ಬೆಂಗಳೂರು,ಸೆ.23– ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣ ಕುರಿತಂತೆ ತನಿಖೆ ನಡೆಸಿದ್ದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆಂಪಣ್ಣ ಆಯೋಗದ ವರದಿಯನ್ನು ತಕ್ಷಣವೇ ರಾಜ್ಯ ಸರ್ಕಾರ ಬಿಡುಗಡೆ ಮಾಡಬೇಕೆಂದು ವಿಧಾನಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಸಿ.ಟಿ.ರವಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಕೋರ್ ಕಮಿಟಿ ಸಭೆ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರೀಡೂ ಹೆಸರಿನಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು 450ಕ್ಕೂ ಹೆಚ್ಚು ಎಕರೆ ಡಿನೋಟಿಫಿಕೇಷನ್ ಮಾಡಿರುವ ಆರೋಪಕ್ಕೆ ಸಿಲುಕಿದ್ದಾರೆ.
ಇದರ ಬಗ್ಗೆ ಅಂದಿನ ಸರ್ಕಾರವೇ ತನಿಖಾ ಆಯೋಗವನ್ನು ರಚಿಸಿತ್ತು. ಹಲವು ವರ್ಷಗಳು ಕಳೆದರೂ ಆಯೋಗದ ವರದಿ ಬಹಿರಂಗಗೊಂಡಿಲ್ಲ. ಸರ್ಕಾರ ವಿಳಂಬ ಮಾಡದೆ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು. ಕೆಂಪಣ್ಣ ಆಯೋಗದ ವರದಿಯನ್ನು ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಡನೆ ಮಾಡಬೇಕೆಂದು ನಾನೇ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದೆ. ಇದಕ್ಕೆ ಈಗಲೂ ಉತ್ತರ ಕೊಟ್ಟಿಲ್ಲ. ಇದು ಜಾಣ ವೌನವೇ ಎಂದು ಪ್ರಶ್ನಿಸಿದರು.
ಕೆಂಪಣ್ಣ ಆಯೋಗದ ವರದಿಯನ್ನು ಮಂಡಿಸಬೇಕು. ವರದಿ ಆಧಾರದ ಮೇಲೆ ಯಾರು ತಪ್ಪಿತಸ್ಥರು ಇದ್ದಾರೋ ಅವರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಿ ಇಲ್ಲದಿದ್ದರೆ ಸಿದ್ದರಾಮಯ್ಯ ಪರಮ ಭ್ರಷ್ಟರು ಎನ್ನುವುದರಲ್ಲಿ ಇನ್ನೊಂದು ಮಾತಿಲ್ಲ ಎಂದರು.ನಿನ್ನೆ ಸಿಎಂ ಸಿದ್ಧರಾಮಯ್ಯ ಪತ್ರಕರ್ತರ ಪ್ರಶ್ನೆ ಅರ್ಧ ಹೇಳಿಕೆ ಕೊಟ್ಟಿದ್ದಾರೆ. ರಿಡೂ ಮಾಡಿದ್ದು ನಾನಲ್ಲ. ಅದು ಸುಪ್ರೀಂಕೋರ್ಟ್ ತೀರ್ಪು ಎಂದಿದ್ದಾರೆ. ಸಮಿತಿ ಕೊಟ್ಟ ವರದಿ ಬೇರೆ ಇತ್ತು. ಒಟ್ಟು 880 ಎಕರೆ ರಿಡೂ ಮಾಡಿದ್ದಾರೆ.
ಬಿಡಿಎ ಅಭಿವೃದ್ಧಿ ಪಡಿಸಿದ ಲೇಔಟ್ ಇದ್ದರೇ, ಡಿನೋಟಿಫಿಕೇಶನ್ ಮಾಡಲು ತಿಳಿಸಿತ್ತು. ಆದರೆ 16 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸ್ಥಳಕ್ಕೆ ಡಿನೋಟಿಫಿಕೇಶನ್ ಮಾಡಿಕೊಟ್ಟಿದ್ದಾರೆ. ಆರ್ಕಾವತಿ ಬಡಾವಣೆಗೆ ನಿವೇಶನ ಸಿಕ್ಕಿತ್ತು. ಕೆಂಪೇಗೌಡ ಬಡಾವಣೆಗೆ ಅವಕಾಶ ಕೊಟ್ಟಿದ್ದೀರಿ. ಬಂಡೂರು ರಾಮಸ್ವಾಮಿ ಆಯೋಗ ಕೊಟ್ಟಿದ್ದ ವರದಿಯಲ್ಲಿನ ನಿಯಮ ಗಾಳಿಗೆ ತೂರಿದ್ದೀರಿ. ವರದಿಯನ್ನು ಹೊರಗೆ ತರಬೇಕಿತ್ತು.
ಆರ್ಕಾವತಿ ಬಡಾವಣೆಯಲ್ಲಿ ನಿಮ್ಮ ಸರ್ಕಾರ ಅಕ್ರಮ ಮಾಡಿದೆ. ಅದನ್ನು ಟೇಬಲ್ ಮಾಡಬೇಕಿತ್ತು. ಆರ್ಕಾವತಿಯಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿದೆ. ಅದರಲ್ಲಿ ನಿಮ್ಮ ಪಾಲು ಇದೆ. ನೀವು ಭ್ರಷ್ಟಾಚಾರಿಗಳನ್ನು ಪೋಷಿಸಿದ್ದೀರಿ ಎಂದು ಸಿದ್ಧರಾಮಯ್ಯರ ವಿರುದ್ಧ ವಾಗ್ದಾಳಿ ನಡೆಸಿದರು.
ಶಾಸಕ ಮುನಿರತ್ನರ ವಿಚಾರದಲ್ಲಿ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಮುನಿರತ್ನರನ್ನು ರಾಜಕೀಯದಿಂದ ದೂರ ಸರಿಸಬೇಕೆಂದು ಹುನ್ನಾರ ನಡೆಸುತ್ತಿದ್ದಾರೆ. ಇದರ ಬಗ್ಗೆ ಕೋರ್ ಕಮಿಟಿ ಸಭೆಯಲ್ಲಿ ಮಾತುಕತೆ ನಡೆಸಿದ್ದೇವೆ ಎಂದು ಇದೇ ವೇಳೆ ಅವರು ತಿಳಿಸಿದರು.