Friday, October 4, 2024
Homeರಾಜ್ಯಸಿಎಂ ವಿರುದ್ಧ ಎಫ್‌‍ಐಆರ್‌‍ ದಾಖಲಿಸುವ ವಿಷಯದಲ್ಲಿ ಲೋಕಾಯುಕ್ತ ಅಧಿಕಾರಿಗಳಿಗೆ ಗೊಂದಲ

ಸಿಎಂ ವಿರುದ್ಧ ಎಫ್‌‍ಐಆರ್‌‍ ದಾಖಲಿಸುವ ವಿಷಯದಲ್ಲಿ ಲೋಕಾಯುಕ್ತ ಅಧಿಕಾರಿಗಳಿಗೆ ಗೊಂದಲ

Lokayukta officials confused about filing FIR against CM

ಬೆಂಗಳೂರು,ಸೆ.27- ಮುಡಾ ಅಕ್ರಮ ನಿವೇಶನ ಹಂಚಿಕೆ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಅಧಿಕಾರಿಗಳಿಗೆ ಎಫ್‌‍ಐಆರ್‌‍ ದಾಖಲಿಸುವ ವಿಷಯದಲ್ಲಿ ಗೊಂದಲ ಉಂಟಾಗಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಿದ್ದರಾಮಯ್ಯ ವಿರುದ್ಧ ಸೆಕ್ಷನ್‌‍ 156(3)ರಡಿ ಎಫ್‌‍ಐಆರ್‌‍ ದಾಖಲಿಸಿ ಮೂರು ತಿಂಗಳೊಳಗೆ ತನಿಖೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿತ್ತು.

ಇದರಂತೆ ಮೈಸೂರು ಲೋಕಾಯುಕ್ತ ಎಸ್‌‍ಪಿ ಉದೇಶ್‌‍ ಅವರು ಗುರುವಾರ ಬೆಂಗಳೂರಿನ ಕೇಂದ್ರ ಕಚೇರಿಗೆ ಆಗಮಿಸಿ ಲೋಕಾಯುಕ್ತ ಎಡಿಜಿಪಿ ಮನೀಶ್‌‍ ಕರ್ಬಿಕರ್‌‍ ಸೇರಿದಂತೆ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ನ್ಯಾಯಾಲಯದ ಪ್ರತಿಯನ್ನು ಪಡೆದಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ಹೊಸ ಕಾಯ್ದೆ ಬಿಎನ್‌‍ಎಸ್‌‍ಎಸ್‌‍ ಇಲ್ಲವೇ ಸಿಆರ್‌‍ಪಿಸಿ ಸೆಕ್ಷನ್‌‍ನಡಿ ದೂರು ದಾಖಲಿಸಬೇಕೇ? ಎಂಬ ಗೊಂದಲದಲ್ಲಿ ಸಿಲುಕಿರುವುದರಿಂದಲೇ ಎಫ್‌‍ಐಆರ್‌‍ ದಾಖಲಿಸಲು ವಿಳಂಬವಾಗಿದೆ ಎಂದು ತಿಳಿದುಬಂದಿದೆ.

ಬಿಎನ್‌‍ಎಸ್‌‍ಎಸ್‌‍ ಅಥವಾ ಸಿಆರ್‌‍ಪಿಸಿ ಅಡಿ ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ, ಬಾಮೈದ ಮಲ್ಲಿಕಾರ್ಜುನ, ಜಮೀನು ಮಾಲೀಕ ದೇವರಾಜ್‌‍ ಸೇರಿದಂತೆ ಯಾವ ಸೆಕ್ಷನ್‌‍ನಡಿ ದೂರು ದಾಖಲಿಸಬೇಕು ಎಂಬುದರ ಬಗ್ಗೆ ಸ್ಪಷ್ಟನೆ ನೀಡುವಂತೆ ಲೋಕಾಯುಕ್ತ ಎಡಿಜಿಪಿ ಮನೀಶ್‌‍ ಕರ್ಬಿಕರ್‌‍ಗೆ ಮೈಸೂರು ಲೋಕಾಯುಕ್ತ ಎಸ್‌‍ಪಿ ಉದೇಶ್‌‍ ಪತ್ರ ಬರೆದಿದ್ದಾರೆ.

ಲೋಕಾಯುಕ್ತರ ಈ ಪತ್ರಕ್ಕೆ ಸೂಕ್ತ ಉತ್ತರ ಬಂದ ಮೇಲೆ ಎಫ್‌‍ ಐ ಆರ್‌‍ ದಾಖಲು ಪ್ರಕಿಯೆ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಇಂದು ಸಹ ಎಫ್‌‍ ಐ ಆರ್‌‍ ದಾಖಲಾಗುವುದು ಬಹುತೇಕ ಅನುಮಾನ ಎಂದು ಹೇಳಲಾಗುತ್ತಿದೆ.

