Sunday, September 29, 2024
Homeರಾಜ್ಯಎಲೆಕ್ಟ್ರೋಲ್‌ ಬಾಂಡ್‌ ಹಗರಣ : ಮತ್ತಷ್ಟು ದೂರ ದಾಖಲಿಸಲು ಸಿದ್ಧತೆ

ಎಲೆಕ್ಟ್ರೋಲ್‌ ಬಾಂಡ್‌ ಹಗರಣ : ಮತ್ತಷ್ಟು ದೂರ ದಾಖಲಿಸಲು ಸಿದ್ಧತೆ

Electoral Bond Scam

ಬೆಂಗಳೂರು,ಸೆ.28- ರಾಷ್ಟ್ರಮಟ್ಟದಲ್ಲಿ ಭಾರೀ ಸದ್ದು ಮಾಡಿದ್ದ ಎಲೆಕ್ಟ್ರೋಲ್‌ ಬಾಂಡ್‌ ಹಗರಣದಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ತೀರ್ಪಿನ ಬೆನ್ನಲ್ಲೇ ಉಳಿದ ದೂರುಗಳ ಅಡಿಯೂ ಪ್ರಕರಣ ದಾಖಲಿಸಲು ಹಲವು ಸಂಘಟನೆಗಳು ಮುಂದಾಗಿವೆ.

ಕೇಂದ್ರಸರ್ಕಾರ ಜಾರಿನಿರ್ದೇಶನಾಲಯ, ಸಿಬಿಐ, ಆದಾಯ ತೆರಿಗೆಯಂತಹ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಉದ್ಯಮಿಗಳಿಂದ ಹಣ ವಸೂಲಿ ಮಾಡಿದೆ ಹಾಗೂ ರಾಜಕೀಯ ಎದುರಾಳಿಗಳ ವಿರುದ್ಧ ಸಾಕ್ಷ್ಯಗಳನ್ನಾಗಿ ಬಳಕೆ ಮಾಡಲು ಪ್ರಯ ತ್ನಿಸಿದೆ ಎಂಬ ಆರೋಪಗಳಿದ್ದವು.

ಲೋಕಸಭೆ ಚುನಾವಣೆಗೂ ಮುನ್ನ ಎಲೆಕ್ಟ್ರೋಲ್‌ ಬಾಂಡ್‌ ಭಾರಿ ಸದ್ದು ಮಾಡಿತ್ತು. ರಾಜಕೀಯವಾಗಿ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಸುಪ್ರೀಂಕೋರ್ಟ್‌ ಈ ಕುರಿತು ವಿಚಾರಣೆ ನಡೆಸಿತ್ತು. ಬೆಂಗಳೂರಿನಲ್ಲಿ ಜನಾಧಿಕಾರ ಸಂಘರ್ಷ ಪರಿಷತ್‌ (ಜೆಎಸ್‌‍ಪಿ) ಡಾ.ಅಂಬೇಡ್ಕರ್‌ ದಂಡ್‌, ಫ್ಯೂಚರ್‌ ಇಂಡಿಯಾ ಆರ್ಗನೈಸೇಷನ್‌, ಲಂಚಮುಕ್ತ ಕರ್ನಾಟಕ ವೇದಿಕೆ ಸೇರಿದಂತೆ ನಾಲ್ಕು ಸಂಘಟನೆಗಳು ಎಲೆಕ್ಟ್ರೋಲ್‌ ಬಾಂಡ್‌ ಹಗರಣವನ್ನು ಅಧ್ಯಯನ ನಡೆಸಿ ದಾಖಲಾತಿಗಳ ಸಹಿತವಾಗಿ ದೂರು ಸಲ್ಲಿಸಿದ್ದವು.

