೆಣ್ಣು ಮಕ್ಕಳು ಹಾಗೂ ಪರಿಶಿಷ್ಟ ಜಾತಿಯ ಕುರಿತು ಆಡಿರುವ ಮಾತುಗಳು ತೀವ್ರ ನೋವುಂಟು ಮಾಡಿವೆ. ಕುಮಾರಸ್ವಾಮಿ, ಆರ್. ಅಶೋಕ್, ಸಿ.ಟಿ. ರವಿ ಅವರು ಮುನಿರತ್ನ ಪರವಾಗಿ ನಿಂತಿದ್ದು, ತಲೆ ಬಗ್ಗಿಸುವಂತಾಗಿದೆ. ಇದು ಖಂಡನೀಯ ಈ ಮೂರು ಮಂದಿ ಸಮಾಜದ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಮುನಿರತ್ನ ವಿರುದ್ಧ ನಿನ್ನೆ, ಮೊನ್ನೆ ಬಹಿರಂಗಗೊಂಡ ಪ್ರಕರಣಗಳ ಜೊತೆಗೆ ಮತ್ತಷ್ಟು ಹಳೆಯ ಪ್ರಕರಣಗಳನ್ನೊಳಗೊಂಡು ಸಮಗ್ರ ತನಿಖೆಗೆ, ಎಸ್‌ಐಟಿ ರಚಿಸುವಂತೆ ಆಗ್ರಹಿಸಲಾಗಿದೆ ಎಂದು ಹೇಳಿದರು.
ಈ ವಿಚಾರವನ್ನು ಇಟ್ಟುಕೊಂಡು ರಾಜ್ಯಾದಂತ ಹೋರಾಟ ರೂಪಿಸುವ ಕುರಿತು ಚರ್ಚೆ ನಡೆಸಲಾಗಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರಿಗೆ ಬಂದ ಬಳಿಕ ಶ್ರೀ ಆದಿಚುಂಚನಗಿರಿ ಸ್ವಾಮೀಜಿಯೊಂದಿಗೆ ಚರ್ಚೆ ನಡೆಸಿ ಹೋರಾಟದ ಬಗ್ಗೆ ನಿರ್ಧರಿಸಲಾಗುವುದು ಎಂದು ಹೇಳಿದರು.