ಬೆಂಗಳೂರು,ಅ.26- ಬಿಜೆಪಿ ನಾಯಕರಿಗೆ ಕೆಲಸವಿಲ್ಲ, ಬಾಯಿ ಚಟಕ್ಕೆ ಮಾತನಾಡುತ್ತಿದ್ದಾರೆ. ರಾಜ್ಯ ಸರ್ಕಾರ ಪತನವಾಗಲಿದೆ ಎಂಬುದು ಅವರ ಕನಸು ಎಂದು ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು. ಹಿಂದೆ ಲಿಂಗಾಯಿತ-ವೀರಶೈವ ಸಮುದಾಯದ ಅಧಿಕಾರಿಗಳಿಗೆ ಅನ್ಯಾಯವಾಗಿದೆ ಎಂದು ಹೇಳಿಕೆ ನೀಡಿ ಸಂಚಲನ ಮೂಡಿಸಿದ್ದ ಶಾಮನೂರು ಶಿವಶಂಕರಪ್ಪ ರಾಜ್ಯ ಸರ್ಕಾರದ ಪರವಾಗಿ ಬ್ಯಾಟಿಂಗ್ ಮಾಡಿದರು. ಮುಖ್ಯಮಂತ್ರಿ ಜೊತೆ ಮಾತುಕತೆ ನಡೆದಿರುವ ಹಾಗೂ ತಮ್ಮ ಹೇಳಿಕೆಯಲ್ಲಿ ಮೃಧುತ್ವದ ಬಗ್ಗೆ ಸ್ಪಷ್ಟನೆ ನೀಡಲು ನಿರಾಕರಿಸಿದರು.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮೀ ಯೋಜನೆಯಡಿ ಶೇ.99ರಷ್ಟು ಮಂದಿ ಫಲಾನುಭವಿಗಳಿಗೆ ಹಣ ಬಂದಿದೆ. ಶೇ.1ರಷ್ಟು ವ್ಯತ್ಯಾಸವಾಗಿದೆ. ಅದನ್ನು ಸರಿ ಪಡಿಸಲಾಗುವುದು, ಯಾರಿಗೆ ಬಂದಿಲ್ಲ ಅವರಿಗೆ ತಕ್ಷಣ ಹಣ ಕೊಡಿಸಲಾಗುತ್ತದೆ ಎಂದರು.
ಶ್ಯಾಮನೂರು ಶಿವಶಂಕರಪ್ಪ ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ ಎಂದು ದಾವಣಗೆರೆಯ ಸಂಸದ ಜಿ.ಎಂ.ಸಿದ್ದೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಹೊಂದಾಣಿಕೆ ಮಾಡಿಕೊಳ್ಳಲಿ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಅವರನ್ನು ಸೋಲಿಸಿ ಮನೆಗೆ ಕಳುಹಿಸುತ್ತೇನೆ ಎಂದರು.
ಚಿಕ್ಕಬಳ್ಳಾಪುರ : ಸಿಮೆಂಟ್ ಬಲ್ಕರ್ ಲಾರಿಗೆ ಟಾಟಾ ಸುಮೋ ಡಿಕ್ಕಿ , 13 ಮಂದಿ ದುರ್ಮರಣ
ಡಿಸೆಂಬರ್ 24ರಂದು ವೀರಶೈವ ಲಿಂಗಾಯಿತ ಮಹಾಸಮಾವೇಶ ನಡೆಯಲಿದೆ. ಬರ ಇರಲಿ, ಏನೇ ಇದ್ದರೂ ನಾವು ಸಮಾವೇಶ ಮಾಡೇ ಮಾಡೇ ಮಾಡುತ್ತೇವೆ. ಪ್ರಪಂಚವೇ ಕೆಳಗೆ ಬಿದ್ದರೂ ಪತ್ರಿಕೆಯವರು ಇರಲಿ, ಇಲ್ಲದೆ ಇರಲಿ ನಾವು ನಿಲ್ಲಿಸುವುದಿಲ್ಲ. ಏನು ತಿಳಿದುಕೊಂಡಿದ್ದಿಯಾ ಎಂದು ಮರು ಪ್ರಶ್ನಿಸಿದರು.
ಸಮಾವೇಶಕ್ಕೆ ಮುಖ್ಯಮಂತ್ರಿಯವರನ್ನು ಕರೆಯುವುದಿಲ್ಲ. ಲಿಂಗಾಯಿತ-ವೀರಶೈವ ಸಮಾವೇಶವದು ಸಮುದಾಯದವರನ್ನು ಕರೆಯುತ್ತೇವೆ. ಅದರಲ್ಲೂ ರಾಜಕೀಯ ಮಾಡಬೇಡಿ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಸಮುದಾಯದ 70 ಮಂದಿ ಯುವ ಶಾಸಕರೆಲ್ಲಾ ಒಂದು, ಹಿರಿಯರಲ್ಲಾ ಒಂದು ಎಂದು ಚೆನ್ನಗಿರಿ ಶಾಸಕರು ನೀಡಿರುವ ಹೇಳಿಕೆ ಕುರಿತು ಮಾತನಾಡಿದ ಶಾಮನೂರು ಶಿವಶಂಕರಪ್ಪ, ಈ ವಿಷಯದಲ್ಲಿ ಅವನನ್ನೇ ಕೇಳಿ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರ ಹಂಚಿಕೆಯ ಬಗ್ಗೆ ಸಮಯ ಬಂದಾಗ ನೋಡಿಕೊಳ್ಳೋಣ ಈಗ ಪ್ರತಿಕ್ರಿಯಿಸುವ ಅಗತ್ಯ ಇಲ್ಲ ಎಂದ ಅವರು, ರಾಮನಗರವನ್ನು ಬೆಂಗಳೂರಿಗೆ ಸೇರಿಸುವ ವಿಷಯ ತೆಗೆದುಕೊಂಡು ನಾವೇನು ಮಾಡೋಣ. ನಮಗೆ ದಾವಣಗೆರೆ ವಿಷಯಗಳಿದ್ದರೆ ಹೇಳಿ ಎಂದರು.