ಬೆಂಗಳೂರು, ಅ.8– ಮುಡಾ ಪ್ರಕರಣವನ್ನು ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪ್ರಚಾರಕ್ಕೆ ಬಳಸಿಕೊಂಡಿದ್ದಕ್ಕಾಗಿಯೇ ಕಾಂಗ್ರೆಸ್ ಪಕ್ಷಕ್ಕೆ ಸೋಲುಂಟಾಗಿದೆ ಎಂದು ಕಾಂಗ್ರೆಸ್ಸಿನ ಹಿರಿಯ ನಾಯಕ ಕೆ.ಬಿ. ಕೋಳಿವಾಡ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ತಾವು ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು. ಪಕ್ಷಕ್ಕೆ ಆಗುವ ಮುಜುಗರ ತಪ್ಪಿಸಬೇಕು ಎಂದು ಹೇಳಿದೆ. ಅದಕ್ಕೆ ಈಗಲೂ ಬದ್ದನಾಗಿದ್ದೇನೆ ಎಂದರು.
ಮುಡಾ ಪ್ರಕರಣವನ್ನು ಮುಂದಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಹರಿಯಾಣದ ಹಾದಿ ಬೀದಿಯಲ್ಲಿ ಪ್ರಚಾರ ಮಾಡಿದ್ದರು. ಅದು ಪರಿಣಾಮ ಬೀರಿದೆ, ಕಾಂಗ್ರೆಸ್ಸಿಗೆ ಸೋಲಾಗಿದೆ ಎಂದರು.
ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್ ಗೆಲುವು ಕಂಡಿದೆ. ಹರಿಯಾಣದಲ್ಲಿ ಸೋಲಿಗೆ ಮುಡಾ ಪ್ರಕರಣವೇ ಕಾರಣ. ಅಂದು ನಾನು ಹೇಳಿದ್ದು, ಈಗ ಸತ್ಯವಾಗಿದೆ. ತಾವು ಸಕ್ರಿಯ ರಾಜಕಾರಣದಿಂದ ದೂರವಿದ್ದರೂ ಕಾಂಗ್ರೆಸ್ ಪಕ್ಷದ ಪರವಾಗಿದ್ದೇನೆ ಎಂದರು.ನನ್ನ ಹೇಳಿಕೆಗೆ ಪ್ರತಿಯಾಗಿ ಹಲವು ಸಚಿವರು ಟೀಕೆ ಮಾಡಿದ್ದಾರೆ. ಅದು ಅವರ ಅಭಿಪ್ರಾಯ. ನಾನು ನನ್ನ ಹೇಳಿಕೆಯಿಂದ ಹಿಂದೆ ಸರಿಯುವುದಿಲ್ಲ ಈಗಲೂ ಅದಕ್ಕೆ ಬದ್ಧವಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್‍ನಲ್ಲಿ ನಾನು ಮತ್ತು ಮಲ್ಲಿಕಾರ್ಜುನ ಖರ್ಗೆ ಅತ್ಯಂತ ಹಿರಿಯರು. 1972ರಲ್ಲಿ ಒಮ್ಮೆಲೆ ಶಾಸಕರಾಗಿದ್ದವರು ಎಂದ ಅವರು, ತಮ್ಮ ಹೇಳಿಕೆಗೆ ಪ್ರತಿಯಾಗಿ ನೋಟಿಸ್ ನೀಡುವ ಅಗತ್ಯವಿಲ್ಲ. ನಾನು ಪಕ್ಷ ವಿರೋಧಿ ಹೇಳಿಕೆ ನೀಡಿಲ್ಲ. ನನ್ನ ಹೇಳಿಕೆಯಿಂದ ಪಕ್ಷಕ್ಕೆ ಧಕ್ಕೆಯೂ ಆಗಿಲ್ಲ ಎಂದರು.
ದಸರಾ ನಂತರ ಮುಖ್ಯಮಂತ್ರಿ ಬದಲಾಗುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿರಬಹುದು. ಈ ಬಗ್ಗೆ ನನಗೆ ಮಾಹಿತಿ ಇಲ್ಲ, ಅವರಿಗೆ ಯಾವ ವಿಚಾರ ತಿಳಿದಿದಿಯೋ ನನಗೆ ಗೊತ್ತಿಲ್ಲ. ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗುವುದಾದರೆ ಸಂತೋಷ. ನನಗೆ ಅವರ ಜೊತೆ ಯಾವುದೇ ಅಸಮದಾನ ಇಲ್ಲ ಎಂದರು.