Friday, October 11, 2024
Homeರಾಜಕೀಯ | Politics3 ಕ್ಷೇತ್ರಗಳ ಉಪಚುನಾವಣೆ : ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಹೈಕಮಾಂಡ್‌ಗೆ ರವಾನೆ

3 ಕ್ಷೇತ್ರಗಳ ಉಪಚುನಾವಣೆ : ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಹೈಕಮಾಂಡ್‌ಗೆ ರವಾನೆ

By-election : List of BJP candidates sent to High Command

ಬೆಂಗಳೂರು,ಸೆ.23– ಮುಂಬರುವ ಮೂರು ವಿಧಾನ ಸಭಾ ಕ್ಷೇತ್ರಗಳ ಉಪಚುನಾವಣೆ,1 ಸ್ಥಳೀಯ ಸಂಸ್ಥೆಗಳ ಉಪಚುನಾವಣೆಗೆ ಬಿಜೆಪಿ ಸಂಭಾವನೀಯ ಅಭ್ಯರ್ಥಿಗಳ ಪಟ್ಟಿಯನ್ನು ವರಿಷ್ಠರಿಗೆ ಕಳುಹಿಸಿದೆ.

ಪಕ್ಷದ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ನಡೆದ ಕೋರ್‌ ಕಮಿಟಿ ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌, ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌‍. ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ, ನಿಕಟಪೂರ್ವ ರಾಜ್ಯ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್‌. ಅಶ್ವತ್ಥನಾರಾಯಣ್‌, ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ, ಪುದುಚೇರಿ ರಾಜ್ಯ ಉಸ್ತುವಾರಿ ನಿರ್ಮಲ್‌ ಕುಮಾರ್‌ ಸುರಾಣ ಭಾಗವಹಿಸಿದ್ದರು.

ಸಭೆಯಲ್ಲಿ ಉಪಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷದ ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಿಕೊಡಲು ತೀರ್ಮಾನಿಸಲಾಗಿದ್ದು, ಅಂತಿಮವಾಗಿ ವರಿಷ್ಠರ ನಿರ್ಧಾರಕ್ಕೆ ಬದ್ದರಾಗಬೇಕೆಂಬ ಒಮತದ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ರಾಮನಗರ ಜಿಲ್ಲೆ ಚನ್ನಪಟ್ಟಣ ಕ್ಷೇತ್ರವನ್ನು ಎನ್‌ಡಿಎ ಮೈತ್ರಿ ಪಕ್ಷವಾದ ಜೆಡಿಎಸ್‌‍ಗೆ ಬಿಟ್ಟುಕೊಡುವುದು ಇಲ್ಲವೇ ಈ ಕ್ಷೇತ್ರಕ್ಕೆ ಸಿ.ಪಿ.ಯೋಗೇಶ್ವರ್‌ ಅವರನ್ನು ಅಭ್ಯರ್ಥಿ ಮಾಡಬೇಕೆಂಬ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.

ಅದೇ ರೀತಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮಾಯಿ ಅವರ ರಾಜೀನಾಮೆಯಿಂದ ತೆರವಾಗಿರುವ ಹಾವೇರಿ ಜಿಲ್ಲೆ ಶಿಗ್ಗಾವಿಗೆ ಅವರ ಪುತ್ರ ಭರತ್‌ ಬೊಮಾಯಿ ಇಲ್ಲವೇ ಮಾಜಿ ಸಚಿವ ಮುರುಗೇಶ್‌ ನಿರಾಣಿ ಅವರನ್ನು ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆದಿದೆ.

ಬಳ್ಳಾರಿ ಜಿಲ್ಲೆ ಸಂಡೂರು ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಸಚಿವ ಬಿ.ಶ್ರೀರಾಮುಲು, ಸಂಸದ ಕೋಟಾ ಶ್ರೀನಿವಾಸ್‌‍ ಪೂಜಾರಿ ರಾಜೀನಾಮೆಯಿಂದ ತೆರವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಸ್ಥಳೀಯ ಸಂಸ್ಥೆಗೆ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್‌ ಕಟೀಲ್‌, ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಹೆಸರು ಮುನ್ನಲೆಗೆ ಬಂದಿದೆ.

ಪ್ರತಿಷ್ಠೆಯ ಕಣವಾಗಿರುವ ರಾಮನಗರ ಜಿಲ್ಲೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರವನ್ನು ಜೆಡಿಎಸ್‌‍ಗೆ ಬಿಟ್ಟುಕೊಡುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ಕಾಂಗ್ರೆಸ್‌‍ ಎದುರು ಜೆಡಿಎಸ್‌‍ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸದಿದ್ದರೆ ಎನ್‌ಡಿಎ ಅಭ್ಯರ್ಥಿಯಾಗಿ ಮಾಜಿ ಸಚಿವ ಹಾಗೂ ಹಾಲಿ ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ಗೆ ಟಿಕೆಟ್‌ ನೀಡಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ.

ಶಿಗ್ಗಾವಿ ಕ್ಷೇತ್ರಕ್ಕೆ ಬೊಮಾಯಿ ಅವರ ಅಭಿಪ್ರಾಯ ಪಡೆದುಕೊಂಡೇ ಅಭ್ಯರ್ಥಿ ಪಟ್ಟಿಯನ್ನು ಅಖೈರು ಮಾಡಬೇಕೆಂಬ ಸಲಹೆ ಕೇಳಿಬಂದಿದೆ. ಈ ಕ್ಷೇತ್ರದ ಮೇಲೆ ಬೊಮಾಯಿ ಅವರ ಪುತ್ರ ಭರತ್‌ ಬೊಮಾಯಿ ಕಣ್ಣಿಟ್ಟಿದ್ದು, ಈಗಾಗಲೇ ಕ್ಷೇತ್ರದಲ್ಲಿ ಒಂದು ಸುತ್ತಿನ ಕೆಲಸವನ್ನು ಆರಂಭಿಸಿದ್ದಾರೆ.

ಕುಟುಂಬ ರಾಜಕಾರಣವನ್ನು ಪ್ರಬಲವಾಗಿ ವಿರೋಧಿಸುವ ಬಿಜೆಪಿ, ಬೊಮಾಯಿ ಪುತ್ರನಿಗೆ ಟಿಕೆಟ್‌ ಬೇಡ ಎಂಬ ನಿಲುವಿಗೆ ಬಂದರೆ ಮಾಜಿ ಸಚಿವ ಮುರುಗೇಶ್‌ ನಿರಾಣಿ ಅಭ್ಯರ್ಥಿಯಾಗುವ ಸಂಭವವನ್ನು ತಳ್ಳಿ ಹಾಕುವಂತಿಲ್ಲ.

ಬಳ್ಳಾರಿ ಜಿಲ್ಲೆ ಸಂಡೂರು ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಸಚಿವ ಬಿ.ಶ್ರೀರಾಮುಲು ಹೆಸರು ಕೇಳಿಬಂದಿದೆ ಆದರೂ ಈಗಾಗಲೇ ಒಂದು ಬಾರಿ ವಿಧಾನಸಭೆ ಮತ್ತೊಂದು ಬಾರಿ ಲೋಕಸಭೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಅವರು ಸ್ಪರ್ಧೆಗೆ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.

ಶ್ರೀರಾಮುಲು ಕಣಕ್ಕಿಳಿಯಲು ನಿರಾಕರಿಸಿದರೆ ಸ್ಥಳೀಯ ಅಭ್ಯರ್ಥಿಗೆ ಟಿಕೆಟ್‌ ನೀಡುವ ಬಗ್ಗೆಯೂ ಕೋರ್‌ ಕಮಿಟಿಯಲ್ಲಿ ಚರ್ಚೆ ನಡೆಯಲಿದೆ. ಸಂಸದ ಕೋಟಾ ಶ್ರೀನಿವಾಸ್‌‍ ಪೂಜಾರಿ ಅವರ ರಾಜೀನಾಮೆಯಿಂದ ತೆರವಾಗಿದ್ದ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ನಳೀನ್‌ಕುಮಾರ್‌ ಕಟೀಲ್‌ ಪ್ರಮೋದ್‌ ಮಧ್ವರಾಜ್‌ ಆಕಾಂಕ್ಷಿಗಳಾಗಿದ್ದಾರೆ.

ಇನ್ನು ಕೋರ್‌ ಕಮಿಟಿ ಸಭೆಯಲ್ಲಿ ಸದಸ್ಯತ್ವ ನೋಂದಣಿ, ಪಕ್ಷದ ಸಂಘಟನೆ ಕುರಿತು ಸುಧೀರ್ಘ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ರಾಜ್ಯಾದ್ಯಂತ ಬರುವ ದಿನಗಳಲ್ಲಿ ಇನ್ನಷ್ಟು ನೋಂದಣಿಯನ್ನು ಪರಿಣಾಮಕಾರಿಯಾಗಿ ಮಾಡಬೇಕು. ಇದರಲ್ಲಿ ಹಾಲಿ ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು ಸೇರಿದಂತೆ ಪದಾಧಿಕಾರಿಗಳು ಕಡ್ಡಾಯವಾಗಿ ಪಾಲ್ಗೊಂಡು ನಿರೀಕ್ಷಿತ ಗುರಿ ತಲುಪಲು ಎಲ್ಲರೂ ಕೈಜೋಡಿಸುವಂತೆ ಸಭೆ ಸೂಚಿಸಿದೆ.

RELATED ARTICLES

Latest News