ಆಯೋಧ್ಯೆ,ಸೆ.27- ತಿರುಪತಿ ಲಡ್ಡು ಪ್ರಕರಣದ ನಂತರ ಎಚ್ಚೆತ್ತುಕೊಂಡಿರುವ ಆಯೋಧ್ಯೆಯ ರಾಮ ಮಂದಿರದ ಆಡಳಿತ ಮಂಡಳಿ ಇನ್ನು ಮುಂದೆ ಆರ್ಚಕರ ಸಮುಖದಲ್ಲೇ ಪ್ರಸಾದ ತಯಾರಿಸುವ ಪ್ರಮುಖ ನಿರ್ಣಯ ಕೈಗೊಂಡಿದೆ.
ಇನ್ನು ಮುಂದೆ ರಾಮಮಂದಿರದಲ್ಲಿ ಹೊರಗಡೆ ಏಜೆನ್ಸಿಗಳಿಂದ ತಯಾರಾಗುವ ಪ್ರಸಾದವನ್ನು ನಿಷೇಧಿಸಲಾಗಿದೆ ಎಂದು ರಾಮಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ತಿಳಿಸಿದ್ದಾರೆ.
ಎಲ್ಲಾ ಪ್ರಮುಖ ದೇವಾಲಯಗಳು ಹಾಗೂ ಮಠಗಳಲ್ಲಿ ಹೊರಗಡೆ ಯಾವುದೇ ಸಂಸ್ಥೆಯು ಸಿದ್ಧಪಡಿಸಿರುವ ಪ್ರಸಾದದ ಮೇಲೆ ಸಂಪೂರ್ಣ ನಿಷೇಧ ಹೇರಲಾಗುವುದು ಎಂದರು. ದೇವರಿಗೆ ಪ್ರಸಾದವನ್ನು ದೇವಾಲಯದ ಅರ್ಚಕರ ಮೇಲ್ವಿಚಾರಣೆಯಲ್ಲಿ ತಯಾರಿಸಬೇಕು ಮತ್ತು ಅಂತಹ ಪ್ರಸಾದವನ್ನು ಮಾತ್ರ ದೇವರಿಗೆ ಅರ್ಪಿಸಬೇಕು ಎಂದು ಸೂಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ನೈವೇದ್ಯದಲ್ಲಿ ಮಾಂಸ ಮತ್ತು ಕೊಬ್ಬನ್ನು ಬೆರೆಸಿ ದೇಶದ ಮಠ-ಮಂದಿರಗಳನ್ನು ಅಪವಿತ್ರಗೊಳಿಸುವ ಅಂತಾರಾಷ್ಟ್ರೀಯ ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಆರೋಪಿಸಿ, ರಾಷ್ಟ್ರವ್ಯಾಪಿ ಮಾರಾಟವಾಗುತ್ತಿರುವ ತೈಲ ಮತ್ತು ತುಪ್ಪದ ಶುದ್ಧತೆಯನ್ನು ಪರಿಶೀಲಿಸುವ ಅಗತ್ಯವನ್ನು ಅವರು ಪುನರುಚ್ಚರಿಸಿದ್ದಾರೆ.