Friday, October 11, 2024
Homeರಾಜ್ಯಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್‌ ದಾಖಲಿಸಿ ಲೋಕಾಯುಕ್ತ ತನಿಖೆಗೆ ಕೋರ್ಟ್ ಆದೇಶ

ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್‌ ದಾಖಲಿಸಿ ಲೋಕಾಯುಕ್ತ ತನಿಖೆಗೆ ಕೋರ್ಟ್ ಆದೇಶ

Muda Scam

ಬೆಂಗಳೂರು,ಸೆ.25– ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ ಪ್ರಕರಣದಲ್ಲಿ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸುವ ಮೂಲಕ ಮಹತ್ವದ ತೀರ್ಪು ಪ್ರಕಟಿಸಿದೆ. ನ್ಯಾಯಾಧೀಶರಾದ ಸಂತೋಷ್‌ ಗಜಾನನ ಭಟ್‌ ಅವರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆದು, ಇಂದು ತೀರ್ಪು ಪ್ರಕಟವಾಗಿದ್ದು, ಸಿಆರ್‌ಪಿಸಿ ಅಡಿಯೇ ಕಾನೂನ ಪ್ರಕ್ರಿಯೆಗಳನ್ನು ಮುಂದುವರೆಸುವಂತೆ ಸೂಚಿಸಲಾಗಿದೆ.

ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತೊಂದು ಸಂಕಷ್ಟ ಹಾಗೂ ಕಾನೂನಿನ ಕುಣಿಕೆ ಎದುರಾಗಿದೆ.ದೂರುದಾರ ಸ್ನೇಹಮಯಿ ಕೃಷ್ಣ ಅವರ ಪರವಾಗಿ ವಕೀಲರಾದ ಲಕ್ಷ್ಮೀ ಅಯ್ಯಂಗಾರ್‌ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ವಾದ ಮಂಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಅಭಿಯೋಜನೆಗೆ ರಾಜ್ಯಪಾಲರು ನೀಡಿರುವ ಪೂರ್ವಾನುಮತಿ ಹಾಗೂ ಅದನ್ನು ಪ್ರಶ್ನಿಸಿ ಸಿದ್ದರಾಮಯ್ಯನವರು ಹೈಕೋರ್ಟ್‌ಗೆ ಸಲ್ಲಿಸಿದ್ದ ರಿಟ್‌ ಅರ್ಜಿ ಮತ್ತು ಈ ಕುರಿತು ಹೈಕೋರ್ಟ್‌ ನೀಡಿರುವ ತೀರ್ಪನ್ನು ಜನಪ್ರತಿನಿಧಿಗಳ ನ್ಯಾಯಾಲಯದ ಗಮನಕ್ಕೆ ತಂದರು.

ಜೊತೆಗೆ ಮೈಸೂರಿನ ಕೆಸರೆ ಗ್ರಾಮದಲ್ಲಿ 3 ಎಕರೆ 16 ಗುಂಟೆ ಜಮೀನನ್ನು ಬಡಾವಣೆ ನಿರ್ಮಾಣಕ್ಕಾಗಿ ಬಿಡಿಎ ಸ್ವಾದೀನಪಡಿಸಿಕೊಂಡು ಮೂಲ ಮಾಲೀಕರಿಗೆ ಪರಿಹಾರವನ್ನು ಪಾವತಿಸಲು ಹಣ ಠೇವಣಿ ಇಡಲಾಗಿತ್ತು. ನಿವೇಶನಗಳನ್ನು ಅಭಿವೃದ್ಧಿಪಡಿಸಿ ರಸ್ತೆ, ಪಾರ್ಕ್‌ಗಳನ್ನು ನಿರ್ಮಿಸಲಾಗಿತ್ತು ಎಂದು ವಿವರಿಸಿದರು.

ಮುಡಾ ಸ್ವಾದೀನಪಡಿಸಿಕೊಂಡಿದ್ದ ಭೂಮಿಯನ್ನು ಸಿದ್ದರಾಮಯ್ಯನವರ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಖರೀದಿಸಿದ್ದಾರೆ. ನಂತರ ತಮ ಸಹೋದರಿ ಹಾಗೂ ಸಿದ್ದರಾಮಯ್ಯನವರ ಪತ್ನಿ ಪಾರ್ವತಿಯವರಿಗೆ ದಾನಪತ್ರ ಮಾಡಿಕೊಟ್ಟಿದ್ದಾರೆ. ಮಲ್ಲಿಕಾರ್ಜುನ ಸ್ವಾಮಿ ಅವರು ದೇವರಾಜು ಅವರಿಂದ ಭೂಮಿ ಖರೀದಿಸಿದ್ದಾರೆ. ಆದರೆ ಇಲ್ಲಿ ದೇವರಾಜು ಭೂಮಿಯ ಮಾಲೀಕರೇ ಅಲ್ಲ ಎಂದು ವಾದಿಸಿದರು.

