ತಿರುಪತಿ,ಸೆ.23- ಭಕ್ತರು ಯಾವುದೇ ಆತಂಕಕ್ಕೆ ಒಳಗಾಗದೆ ದೇವರಲ್ಲಿ ಪ್ರಾರ್ಥಿಸಿ ತಿರುಪತಿಯ ಲಾಡನ್ನು ಭಕ್ತಿ ಭಾವನೆಯಿಂದ ಸ್ವೀಕರಿಸಬೇಕೆಂದು ತಿರುಪತಿ ತಿರುಮಲ ದೇವಸ್ಥಾನದ ಪ್ರಧಾನ ಅರ್ಚಕ ವೇಣುಗೋಪಾಲ ದೀಕ್ಷಿತ್ ಅವರು ಮನವಿ ಮಾಡಿದ್ದಾರೆ.
ತಿರುಪತಿಯ ಲಡ್ಡುಗೆ ದನದ ಕೊಬ್ಬು ಬೆರೆಸಲಾಗಿದೆ ಎಂಬ ಭಯವಿದ್ದರೆ ಮನೆಯಲ್ಲಿ ದೀಪಾರಾಧನೆ ಮಾಡಿ ಭಕ್ತಿಯಿಂದ ತಿಮಪ್ಪನ ಪ್ರಸಾದವನ್ನು ಸ್ವೀಕಾರ ಮಾಡಿ.
ಮನಸ್ಸಿನಲ್ಲಿರುವ ಗೊಂದಲ, ಆತಂಕ ನಿವಾರಣೆಯಾಗುತ್ತದೆ ಎಂದು ಕಿವಿಮಾತು ಹೇಳಿದರು.ಲಡ್ಡು ತಿಂದುಬಿಟ್ಟರೆ ಏನೋ ಆಗಿಬಿಡುತ್ತದೆ ಎಂಬ ಭಾವನೆ ಬೇಡ. ನೀವು ವೆಂಕಟರಮಣನನ್ನು ಸರಿಸಿ ಪ್ರಸಾದ ಸ್ವೀಕರಿಸಿದರೆ ಉಳಿದದ್ದನ್ನು ಆ ದೇವರೇ ನೋಡಿಕೊಳ್ಳುತ್ತಾನೆ. ದೇವರ ನಿಲಯ ಪ್ರಸಾದ ನಿಲಯದಲ್ಲಿ ಪ್ರಾರ್ಥಿಸಿ ನಿರ್ಭಯವಾಗಿ ಪ್ರಸಾದವನ್ನು ಸೇವಿಸಿ ಎಂದು ಹೇಳಿದ್ದಾರೆ.
ತಿರುಪತಿಯ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಕೆಯಾದ ಹಿನ್ನಲೆಯಲ್ಲಿ ದೇವಸ್ಥಾನವನ್ನು ಶುದ್ದೀಕರಣ ಮಾಡುವ ಕಾರ್ಯ ನಡೆಸಲಾಗಿದೆ. ಮುಂದೆ ಇಂತಹ ಪ್ರಮಾದಗಳು ಆಗದಂತೆ ಎಚ್ಚರಿಕೆ ವಹಿಸುತ್ತೇವೆ ಎಂದು ತಿಳಿಸಿದ್ದಾರೆ.ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 6 ಗಂಟೆಯಿಂದ ದೇವಾಲಯ ಪವಿತ್ರೋತ್ಸವ, ಮಹಾಶಾಂತಿ ಯಾಗ ನಡೆಸಲಾಯಿತು. ಬಳಿಕ ತಿರುಪತಿ ದೇವಾಲಯ ಶುದ್ಧೀಕರಣ ಕಾರ್ಯ ನಡೆಯಿತು.
ತಿರುಮಲದ ದೇವಾಲಯದ ಸುತ್ತ ಅರ್ಚಕರು ಸಂಪ್ರೋಕ್ಷಣೆ ಮಾಡಿದರು. ಹಾಲು, ತುಪ್ಪ, ಮೊಸರು, ಗಂಜಲ, ಸಗಣಿ ಬಳಸಿ ದೇವಾಲಯ ಶುದ್ಧೀಕರಣ ಮಾಡಿದರು. ವಾಸ್ತು ಶುದ್ಧಿ, ಯಂತ್ರ ಶುದ್ಧಿ, ಸ್ಥಳ ಶುದ್ಧಿ , ಪಂಚಗವ್ಯ ಸಂಪ್ರೋಕ್ಷಣ ಮೂಲಕ, ಅನ್ನ ಪ್ರಸಾದ ತಯಾರಾಗುವ ಸ್ಥಳ, ಲಡ್ಡು ತಯಾರಾಗುವ ಸ್ಥಳ, ತುಪ್ಪ ಬಳಸುತ್ತಿದ್ದ ಎಲ್ಲಾ ಸ್ಥಳಗಳಲ್ಲಿ ಪಂಚಗವ್ಯ ಸಂಪ್ರೋಕ್ಷಣೆ ನಡೆಸಲಾಗಿದೆ.
