Sunday, September 29, 2024
Homeರಾಜ್ಯಮುಂಗಾರು ಮಳೆ ಮತ್ತೆ ಚೇತರಿಕೆ, ರಾಜ್ಯದಲ್ಲಿ ಹಲವೆಡೆ ಯಲ್ಲೋ ಅಲರ್ಟ್ ಘೋಷಣೆ

ಮುಂಗಾರು ಮಳೆ ಮತ್ತೆ ಚೇತರಿಕೆ, ರಾಜ್ಯದಲ್ಲಿ ಹಲವೆಡೆ ಯಲ್ಲೋ ಅಲರ್ಟ್ ಘೋಷಣೆ

IMD issues yellow alert in Karnataka

ಬೆಂಗಳೂರು, ಸೆ.23-ನೈರುತ್ಯ ಮುಂಗಾರು ಮತ್ತೆ ಕಳೆದ ಎರಡು ದಿನಗಳಿಂದ ಚೇತರಿಕೆಯಾಗಿದ್ದು, ಕರಾವಳಿಯಲ್ಲಿ ವ್ಯಾಪಕವಾಗಿ ಉಳಿದಂತೆ ರಾಜ್ಯದ ಒಳನಾಡಿದಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗಿದೆ. ಹವಾಮಾನ ಮುನ್ಸೂಚನೆ ಪ್ರಕಾರ ಇನ್ನೂ ಮೂರು ದಿನಗಳ ಕಾಲ ರಾಜ್ಯದಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆಗಳಿದ್ದು, ಹವಾಮಾನ ಇಲಾಖೆ ಯಲ್ಲೋ ಅಲರ್ಟ್ ಘೋಷಣೆ ಮಾಡಿದೆ.

ನಿನ್ನೆ ಕರಾವಳಿಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಉತ್ತಮ ಮಳೆಯಾಗಿದೆ. ಒಂದೆರಡು ಕಡೆ ಭಾರಿ ಮಳೆಯಾಗಿದೆ. ಉತ್ತರ ಕರ್ನಾಟಕ ಭಾಗದಲ್ಲೂ ಹಗುರದಿಂದ ವ್ಯಾಪಕ ಪ್ರಮಾಣದ ಮಳೆಯಾಗಿದೆ. ಕಲ್ಯಾಣ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ ಭಾಗದಲ್ಲಿ ಚದುರಿದಂತೆ ಕೆಲವೆಡೆ ಮಳೆಯಾಗಿದೆ.

ಬಂಗಾಳಕೊಲ್ಲಿ ಹಾಗೂ ಅರಬ್ಬೀ ಸಮುದ್ರದಲ್ಲಿ ಮೇಲೈ ಸುಳಿಗಾಳಿ ಉಂಟಾಗಿರುವ ಪರಿಣಾಮ ರಾಜ್ಯದಲ್ಲಿ ಮೋಡ ಕವಿದ ವಾತಾವರಣ ಕಂಡುಬರುತ್ತಿದೆ. ಆಗಾಗ್ಗೆ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಬಂಗಾಳ ಕೊಲ್ಲಿಯಲ್ಲಿ ಲಘು ವಾಯುಭಾರ ಕುಸಿತ ಸೃಷ್ಟಿಯಾಗುತ್ತಿದೆ. ಇದರ ಪರಿಣಾಮದಿಂದ ಮುಂದಿನ ಮೂರು ದಿನಗಳ ಕಾಲ ರಾಜ್ಯದಲ್ಲಿ ವ್ಯಾಪಕ ಪ್ರಮಾಣದ ಮಳೆ ನಿರೀಕ್ಷಿಸಬಹುದಾಗಿದೆ. ಕರಾವಳಿ ಹಾಗೂ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರಾವಳಿ ಹಾಗೂ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಗುಡುಗು, ಮಿಂಚು, ಬಲವಾದ ಮೇಲೈ ಗಾಳಿಯೊಂದಿಗೆ ಮಳೆಯಾಗುವ ಮುನ್ಸೂಚನೆಗಳಿವೆ. ಅದೇ ರೀತಿ ಉತ್ತರ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲೂ ವ್ಯಾಪಕ ಪ್ರಮಾಣದ ಮಳೆಯಾಗಲಿದೆ. ಕೆಲವೆಡೆ ಭಾರಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹೇಳಿದೆ.

RELATED ARTICLES

Latest News