ಭೂಸ್ವಾದೀನ ಪ್ರಕ್ರಿಯೆಗಳು ಪೂರ್ಣಗೊಂಡಿದ್ದ ಜಮೀನನ್ನು ಜಿಲ್ಲಾಡಳಿತ ರಾಜಕೀಯ ಪ್ರಭಾವಕ್ಕೆ ಮಣಿದು ಮತ್ತೊಮೆ ನಿಯಮಬಾಹಿರವಾಗಿ ಭೂಪರಿವರ್ತನೆ ಮಾಡಿದೆ ಎಂದು ವಕೀಲರು ದೂರಿದರು.

ಈ ನಡುವೆ ಸಿದ್ದರಾಮಯ್ಯನವರು ಉಪ ಮುಖ್ಯಮಂತ್ರಿಯಾಗಿದ್ದಾಗ ಜಮೀನಿನ ಖರೀದಿ ಹಾಗೂ ಡಿ ನೋಟಿಫಿಕೇಷನ್‌ ಪ್ರಕ್ರಿಯೆಗಳಾಗಿವೆ. ಅವರು ಮುಖ್ಯಮಂತ್ರಿಯಾಗಿದ್ದಾಗ ಭೂ ಪರಿಹಾರಕ್ಕೆ ಅರ್ಜಿ ಸಲ್ಲಿಸಲಾಗಿದೆ ಮತ್ತು ಮುಡಾದಲ್ಲಿ 60:40 ರ ಬದಲಾಗಿ 50:50ರ ಅನುಪಾತದಡಿ ನಿವೇಶನ ಹಂಚಿಕೆಯಾಗಬೇಕು ಎಂಬ ನಿರ್ಣಯವಾಗಿದೆ. ಆ ಸಭೆಯಲ್ಲಿ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಭಾಗವಹಿಸಿದ್ದರು.

ಸಿದ್ದರಾಮಯ್ಯ ವಿರೋಧಪಕ್ಷದ ನಾಯಕರಾಗಿದ್ದಾಗ 14 ನಿವೇಶನಗಳ ಮಂಜೂರಾತಿಯಾಗಿದೆ ಎಂದು ವಿವರಿಸಿದರು.ಪಾರ್ವತಿ ಅವರು ಜಮೀನಿನ ಮಾಲೀಕರಾಗಿದ್ದರೂ ಕೂಡ 4,800 ಚದರ ಅಡಿ ಅಂದರೆ 4 ನಿವೇಶನಗಳನ್ನು ಪಡೆಯಲು ಅರ್ಹರಾಗಿದ್ದರೂ, ಮೈಸೂರಿನ ಪ್ರತಿಷ್ಠಿತ ಬಡಾವಣೆಯಲ್ಲಿ 14 ನಿವೇಶನಗಳನ್ನು ಪಡೆದುಕೊಂಡಿದ್ದಾರೆ ಎಂದು ಆರೋಪಿಸಿ ಒಟ್ಟು 11 ಅಂಶಗಳ ಆಧಾರದ ಮೇಲೆ ವಾದ ಮಂಡಿಸಿದ್ದರು.

ಈ ಪ್ರಕರಣದಲ್ಲಿ ಸ್ಪಷ್ಟವಾಗಿ ನಿಯಮದ ಉಲ್ಲಂಘನೆಯಾಗಿದೆ. ಅನಪೇಕ್ಷಿತ ರಾಜಕೀಯ ಪ್ರಭಾವ ಬಳಕೆಯಾಗಿದೆ. ಈ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಸಬೇಕು ಎಂದು ಮನವಿ ಮಾಡಿದರು.