ಪ್ರಕರಣವು ಬಿಎನ್‌‍ಎಸ್‌‍ಎಸ್‌‍ ಕಾಯ್ದೆ ಜಾರಿಯಾಗುವ ಮುನ್ನವೇ ನಡೆದಿದೆ. ಇದೊಂದು ಹಿಂದಿನ ಪ್ರಕರಣವಾಗಿರುವುದರಿಂದ ಸಿಆರ್‌‍ಪಿಸಿ ಅಡಿ ಎಫ್‌‍ಐಆರ್‌‍ ದಾಖಲಿಸಿ ತನಿಖೆ ನಡೆಸಬೇಕೇ? ಇಲ್ಲವೇ ಹೊಸ ಕಾನೂನಿನ ಅನ್ವಯ ತನಿಖೆ ನಡೆಸಬೇಕೆ ಎಂಬ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ಲೋಕಾಯುಕ್ತ ಹಿರಿಯ ಅಧಿಕಾರಿಗಳು ಕಾನೂನು ತಜ್ಞರ ಮೊರೆ ಹೋಗಿದ್ದು, ಯಾವ ಸೆಕ್ಷನ್‌‍ ನಡಿ ನ್ಯಾಯಾಲಯದ ಆದೇಶದಂತೆ ದೂರು ದಾಖಲಿಸಬೇಕು ಎಂಬುದರ ಬಗ್ಗೆ ಸಲಹೆ ಪಡೆಯಲಿದ್ದಾರೆ. ಈ ಬೆಳವಣಿಗೆಗಳಿಂದಾಗಿಯೇ ಸಿಎಂ ವಿರುದ್ಧ ಎಫ್‌‍ಐಆರ್‌‍ ದಾಖಲಿಸುವ ಪ್ರಕ್ರಿಯೆ ವಿಳಂಬವಾಗಿದ್ದು, ಮೂಲಗಳ ಪ್ರಕಾರ ಇಂದು ಕೂಡ ಎಫ್‌‍ಐಆರ್‌‍ ದಾಖಲಾಗುವ ಸಾಧ್ಯತೆ ಇಲ್ಲ ಎಂದು ತಿಳಿದುಬಂದಿದೆ.

ಕಾನೂನು ತಜ್ಞರು ನೀಡುವ ಅಭಿಪ್ರಾಯವನ್ನು ಆಧರಿಸಿ ಸಿಆರ್‌‍ಪಿಸಿ ಇಲ್ಲವೇ ಹೊಸದಾಗಿ ಬಂದಿರುವ ಬಿಎನ್‌‍ಎಸ್‌‍ಎಸ್‌‍ ಕಾನೂನಿನಡಿ ಪ್ರಕರಣ ದಾಖಲಿಸಿ ನಂತರವೇ ಎಫ್‌‍ಐಆರ್‌‍ ದಾಖಲು ಮಾಡಿಕೊಳ್ಳಲಿದ್ದಾರೆ.

ಹಳೆಯ ಸಿಆರ್‌‍ಪಿಸಿ ಕಾಯ್ದೆಯಡಿ ದೂರು ದಾಖಲಿಸಿಕೊಂಡರೇ ಆಗ ಕೂಡಲೇ ಎಫ್‌‍ಐಆರ್‌‍ ದಾಖಲು ಮಾಡಬೇಕಾಗುತ್ತದೆ. ಆದರೆ, ಪ್ರಸ್ತುತ ಜಾರಿಯಲ್ಲಿರುವ ನೂತನ ಬಿಎನ್‌‍ಎಸ್‌‍ಎಸ್‌‍ ಕಾಯ್ದೆಯಡಿ ದೂರು ದಾಖಲಾದರೆ, ಮೊದಲು ನೋಟಿಸ್‌‍ ಜಾರಿಗೊಳಿಸಿ ಅವರಿಂದ ಉತ್ತರ ಪಡೆದ ನಂತರ ಎಫ್‌‍ಐಆರ್‌‍ ದಾಖಲಿಸಬೇಕಾಗುತ್ತದೆ. ಹಾಗಾಗಿ ಇದೀಗ ಲೋಕಾಯುಕ್ತರು ಗೊಂದಲದಲ್ಲಿದ್ದು ಹಳೆಯ ಸಿಆರ್‌‍ಪಿಸಿ ಕಾಯ್ಡೆಯಡಿ ದೂರು ದಾಖಲಿಸಬೇಕೋ ಅಥವಾ ಹೊಸ ಬಿಎನ್‌‍ಎಸ್‌‍ಎಸ್‌‍ ಕಾಯ್ದೆಯಡಿ ದೂರು ದಾಖಲಿಸಬೇಕೋ ಎಂಬುದರಲ್ಲಿ ಗೊಂದಲ ಇದೆ.

RELATED ARTICLES

Latest News