ಜೆಎಸ್‌‍ಪಿಯ ಸಹ ಅಧ್ಯಕ್ಷ ಆದರ್ಶ ಅಯ್ಯರ್‌ ಬೆಂಗಳೂರಿನ ತಿಲಕ್‌ನಗರ ಪೊಲೀಸ್‌‍ ಠಾಣೆಗೆ ಕಳೆದ ಮಾರ್ಚ್‌ನಲ್ಲಿ ದೂರು ನೀಡಿದ್ದರು. ಆದರೆ ಪ್ರಕರಣ ದಾಖಲಾಗಿರಲಿಲ್ಲ. ಡಿಸಿಪಿಯವರಿಗೂ ದೂರು ಸಲ್ಲಿಸಲಾಗಿತ್ತು. ಅದೂ ಪ್ರಯೋಜನವಾಗದಿದ್ದಾಗ ಏಪ್ರಿಲ್‌ನಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಐದು ತಿಂಗಳ ಕಾಲ ಸುದೀರ್ಘ ವಿಚಾರಣೆ ನಡೆಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿನ್ನೆ ತೀರ್ಪು ನೀಡಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಷ್ಟ್ರೀಯ ಪದಾಧಿಕಾರಿಗಳು, ಕರ್ನಾಟಕದ ಬಿಜೆಪಿ ನಿರ್ಗಮಿತ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಹಾಲಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಹಲವರ ವಿರುದ್ಧ ಸುಲಿಗೆ ಆರೋಪದಡಿ ಪ್ರಕರಣ ದಾಖಲಿಸುವಂತೆ ಸೂಚನೆ ನೀಡಿದೆ.

ನ್ಯಾಯಾಲಯದ ತೀರ್ಪಿನ ಪ್ರತಿಯೊಂದಿಗೆ ಆದರ್ಶ ಅಯ್ಯರ್‌ ಇಂದು ತಿಲಕ್‌ನಗರ ಪೊಲೀಸರನ್ನು ಸಂಪರ್ಕಿಸುತ್ತಿದ್ದು, ಎಫ್‌ಐಆರ್‌ ದಾಖಲಿಸುವಂತೆ ಮನವಿ ಮಾಡಿದ್ದಾರೆ.ನಿರ್ಮಲಾ ಸೀತಾರಾಮನ್‌ ಅವರು ಕರ್ನಾಟಕದಿಂದ ರಾಜ್ಯಸಭೆಗೆ ಸದಸ್ಯರಾಗಿದ್ದು, ಅವರ ಕಚೇರಿ ತಿಲಕ್‌ನಗರ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿರುವುದರಿಂದ ಅಲ್ಲಿಗೆ ದೂರು ನೀಡಲಾಗಿತ್ತು ಎಂದು ಆದರ್ಶ ಅಯ್ಯರ್‌ ಈ ಸಂಜೆಗೆ ತಿಳಿಸಿದ್ದಾರೆ.

ನಾಲ್ಕು ಸಂಘಟನೆಗಳು ಎಲೆಕ್ಟ್ರೋಲ್‌ ಬಾಂಡ್‌ನ ಹಲವು ಪ್ರಕರಣಗಳನ್ನು ಅಧ್ಯಯನ ನಡೆಸಿ ಸಮಗ್ರ ದಾಖಲಾತಿಗಳನ್ನು ಸಜ್ಜುಗೊಳಿಸಿಕೊಂಡಿವೆ. ಸುಮಾರು 20 ಈ ರೀತಿಯ ಪ್ರಕರಣಗಳಿದ್ದು, ಅದರಲ್ಲಿ ತಾವು ಅರೊಬಿಂದೋ ಫಾರ್ಮ ಹಾಗೂ ವೇದಾಂತ್‌ ಕಂಪನಿಯಿಂದ ಹಣ ವಸೂಲಿಯಾಗಿರುವ ಮಾಹಿತಿಗಳೊಂದಿಗೆ ದೂರು ನೀಡಿದ್ದಾಗಿ ಆದರ್ಶ ಅಯ್ಯರ್‌ ತಿಳಿಸಿದ್ದಾರೆ.