ಈ ವೇಳೆ ನ್ಯಾಯಾಧೀಶರು ಕಾನೂನು ಪ್ರಕ್ರಿಯೆಯನ್ನು ಹೊಸದಾಗಿ ಜಾರಿಯಾಗಿರುವ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌‍ಎಸ್‌‍) ಅಡಿ ಅಥವಾ ಈ ಮೊದಲು ಜಾರಿಯಲ್ಲಿದ್ದ ಕೋಡ್‌ ಆಫ್‌ ಕ್ರಿಮಿನಲ್‌ ಪ್ರೊಸಿಸರ್‌(ಸಿಆರ್‌ಪಿಸಿ) ಅಡಿ ಮುಂದುವರೆಸಬೇಕೆ ಎಂಬ ಪ್ರಶ್ನೆಯನ್ನು ಮುಂದಿಟ್ಟರು.

ಅರ್ಜಿದಾರರ ಪರ ವಕೀಲರು, ಹೊಸದಾಗಿ ಜಾರಿಯಾಗಿರುವ ಬಿಎನ್‌ಎಸ್‌‍ಎಸ್‌‍ ಅಡಿಯೇ ಕಾನೂನು ಪ್ರಕ್ರಿಯೆಗಳಿಗೆ ಆದೇಶ ನೀಡಬೇಕೆಂದು ಮನವಿ ಮಾಡಿದರು.ಒಂದು ವೇಳೆ ವಿಚಾರಣೆ ಸಂದರ್ಭದಲ್ಲಿ ಕಾನೂನಿನ ಸಂಘರ್ಷ ಎದುರಾದರೆ ಪದ್ಧತಿಯನ್ನು ಬದಲಾವಣೆ ಮಾಡಿಕೊಳ್ಳಲು ಅವಕಾಶವಿದೆ ಎಂದು ಗುಜರಾತ್‌ ಹಾಗೂ ಕರ್ನಾಟಕ ಹೈಕೋರ್ಟ್‌ನ ಮಧ್ಯಂತರ ತೀರ್ಪನ್ನು ಉಲ್ಲೇಖಿಸಿದರು. ಸದ್ಯಕ್ಕೆ ಬಿಎನ್‌ಎಸ್‌‍ಎಸ್‌‍ ಅಡಿಯೇ ಕಾನೂನು ಪ್ರಕ್ರಿಯೆಗಳಿಗೆ ಸೂಚನೆ ನೀಡಬೇಕು ಎಂದು ಸಲಹೆ ನೀಡಿದರು. ಈ ವೇಳೆ ನ್ಯಾಯಾಧೀಶರು ಕಲಾಪವನ್ನು ಕೆಲಕಾಲ ಮುಂದೂಡಿದರು.

ಮತ್ತೆ ನ್ಯಾಯಾಲಯದ ಕಲಾಪ ಆರಂಭವಾದಾಗ ನ್ಯಾಯಾಧೀಶರು ತಮ ತೀರ್ಪನ್ನು ಪ್ರಕಟಿಸಿದ್ದು, ಡಿ.24 ರೊಳಗೆ ಅಂದರೆ ಮೂರು ತಿಂಗಳ ಕಾಲಾವಧಿಯಲ್ಲಿ ನ್ಯಾಯಾಲಯಕ್ಕೆ ತನಿಖಾ ವರದಿಯನ್ನು ಸಲ್ಲಿಸುವಂತೆ ಮೈಸೂರು ಲೋಕಾಯುಕ್ತ ಪೊಲೀಸರಿಗೆ ಆದೇಶ ನೀಡಿದ್ದಾರೆ.

ಕಾನೂನು ಪ್ರಕ್ರಿಯೆ ಜಿಜ್ಞಾಸೆ :
ಮುಡಾ ನಿವೇಶನ ಹಂಚಿಕೆ ಪ್ರಕರಣ 2004 ರಿಂದಲೂ ಆರಂಭಗೊಂಡಿದೆ. ಬಿಎನ್‌ಎಸ್‌‍ಎಸ್‌‍ 2024 ರ ಜುಲೈ 1 ರಿಂದ ಅನುಷ್ಠಾನಕ್ಕೆ ಬಂದಿದ್ದು, ಅನಂತರ ಘಟಿಸಿದ ಅಪರಾಧಗಳನ್ನು ಹೊಸ ಪದ್ಧತಿಯಡಿ ವಿಚಾರಣೆ ನಡೆಸಬೇಕಾಗುತ್ತದೆ. ಹಳೆಯ ಪ್ರಕರಣ ಆಗಿರುವುದರಿಂದ ಸಿಆರ್‌ಪಿಸಿಯನ್ನೇ ಪಾಲನೆ ಮಾಡಬೇಕು ಎಂಬ ವಾದಗಳು ಇವೆ.

