ಬೆಂಗಳೂರು, ಸೆ.21- ಸಾರ್ವಜನಿಕರು ಸ್ವಯಂಪ್ರೇರಿತರಾಗಿ ನಾಶಪಡಿಸಲು ಉದ್ದೇಶಿಸುವ ವಾಹನಗಳ ಮೇಲೆ ಕೊನೆಯ ಒಂದು ವರ್ಷದಲ್ಲಿನ ದಂಡಗಳನ್ನು ಒಂದು ಬಾರಿಗೆ ಮಾತ್ರ ವಿನಾಯಿತಿ ನೀಡುವ ಅವಧಿಯನ್ನು ಎರಡು ವರ್ಷಗಳ ಕಾಲ ವಿಸ್ತರಿಸಲಾಗಿದೆ.
ಸಾರ್ವಜನಿಕರು ಸ್ವಯಂಪ್ರೇರಿತರಾಗಿ ನಾಶಪಡಿಸಲು ಉದ್ದೇಶಿಸುವ ವಾಹನಗಳ ಮೇಲೆ ಕೊನೆಯ ಒಂದು ವರ್ಷದಲ್ಲಿನ ದಂಡಗಳನ್ನು ಸಾರಿಗೆ ಇಲಾಖೆಯ ಶಾಸನ ಕ್ರಮದ ಅಡಿಯಲ್ಲಿ ಹಾಗೂ ಪೊಲೀಸ್ ಇಲಾಖೆಯ ಸಂಚಾರ ನಿಯಮ ಉಲ್ಲಂಘನೆಯಡಿಯಲ್ಲಿ ದಾಖಲಾದ ಪ್ರಕರಣದ ದಂಡಗಳಿಗೆ ಮಾತ್ರ ಸೀಮಿತಗೊಳಿಸಿ ದಂಡಗಳ ವಸೂಲಾತಿಯಿಂದ ಒಂದು ವರ್ಷದ ವರೆಗೆ ಮಾತ್ರ ವಿನಾಯಿತಿ ನೀಡಿರುವ ಅವಧಿಯನ್ನು 2026ರ ಮಾರ್ಚ್ 31ರವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಕರ್ನಾಟಕ ರಾಜ್ಯದಲ್ಲಿ ನೋಂದಾಯಿತ ವಾಹನಗಳ ಸ್ಕ್ರ್ಯಾಪಿಂಗ್ ಪಾಲಿಸಿ-2022ರ ಯೋಜನೆಯಡಿ ಈ ವಿನಾಯಿತಿಯು 2023ರ ಸೆಪ್ಟೆಂಬರ್ 26ರಿಂದ ಜಾರಿಗೆ ಬಂದಿದೆ. 15 ವರ್ಷಗಳನ್ನು ಪೂರೈಸಿರುವ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ಸರ್ಕಾರದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಗಳು, ನಿಗಮಗಳು, ಮಂಡಳಿಗಳು, ಸ್ಥಳೀಯ ಸಂಸ್ಥೆ ಮೊದಲಾದವುಗಳಲ್ಲಿ ಇರುವ 5000 ವಾಹನಗಳನ್ನು ಆದ್ಯತೆ ಮತ್ತು ಉಪಯೋಗದ ಆಧಾರದ ಮೇಲೆ ಹಂತ ಹಂತವಾಗಿ ನಾಶಪಡಿಸಲು ಅನುಮೋದನೆ ನೀಡಿದ್ದು, ಮೊದಲಿಗೆ ಅತಿ ಹೆಚ್ಚು ವರ್ಷಗಳನ್ನು ಪೂರೈಸಿರುವ ವಾಹನಗಳನ್ನು ನಾಶಪಡಿಸಲು ಆದೇಶಿಸಲಾಗಿದೆ.
ಭಾರತ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಮಂತ್ರಾಲಯವು ವಿವಿಧ ರಾಜ್ಯಗಳು ವಾಹನಗಳ ಮೇಲಿನ ಬಾಕಿ ಇರುವ ದಂಡಗಳ ವಸೂಲಾತಿಯಿಂದ ವಿನಾಯಿತಿ ನೀಡಿರುವ ಅವಧಿಯು ಸೆಪ್ಟೆಂಬರ್‌ನಲ್ಲಿ ಮುಕ್ತಾಯುವಾಗುತ್ತದೆ. ವಾಹನಗಳ ಸ್ಕ್ರ್ಯಾಪಿಂಗ್ ಪಾಲಿಸಿಯ ಅನುಷ್ಠಾನವು ಇನ್ನೂ ರೂಪುಗೊಳ್ಳುವಿಕೆಯ ಹಂತದಲ್ಲಿರುವುದರಿಂದ ಈ ಸೌಲಭ್ಯಗಳನ್ನು 2026ರ ಮಾರ್ಚ್‌ವರೆಗೆ ವಿಸ್ತರಿಸುವಂತೆ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಯ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ.