Sunday, September 29, 2024
Homeರಾಜ್ಯಮುಡಾ ಪ್ರಕರಣ : ಲೋಕಾಯುಕ್ತ ಪೊಲೀಸರಿಗೆ ದೂರು

ಮುಡಾ ಪ್ರಕರಣ : ಲೋಕಾಯುಕ್ತ ಪೊಲೀಸರಿಗೆ ದೂರು

Muda case : Complaint to Lokayukta Police

ಮೈಸೂರು,ಸೆ.25– ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಿ ನೇರ ವಿಚಾರಣೆ ಆರಂಭಿಸುವಂತೆ ಜೆಡಿಎಸ್‌‍ನ ಪ್ರದೀಪ್‌ಕುಮಾರ್ ಮೈಸೂರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದಾರೆ.

ಇಂದು ಬೆಳಿಗ್ಗೆ ಪಕ್ಷದ ಕೆಲ ಮುಖಂಡರ ಜೊತೆ ಲೋಕಾಯುಕ್ತ ಕಚೇರಿಗೆ ತೆರಳಿ ಎರಡನೇ ಬಾರಿಗೆ ದೂರು ಸಲ್ಲಿಸಿದ್ದಾರೆ.ಕಳೆದ ಜುಲೈನಲ್ಲೇ ನಾನು ಮುಡಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಲೋಕಾಯುಕ್ತಕ್ಕೆ ದೂರು ನೀಡಿದ್ದೆ. ಆದರೆ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ರಾಜ್ಯಪಾಲರು ಅಭಿಯೋಜನೆಗೆ ನೀಡಿದ್ದ ಪೂರ್ವಾನುಮತಿಯನ್ನು ನಿನ್ನೆ ಹೈಕೋರ್ಟ್‌ ತೀರ್ಪು ಎತ್ತಿಹಿಡಿದಿದೆ. ಜೊತೆಗೆ ಪ್ರಕರಣ ದಾಖಲಿಸಲು ಯಾರ ಪೂರ್ವಾನುಮತಿಯೂ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಹೀಗಾಗಿ ತಮ ದೂರು ಆಧರಿಸಿ ಎಫ್‌ಐಆರ್‌ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಕೆಯಾಗಿದ್ದು, ತನಿಖೆಗೂ ಮುನ್ನ ಪ್ರಕರಣ ದಾಖಲಿಸಲು ಸೂಚನೆ ನೀಡುವಂತೆ ಕೆಲವರು ಮನವಿ ಮಾಡಿದ್ದಾರೆ. ಆದರೆ ಹೈಕೋರ್ಟ್‌ ಯಾವುದೇ ಪೂರ್ವಾನುಮತಿಯ ಅಗತ್ಯವಿಲ್ಲ ಎಂದು ಹೇಳಿರುವುದರಿಂದ ಲೋಕಾಯುಕ್ತ ಸಂಸ್ಥೆ ನ್ಯಾಯೋಚಿತವಾಗಿ ಕ್ರಮ ಕೈಗೊಳ್ಳಬೇಕು. ಕಳೆದ ಮೂರು ತಿಂಗಳಿನಿಂದಲೂ ಉದ್ದೇಶಪೂರಕವಾಗಿ ಕಾಲಾಹರಣ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಮ ದೂರಿನ ಅಡಿ ಪ್ರಕರಣ ದಾಖಲಿಸದೇ ಇದ್ದರೆ ಲೋಕಾಯುಕ್ತ ಕಚೇರಿ ಎದುರು ಧರಣಿ ನಡೆಸುವುದಾಗಿಯೂ ಅವರು ಎಚ್ಚರಿಸಿದರು.ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಪುತ್ರ ಯತೀಂದ್ರ, ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಇತರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಎರಡನೇ ದೂರು ನೀಡಿದ್ದಾರೆ.

ಲೋಕಾಯುಕ್ತ ಅಧಿಕಾರಿಗಳು 197 ಪುಟಗಳ ದೂರಿದ್ದು, ಇದನ್ನು ಪರಿಶೀಲಿಸಲು ಕಾಲಾವಕಾಶ ನೀಡುವಂತೆ ಸೂಚಿಸಿದ್ದಾರೆ. ಅರ್ಧಗಂಟೆ ನಾನು ಈ ಬಗ್ಗೆ ಕಾಯುತ್ತೇನೆ. ನಂತರ ಧರಣಿ ನಡೆಸುತ್ತೇನೆ ಎಂದು ಸುದ್ದಿಗಾರರೊಂದಿಗೆ ತಿಳಿಸಿದರು.ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಒತ್ತಡಕ್ಕೆ ಮಣಿದಂತೆ ಕಂಡುಬರುತ್ತಿದೆ. ಹೀಗಾಗಿ ಈ ಹಗರಣವನ್ನು ಸಿಬಿಐ ತನಿಖೆಗೆ ವಹಿಸುವುದು ಸೂಕ್ತ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

RELATED ARTICLES

Latest News