Sunday, September 29, 2024
Homeರಾಜ್ಯಯಾವುದೇ ಕಾರಣಕ್ಕೂ ಸಿಎಂ ರಾಜೀನಾಮೆ ನೀಡಲ್ಲ : ಗೃಹಸಚಿವ ಪರಮೇಶ್ವರ್‌

ಯಾವುದೇ ಕಾರಣಕ್ಕೂ ಸಿಎಂ ರಾಜೀನಾಮೆ ನೀಡಲ್ಲ : ಗೃಹಸಚಿವ ಪರಮೇಶ್ವರ್‌

Home Minister Parameshwar

ಬೆಂಗಳೂರು,ಸೆ.25– ಮುಖ್ಯಮಂತ್ರಿ ಸಿದ್ದರಾಮಯ್ಯ ಕಲ್ಲುಬಂಡೆಯಂತೆ ಗಟ್ಟಿಯಾಗಿದ್ದು, ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಕಾನೂನಿನ ಹೋರಾಟವನ್ನು ಮುಂದುವರೆಸಲಿದ್ದಾರೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾವುದೇ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿಲ್ಲ ಎಂದು ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಲಾಗಿತ್ತು.

ಆದರೆ ವ್ಯತಿರಿಕ್ತವಾದ ತೀರ್ಪು ಬಂದಿದೆ. ತೀರ್ಪನ್ನು ಗೌರವಿಸುತ್ತೇನೆ. ಆದರೆ ಎಲ್ಲೋ ಒಂದು ಕಡೆ ನ್ಯಾಯ ಸಿಕ್ಕಿಲ್ಲ ಎಂದು ಮನಸ್ಸಿಗೆ ನೋವಾಗಿದೆ. ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದ್ದು, ನ್ಯಾಯಾಂಗ ಹೋರಾಟವನ್ನು ಮುಂದುವರೆಸಲಾಗುವುದು ಎಂದರು.

ಈ ನಡುವೆ ವಿರೋಧಪಕ್ಷಗಳು ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಅದು ಸಾಧ್ಯವಿಲ್ಲ ಎಂದು ಈಗಾಗಲೇ ಸಿದ್ದರಾಮಯ್ಯರಾದಿಯಾಗಿ ಎಲ್ಲರೂ ಸ್ಪಷ್ಟಪಡಿಸಿದ್ದಾರೆ. ನಾನು ಅದನ್ನು ದೃಢಪಡಿಸುತ್ತೇನೆ. ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿಯನ್ನು ಸಲ್ಲಿಸಲಾಗುವುದು. ನ್ಯಾಯಾಂಗ ಹೋರಾಟ ಮುಂದುವರೆಸುವುದರಿಂದ ರಾಜೀನಾಮೆ ನೀಡುವ ಮಾತು ಬರುವುದಿಲ್ಲ ಎಂದು ತಿಳಿಸಿದರು.

ಸಿದ್ದರಾಮಯ್ಯನವರ 40 ವರ್ಷಗಳ ರಾಜಕೀಯ ಜೀವನದಲ್ಲಿ ಯಾವುದೇ ರೀತಿಯ ಆಪಾದನೆಗಳು ಅವರ ವಿರುದ್ಧ ಬಂದಿರಲಿಲ್ಲ. ಈಗ ರಾಜಕೀಯ ದುರುದ್ದೇಶದಿಂದ ಆರೋಪ ಮಾಡಿದ್ದಾರೆ ಎಂಬ ಭಾವನೆ ಜನಸಾಮಾನ್ಯರಿಗೆ ಬರುತ್ತಿದೆ. ಅದನ್ನು ನಾವು ರಾಜಕೀಯವಾಗಿಯೇ ಹೋರಾಟ ಮಾಡಿ ಜನರಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ಹೇಳಿದರು.