ದೇವಾಲಯ ಆವರಣದಲ್ಲಿ ವೇದ ಶಾಸ್ತ್ರ ಪಂಡಿತರು, ಆಗಮಿಕರಿಂದ ಮಹಾ ಶಾಂತಿ ಯಾಗ ಜರುಗಿತು. ಯಾಗದಲ್ಲಿ ನೂರಾರು ಆಗಮಿಕರು, ಅರ್ಚಕರು ಭಾಗಿಯಾಗಿದ್ದರು. ಮೊದಲಿಗೆ ಬಂಗಾರು ಬಾವಿ ಯಾಗ ಶಾಲೆಯಲ್ಲಿ ಶಾಂತಿ ಹೋಮ ನಡೆಯಿತು. ಹೋಮದ ಬಳಿಕ ತಿಮಪ್ಪನಿಗೆ ಹೊಸ ಬಟ್ಟೆ, ಆಭರಣಗಳನ್ನು ಅರ್ಚಕರು ತೊಡಿಸಿದರು. ಶಾಸೊ್ತ್ರೕಕ್ತವಾಗಿ ಅರ್ಚಕರು ಶಾಂತಿ ಹೋಮ ನೆರವೇರಿಸಿದರು.
ಹೋಮ ಬಳಿಕ ತುಪ್ಪ ಬಳಕೆ ಮಾಡಿದ್ದ ಸ್ಥಳದಲ್ಲಿ ಹಾಗೂ ಅನ್ನ ಪ್ರಸಾದ, ಲಡ್ಡು ತಯಾರಿಕೆ ಸ್ಥಳ, ಗೋದಾಮು ಸೇರಿದಂತೆ ಎಲ್ಲೆಡೆ ಸಂಪ್ರೋಕ್ಷಣೆ ಮಾಡಲಾಯಿತು. ಶುದ್ದೀಕರಣ ಬಳಿಕ ಎಂದಿನಂತೆ ಸಾರ್ವಜನಿಕರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಬಳಿಕ ಹೋಮ, ಯಾಗ, ಶುದ್ಧೀಕರಣದಲ್ಲಿ ಭಾಗಿಯಾಗಿದ್ದ ಅರ್ಚಕರ ತಂಡವನ್ನು ಟಿಟಿಡಿ ಬೀಳ್ಕೊಟ್ಟಿತು. ಎರಡು ಆನೆಗಳ ಸಹಿತ ಅರ್ಚಕರನ್ನು ಬೀಳ್ಕೊಡಲಾಯಿತು.
ಎಸ್‌ಐಟಿ ರಚನೆ: ತಿರುಮಲ ತಿರುಪತಿ ದೇವಸ್ಥಾನದಲ್ಲಿ (ಟಿಟಿಡಿ) ತುಪ್ಪ ಖರೀದಿಗೆ ಇದ್ದ ನಿಯಮಗಳ ಬದಲಾವಣೆ ಸೇರಿದಂತೆ ಅಕ್ರಮಗಳ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗುವುದು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ಹಿಂದಿನ ವೈಎಸ್‌ಆರ್‌ಸಿಪಿ ನೇತೃತ್ವದ ಸರ್ಕಾರದ ವಿರುದ್ಧ ಕಿಡಿಕಾರಿದ ಅವರು, ತುಪ್ಪ ಖರೀದಿಗೆ ಇದ್ದ ಹಲವು ನಿಯಮಗಳನ್ನು ಹಿಂದಿನ ಸರ್ಕಾರದ ಅವಧಿಯಲ್ಲಿ ಬದಲಾಯಿಸಲಾಯಿತು ಎಂದು ಆರೋಪಿಸಿದರು. ತಿರುಮಲದ ಶುದ್ಧೀಕರಣಕ್ಕೆ ಇಂದು ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಶಾಂತಿ ಹೋಮ ಪಂಚಗವ್ಯ ಪ್ರೋಕ್ಷಣೆ ನಡೆದಿದೆ ಎಂದು ಅವರು ತಿಳಿಸಿದರು.
ತುಪ್ಪ ಪೂರೈಸುವವರಿಗೆ ಕನಿಷ್ಠ ಮೂರು ವರ್ಷಗಳ ಅನುಭವ ಇರಬೇಕು ಎಂಬ ನಿಯಮ ಇತ್ತು. ಇದನ್ನು ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರವು ಒಂದು ವರ್ಷಕ್ಕೆ ಇಳಿಸಿತ್ತು. ತುಪ್ಪ ಪೂರೈಕೆದಾರರ ವಹಿವಾಟು 250 ಕೋಟಿ ರೂ. ಇರಬೇಕು ಎಂಬ ನಿಯಮವನ್ನು ಉಲ್ಲಂಘಿಸಿ 150 ಕೋಟಿ ರೂ.ಗೆ ಇಳಿಸಲಾಗಿತ್ತು ಎಂದು ಹೇಳಿದರು.