ಮುಖ್ಯಮಂತ್ರಿ ವಿರುದ್ಧ ಅಭಿಯೋಜನೆಗೆ ಪೂರ್ವಾನುಮತಿ ನೀಡುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದ ದೂರುದಾರರಾದ ಟಿ.ಜೆ.ಅಬ್ರಹಾಂ, ಸ್ನೇಹಮಯಿ ಕೃಷ್ಣ ಹಾಗೂ ಪ್ರದೀಪ್‌ ಕುಮಾರ್‌ ಅವರನ್ನು ಭ್ರಷ್ಟಾಚಾರ ನಿಗ್ರಹ ಕಾಯ್ದೆ ಸೆಕ್ಷನ್‌ 17 ಎ ಮತ್ತು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌‍) ಕಾಯಿದೆ ಸೆಕ್ಷನ್‌ 218 ರ ಅಡಿ ತನಿಖೆ ಹಾಗೂ ಅಭಿಯೋಜನೆಗೆ ಅನುಮತಿ ನೀಡುವಂತೆ ಮನವಿ ಮಾಡಿದರು.

ರಾಜ್ಯಪಾಲರು ಪೂರ್ವಾನುಮತಿಯನ್ನು ನೀಡಿದರು. ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದಾಗ ನ್ಯಾ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಭ್ರಷ್ಟಾಚಾರ ನಿಗ್ರಹ ಕಾಯಿದೆ 17 ಎ ಅಡಿ ತನಿಖೆಗೆ ರಾಜ್ಯಪಾಲರು ಪೂರ್ವಾನುಮತಿ ನೀಡಿರುವುದನ್ನು ಎತ್ತಿಹಿಡಿದಿತ್ತು. ಬಿಎನ್‌ಎಸ್‌‍ 218ರ ಅಡಿ ನೀಡಿದ್ದ ಅನುಮತಿಯನ್ನು ರದ್ದುಗೊಳಿಸಿದರು.
ಇಂದು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹೈಕೋರ್ಟ್‌ ತೀರ್ಪಿನ ದೃಢೀಕೃತ ಪ್ರತಿಯನ್ನು ಸಲ್ಲಿಸಲಾಯಿತು. ವಿಚಾರಣೆ ಹಂತದಲ್ಲಿ ಅನುಸರಿಸಬೇಕಾದ ಕಾನೂನು ಪ್ರಕ್ರಿಯೆಗಳ ಬಗ್ಗೆ ಜಿಜ್ಞಾಸೆ ವ್ಯಕ್ತವಾಗಿತ್ತು. ಅದಕ್ಕೆ ಸ್ಪಷ್ಟನೆ ಸಿಕ್ಕ ಬಳಿಕ ಜನಪ್ರತಿನಿಧಿಗಳ ನ್ಯಾಯಾಲಯ ತನ್ನ ತೀರ್ಪನ್ನು ಪ್ರಕಟಿಸಿದೆ.

ಇದರಿಂದಾಗಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದ ಸದಸ್ಯರಿಗೆ ಸಂಕಷ್ಟಗಳು ಎದುರಾಗಿವೆ. ಹೈಕೋರ್ಟ್‌ ನಿನ್ನೆ ನೀಡಿದ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್‌ನ ದ್ವಿಸದಸ್ಯ ಪೀಠಕ್ಕೆ ಮೇಲನವಿ ಸಲ್ಲಿಸಲು ಮುಖ್ಯಮಂತ್ರಿಯವರ ಕಾನೂನು ತಂಡ ತಯಾರಿ ನಡೆಸಿತು.
ಹೈಕೋರ್ಟ್‌ ಅಥವಾ ಸುಪ್ರೀಂಕೋರ್ಟ್‌ನಲ್ಲಿ ಕಾನೂನು ಹೋರಾಟವನ್ನು ಮುಂದುವರೆಸಬೇಕೇ ಎಂಬ ಬಗ್ಗೆ ಚರ್ಚೆಗಳು ನಡೆದಿದ್ದವು. ಇದರ ನಡುವೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ತೀರ್ಪು ಮತ್ತೊಂದು ಸಂಕಷ್ಟವನ್ನು ತಂದೊಡ್ಡಿದೆ.

RELATED ARTICLES

Latest News