ಹೈಕೋರ್ಟ್‌ ತೀರ್ಪನ್ನು ದ್ವಿಸದಸ್ಯ ಪೀಠದ ಮುಂದೆ ಪ್ರಶ್ನಿಸುತ್ತೇವೆ. ಆದರೆ ಈ ಹಿಂದೆ ವಾದ-ಪ್ರತಿವಾದದ ವೇಳೆ ಈ ಪ್ರಕರಣದಲ್ಲಿ ಮುಖ್ಯಮಂತ್ರಿಗಳ ಪಾತ್ರ ಏನು ಎಂದು ಹೇಳುವಂತೆ ನ್ಯಾಯಾಧೀಶರೇ ಪ್ರಶ್ನಿಸಿದರು.

ವಾದ-ಪ್ರತಿವಾದದ ಸಂದರ್ಭದಲ್ಲಿ ನ್ಯಾಯಾಧೀಶರ ಉಲ್ಲೇಖಗಳೇ ಬೇರೆ, ತೀರ್ಪೇ ಬೇರೆ ಎಂಬಂತಾಗಿದೆ. ಈ ಹಿನ್ನೆಲೆಯಲ್ಲಿ ದ್ವಿಸದಸ್ಯ ಪೀಠದ ಮುಂದೆ ಹೋರಾಟ ಮಾಡಬೇಕೆ ಅಥವಾ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಬೇಕೇ ಎಂಬುದರ ಕುರಿತು ಪರಿಶೀಲಿಸುತ್ತಿದ್ದೇವೆ ಎಂದು ಹೇಳಿದರು.

ಹೈಕೋರ್ಟ್‌ ತೀರ್ಪಿನಲ್ಲಿ ರಾಜ್ಯಪಾಲರು ತಮ ಆದೇಶ ಹೊರಡಿಸುವಾಗ ವಿವೇಚನಾಧಿಕಾರ ಬಳಸಿದ್ದಾರೆ ಎಂಬುದಕ್ಕೆ ಸಮರ್ಥನೆ ನೀಡಿಲ್ಲ ಎಂದು ನ್ಯಾಯಾಧೀಶರು ಉಲ್ಲೇಖಿಸಿದ್ದಾರೆ. ಇದರ ಬಗ್ಗೆ ಚರ್ಚೆಯಾಗಬೇಕಿತ್ತು. ತೀರ್ಪಿನಲ್ಲಿ ನಮಗೆ ನ್ಯಾಯ ಸಿಕ್ಕಿಲ್ಲ ಎಂಬುದಂತೂ ಸತ್ಯ. ನ್ಯಾಯಾಧೀಶರ ಉಲ್ಲೇಖ ಮತ್ತು ತೀರ್ಪಿನಲ್ಲಿ ವೈರುಧ್ಯಗಳು ಕಂಡುಬರುತ್ತಿವೆ ಎಂದರು.
ದ್ವಿಸದಸ್ಯ ಪೀಠದ ಮುಂದೆ ನ್ಯಾಯ ಸಿಗಬಹುದು ಎಂಬ ನಿರೀಕ್ಷೆ ಇದೆ. ಅಲ್ಲಿ ಯಾವ ರೀತಿಯ ತೀರ್ಪು ಬರುತ್ತದೋ ಗೊತ್ತಿಲ್ಲ. ಒಂದು ವೇಳೆ ಇದೇ ರೀತಿ ತೀರ್ಪು ಹೊರಬಿದ್ದರೆ ನಾವು ಏನು ಮಾಡಲು ಸಾಧ್ಯ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಸಿದ್ದರಾಮಯ್ಯನವರ ಪ್ರಕರಣದಲ್ಲಿ ಹೈಕೋರ್ಟ್‌ ತೀರ್ಪಿನಿಂದಾಗಿ ಇತರ ಸಚಿವರುಗಳ ಮೇಲಿನ ದೂರುಗಳಿಗೂ ಬಲ ಬಂದಂತಾಗಿದೆ ಎಂಬ ವಿಶ್ಲೇಷಣೆಗೆ ಪ್ರತಿಕ್ರಿಯಿಸಿದ ಪರಮೇಶ್ವರ್‌ರವರು, ರಾಜ್ಯಪಾಲರು ಎಲ್ಲಾ ದೂರುಗಳನ್ನೂ ಏಕರೂಪತೆಯಿಂದ ನೋಡಬೇಕಿತ್ತು. ಎಚ್‌.ಡಿ.ಕುಮಾರಸ್ವಾಮಿ, ಮುರುಗೇಶ್‌ ನಿರಾಣಿ, ಜನಾರ್ಧನ ರೆಡ್ಡಿ, ಶಶಿಕಲಾ ಜೊಲ್ಲೆ ಎಲ್ಲರಿಗೂ ಇದೇ ರೀತಿಯ ಮಾನದಂಡಗಳನ್ನು ಅನುಸರಿಸಬೇಕಿತ್ತು. ಕೆಲವರಿಗೆ ಮಾತ್ರ ತುರ್ತು ಅನುಮತಿ ನೀಡಿ ಉಳಿದ ಕಡತಗಳನ್ನು ಮರೆಯುವುದು ಮೇಲ್ನೋಟಕ್ಕೆ ತಾರತಮ್ಯ ಎಂದು ಕಂಡುಬರುತ್ತಿದೆ.

