Saturday, October 19, 2024
Homeಮನರಂಜನೆಹೊಂಬಾಳೆಗೆ 4 ರಾಷ್ಟ್ರ ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ ; ವಿಜಯ್ ಕಿರಗಂದೂರು

ಹೊಂಬಾಳೆಗೆ 4 ರಾಷ್ಟ್ರ ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ ; ವಿಜಯ್ ಕಿರಗಂದೂರು

Hombale Films booked a phenomenal win at the 70th National Film Awards

ಬೆಂಗಳೂರು, ಅ.9- ಒಂದೇ ವರ್ಷದಲ್ಲಿ ಹೊಂಬಾಳೆ ಫಿಲಂಸ್ ನಿರ್ಮಿಸಿರುವ ಚಿತ್ರ ಗಳಿಗೆ ನಾಲ್ಕು ರಾಷ್ಟ್ರ ಪ್ರಶಸ್ತಿ ಬಂದಿರುವುದು ಅತೀವ ಸಂತಸ ತಂದಿದೆ ಎಂದು ನಿರ್ಮಾಪಕ ವಿಜಯ್ ಕಿರಗಂದೂರು ಅವರು ಹೇಳಿದ್ದಾರೆ.

ನವದೆಹಲಿಯ ವಿಜ್ಞಾನ ಭವನದಲ್ಲಿ ನಿನ್ನೆ ಹಮ್ಮಿಕೊಂಡಿದ್ದ 70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಕನ್ನಡ ಚಿತ್ರರಂಗಕ್ಕೆ ಒಂದು ದೊಡ್ಡ ಹಿರಿಮೆ ಎಂದು ತಿಳಿಸಿದ್ದಾರೆ.

ಕೋವಿಡ್ ಮಹಾಮಾರಿ ಅಂಗವಾಗಿ 2022ರ ವರ್ಷದ ರಾಷ್ಟ್ರೀಯ ಪ್ರಶಸ್ತಿ ಸಮಾರಂಭ ವನ್ನು ನಿನ್ನೆ ಹಮ್ಮಿಕೊಂಡಿದ್ದು, ಹೊಂಬಾಳೆ ಫಿಲಂಸ್ ಸಂಸ್ಥೆಯಡಿ ನಿರ್ಮಾಣವಾಗಿದ್ದ ರಾಕಿಂಗ್‌ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಹಾಗೂ ರಿಷಭ್‌ಶೆಟ್ಟಿ ಅಭಿನಯದ ಕಾಂತಾರ ಚಿತ್ರಗಳು ತಲಾ ಎರಡೆರಡು ಪ್ರಶಸ್ತಿಗಳನ್ನು ಬಾಚಿಕೊಂಡಿವೆ.

ಕೆಜಿಫ್ ಚಿತ್ರವು ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಬಾಚಿಕೊಂಡಿದ್ದರೆ, ಈ ಸಿನಿಮಾದ ಮೈನವಿರೇಳಿಸುವ ಸಾಹಸಮಯ ದೃಶ್ಯಗಳಿಗಾಗಿ ಸಾಹಸ ನಿರ್ದೇಶಕ ಅನ್ಬರೈವ್‌ಗೂ ಪ್ರಶಸ್ತಿ ಲಭಿಸಿದೆ. ವಿಶ್ವದೆಲ್ಲೆಡೆ ಸದ್ದು ಮಾಡಿದ್ದ ಕಾಂತಾರ ಸಿನಿಮಾಕ್ಕೆ ಅತ್ಯುತ್ತಮ ಮನರಂಜನಾ ಚಿತ್ರ ಎಂಬ ಪ್ರಶಸ್ತಿ ಲಭಿಸಿದ್ದರೆ, ಇದೇ ಸಿನಿಮಾದ ನಟನೆಗಾಗಿ ರಿಷಭ್‌ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ.

‘ಕೆಜಿಎಫ್ 2 ಹಾಗೂ ಕಾಂತಾರ ಚಿತ್ರಗಳಲ್ಲಿ ಕೈಜೋಡಿಸಲು ಸಹಕರಿಸಿದ ಎಲ್ಲರೊಂದಿಗೂ ಸಂತಸ ಹಂಚಿಕೊಳ್ಳಲು ಬಯಸುತ್ತೇನೆ. ಈ ಸಿನಿಮಾಗಳನ್ನು ಪ್ರೋತ್ಸಾಹಿಸಿದ ಕನ್ನಡಿಗರಿಗೆ ಹಾಗೂ ಭಾರತದ ಪ್ರೇಕ್ಷಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ವಿಜಯ್ ತಿಳಿಸಿದ್ದಾರೆ.

ಇದೇ ವೇಳೆ ಕೆಜಿಎಫ್ 3 ಹಾಗೂ ಕಾಂತಾರ 2 ಚಿತ್ರಗಳ ಕುರಿತು ಮಾಹಿತಿ ನೀಡಿದ ಅವರು, ಮುಂದಿನ 4-5 ತಿಂಗಳಲ್ಲಿ ಯಶ್ ಅಭಿನಯದ ಕೆಜಿಎಫ್ 3 ಚಿತ್ರದ ಬಗ್ಗೆ ನಿಮ್ಮೊಂದಿಗೆ ಮಾಹಿತಿ ಹಂಚಿಕೊಳ್ಳುತ್ತೇನೆ, ರಿಷಭ್ ಶೆಟ್ಟಿ ನಟನೆ ಹಾಗೂ ನಿರ್ದೇಶನದಡಿ ಕಾಂತರಾ 2 ಚಿತ್ರದ ಚಿತ್ರೀಕರಣವು ಕುಂದಾಪುರದಲ್ಲಿ ನಡೆಯುತ್ತಿದ್ದು, 2025ರ ಆಗಸ್ಟ್ ನಲ್ಲಿ ಈ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆಗಳಿವೆ ಎಂದು ವಿಜಯ್ ಕಿರಂಗದೂರು ತಿಳಿಸಿದ್ದಾರೆ

RELATED ARTICLES

Latest News