ಅನಿಲ್‌ ಅಗರ್‌ವಾಲ್‌ ಒಡೆತನದ ಅರೊಬಿಂದೋ ಫಾರ್ಮದಿಂದ 230 ಕೋಟಿ ರೂ.ಗಳನ್ನು ಎಲೆಕ್ಟ್ರೋಲ್‌ ಬಾಂಡ್‌ ರೂಪದಲ್ಲಿ ವಸೂಲಿ ಮಾಡಲಾಗಿದೆ. ಜೊತೆಗೆ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಪ್ರಕರಣದಲ್ಲಿ ಸುನಿಲ್‌ ಅಗರ್‌ವಾಲ್‌ ಅವರನ್ನು ಸಾಕ್ಷಿದಾರರನ್ನಾಗಿ ಮಾಡಲು ಒತ್ತಡ ಬಳಸಲಾಗಿದೆ ಎಂದು ಹೇಳಿದರು.

ಆಂಧ್ರಪ್ರದೇಶದ ಶರಶ್ಚಂದ್ರ ರೆಡ್ಡಿಯವರ ವೇದಾಂತ್‌ ಕಂಪನಿಯಿಂದ 49 ಕೋಟಿ ರೂ.ಗಳ ಎಲೆಕ್ಟ್ರೋಲ್‌ ಬಾಂಡ್‌ ವಸೂಲಿ ಮಾಡಿರುವ ದಾಖಲಾತಿಗಳಿವೆ ಎಂದು ತಿಳಿಸಿದ್ದಾರೆ.ಪ್ರಕರಣ ದಾಖಲಾಗಿರುವ ಸಮಯ, ವಿಚಾರಣೆ, ನೋಟಿಸ್‌‍, ಜಾಮೀನು ಮತ್ತು ಬಿಡುಗಡೆ ಈ ಎಲ್ಲಾ ಟೈಮ್‌ಲೈನ್‌ಗಳನ್ನು ಪರಿಶೀಲಿಸಿದರೆ ಎಲೆಕ್ಟ್ರೋಲ್‌ ಬಾಂಡ್‌ ವಸೂಲಿ ಹಿಂದೆ ಅಕ್ರಮ ನಡೆದಿದೆ ಎಂಬ ಆರೋಪ ಸ್ಪಷ್ಟವಾಗುತ್ತಿದೆ ಎಂದು ಆದರ್ಶ್‌ ಅಯ್ಯರ್‌ ದೂರಿದರು.

ಸದ್ಯಕ್ಕೆ ತಾವು ಎರಡು ಪ್ರಕರಣಗಳನ್ನು ಮುಂದಿಟ್ಟುಕೊಂಡು ದೂರು ದಾಖಲಿಸಿದ್ದು, ನಾವು ಸಲ್ಲಿಸಿದ್ದ ದಾಖಲಾತಿಗಳು ಹಾಗೂ ಮಾಹಿತಿಯನ್ನು ನ್ಯಾಯಾಲಯ ಪರಿಗಣಿಸಿ ತೀರ್ಪು ನೀಡಿದೆ. ಉಳಿದಂತೆ 20 ದೂರುಗಳ ಅಡಿಯಲ್ಲಿಯೂ ಪ್ರಕರಣ ದಾಖಲಿಸುವಂತೆ ಸ್ಥಳೀಯ ಪೊಲೀಸರಿಗೆ ಮನವಿ ಸಲ್ಲಿಸಲಾಗುವುದು. ಒಂದು ವೇಳೆ ಅವರು ನಿರಾಕರಿಸಿದರೆ ಮತ್ತೆ ಹತ್ತು ದಾಖಲಾತಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಕಾನೂನು ಹೋರಾಟ ಮುಂದುವರೆಸುವುದಾಗಿ ಆದರ್ಶ ಅಯ್ಯರ್‌ ತಿಳಿಸಿದರು.

RELATED ARTICLES

Latest News