ಲೋಕಾಯುಕ್ತಕ್ಕೆ ಕಡತ ವಾಪಸ್‌‍ ಬಂದಿದ್ದರೆ ಅಗತ್ಯ ವಿವರಣೆಗಳನ್ನು ನೀಡಿ ಮರುಸಲ್ಲಿಕೆ ಮಾಡಲಾಗುವುದು. ಆಗ ರಾಜ್ಯಪಾಲರು ಅಷ್ಟೇ ವೇಗವಾಗಿ ನಿರ್ಣಯ ಕೈಗೊಳ್ಳಬೇಕಲ್ಲವೇ? ಎಂದು ಹೇಳಿದರು.ಕುಮಾರಸ್ವಾಮಿಯವರ ಕಡತ ಇನ್ನೂ ರಾಜ್ಯಪಾಲರ ಬಳಿಯೇ ಇದೆ ಎಂದರು.

ರಾಜ್ಯಪಾಲರ ವಿರುದ್ಧ ಹೋರಾಟದ ಬಗ್ಗೆ ಪಕ್ಷ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ಅವರು ತಿಳಿಸಿದರು. ರಾಜ್ಯಪಾಲರು ಸಚಿವ ಸಂಪುಟ ಸಭೆಯ ಸಲಹೆ ಮೇರೆಗೆ ಕೆಲಸ ಮಾಡಬೇಕಿತ್ತು. ಆದರೆ ಅದನ್ನು ಬಿಟ್ಟು ವಿವೇಚನಾಧಿಕಾರವನ್ನು ಬಳಸಬಹುದು. ಆದರೆ ಇಲ್ಲಿ ಅದು ಕಂಡುಬರುತ್ತಿಲ್ಲ. ಹೈಕೋರ್ಟ್‌ ತೀರ್ಪಿನಿಂದ ನಮಗೆ ಸಮಾಧಾನವಾಗಿಲ್ಲ. ಆದರೆ ಈ ಪ್ರಕರಣದಿಂದ ಸಿದ್ದರಾಮಯ್ಯ ಅವರು ಕುಗ್ಗಿಲ್ಲ. ಕಲ್ಲುಬಂಡೆಯಂತೆ ಗಟ್ಟಿಯಾಗಿದ್ದಾರೆ. ಹೈಕಮಾಂಡ್‌ ಕೂಡ ಅವರಿಗೆ ಬೆಂಬಲ ವ್ಯಕ್ತಪಡಿಸಿದೆ. ವರಿಷ್ಠ ನಾಯಕರು ಸಿದ್ದರಾಮಯ್ಯ ಅವರ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಹೇಳಿದರು.

RELATED ARTICLES

Latest News