Monday, November 25, 2024
Homeರಾಜ್ಯವಿಶ್ವವಿಖ್ಯಾತ ದಸರಾ ಉತ್ಸವಕ್ಕೆ ನಾಳೆ ವಿಧ್ಯುಕ್ತ ಚಾಲನೆ

ವಿಶ್ವವಿಖ್ಯಾತ ದಸರಾ ಉತ್ಸವಕ್ಕೆ ನಾಳೆ ವಿಧ್ಯುಕ್ತ ಚಾಲನೆ

Mysuru Dasara 2024 Inauguration

ಮೈಸೂರು,ಅ.2- ಮೈಸೂರು ಸಮೀಪದ ಚಾಮುಂಡಿ ಬೆಟ್ಟದಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ನಾಳೆ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಾಗುವುದು. ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಿಗೆ ನಾಳೆ ಬೆಳಗ್ಗೆ 9.15 ರಿಂದ 9.45 ರ ಒಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಪೂಜೆ ಸಲ್ಲಿಸುವ ಮೂಲಕ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಗುವುದು.

ನಾಡೋಜ, ಖ್ಯಾತ ಸಾಹಿತಿ ಡಾ.ಹಂಪ ನಾಗರಾಜಯ್ಯ ಅವರು ಈ ಬಾರಿಯ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದು, ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೇರಿದಂತೆ ಹಲವು ಗಣ್ಯರು, ರಾಜಕಾರಣಿಗಳು ಉಪಸ್ಥಿತರಿರಲಿದ್ದಾರೆ.

ಅದೇ ದಿನ ಸಂಜೆ 6ಕ್ಕೆ ಮೈಸೂರು ಅರಮನೆ ಆವರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದು, ಸಂಗೀತ ವಿದ್ವಾನ್‌ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.

ಚಾಮುಂಡಿ ಬೆಟ್ಟದಲ್ಲಿ ನಡೆಯಲಿರುವ ದಸರಾ ಮಹೋತ್ಸವದ ಪ್ರಧಾನ ಉದ್ಘಾಟನಾ ಸಮಾರಂಭದ ನಂತರ ಚಲನಚಿತೋತ್ಸವ, ಆಹಾರಮೇಳ, ವಸ್ತು ಪ್ರದರ್ಶನ, ಕುಸ್ತಿ ಪಂದ್ಯಾವಳಿ ಹಾಗೂ ಫಲ ಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಲಾಗುವುದು.ಅ.12ರಂದು ವಿಜಯದಶಮಿ ಕಾರ್ಯಕ್ರಮ ನಡೆಯಲಿದ್ದು, ಆ ದಿನ ಮೈಸೂರು ಅರಮನೆಯಿಂದ ಬನ್ನಿಮಂಟಪದವರೆಗೆ ಜಂಬೂ ಸವಾರಿ ನಡೆಯಲಿದೆ.

ಹಾಗೆಯೇ ಸಂಜೆ 7ಕ್ಕೆ ಬನ್ನಿಮಂಟಪದಲ್ಲಿ ಪಂಜಿನ ಕವಾಯತು ಮೆರವಣಿಗೆಯನ್ನು ಆಯೋಜಿಸಲಾಗಿದೆ.ಅ.3 ರಿಂದ 12ರವರೆಗೆ ನಡೆಯುವ ದಸರಾ ಮಹೋತ್ಸವಕ್ಕೆ ವ್ಯಾಪಕ ಪೊಲೀಸ್‌‍ ಬಂದೋಬಸ್ತ್‌ ಮಾಡಲಾಗಿದೆ ಎಂದು ಮೈಸೂರು ಪೊಲೀಸ್‌‍ ಆಯುಕ್ತರಾದ ಸೀಮಾ ಲಟ್ಕರ್‌ ಅವರು ತಿಳಿಸಿದ್ದಾರೆ. ಒಂಬತ್ತು ದಿನಗಳ ಕಾಲ ನಡೆಯಲಿರುವ ನವರಾತ್ರಿ ಉತ್ಸವದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಾನೂನು ಸುವ್ಯವಸ್ಥೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಈ ಬಾರಿ 5000ಕ್ಕೂ ಹೆಚ್ಚು ಪೊಲೀಸರನ್ನು ದಸರಾ ವಿಶೇಷ ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದು ತಿಳಿಸಿದರು.13,670 ಸಿಸಿ ಕ್ಯಾಮೆರಾ ಕಣ್ಗಾವಲನ್ನು ಮೈಸೂರಿನಾದ್ಯಂತ ಅಳವಡಿಸಲಾಗಿದ್ದು, ಪೊಲೀಸ್‌‍ ಸಹಾಯ ಕೇಂದ್ರಗಳನ್ನು ಪ್ರಮುಖ ಸ್ಥಳಗಳಲ್ಲಿ ತೆರೆಯಲಾಗಿದೆ. ಹಾಗೆಯೇ ಪ್ರಮುಖ ಸ್ಥಳಗಳಲ್ಲಿ ವಾಚ್‌ ಟವರ್‌ಗಳನ್ನು ಸ್ಥಾಪನೆ ಮಾಡಲಾಗಿದೆ ಎಂದು ಅವರು ವಿವರಿಸಿದರು.

ಮಹಿಳೆಯರ ರಕ್ಷಣೆಗಾಗಿಯೇ ಚಾಮುಂಡಿ ಕಾರ್ಯ ಪಡೆಯನ್ನು ಸಹ ದಸರಾ ಸಂದರ್ಭದಲ್ಲಿ ಆಯೋಜಿಸಲಾಗಿದೆ ಎಂದರು.ದಸರಾ ಮಹೋತ್ಸವದ ಅಂಗವಾಗಿ ಅ. 3ರಿಂದ 12ರವರೆಗೆ ಮೈಸೂರು ಅರಮನೆಯಲ್ಲಿ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಅರಮನೆಯಲ್ಲಿ ನವರಾತ್ರಿ ವೇಳೆಯಲ್ಲಿ ಯದು ವಂಶಸ್ಥರಾದ ಯದುವೀರ್‌ ಅವರು ಖಾಸಗಿ ದರ್ಬಾರನ್ನು ನಡೆಸಲಿದ್ದಾರೆ. ಸಂಸದರಾದ ಬಳಿಕ ಇದೇ ಮೊದಲ ಬಾರಿಗೆ ಯದುವೀರ್‌ ಅವರು ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಖಾಸಗಿ ದರ್ಬಾರನ್ನು ನಡೆಸುತ್ತಿದ್ದಾರೆ.

RELATED ARTICLES

Latest News