ಬೆಂಗಳೂರು,ಜ.15-ಆಟೋದಲ್ಲಿ ಹೋಗುತ್ತಿದ್ದ ದಂಪತಿಯನ್ನು ಅಡ್ಡಗಟ್ಟಿ ಬೆದರಿಸಿ ಹಣ, ಆಭರಣ ದೋಚಿ ಪರಾರಿಯಾಗಿದ್ದ ಮೂವರು ದರೋಡೆಕೋರರನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿ 10 ಲಕ್ಷ ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ.
ಡಿ.22 ರಂದು ಬೆಳಗಿನ ಜಾವ ಕೆಂಗೇರಿ ಉಪನಗರದಲ್ಲಿ ವಾಸವಿರುವ ದಂಪತಿ ಆಟೋದಲ್ಲಿ ಹೋಗುತ್ತಿದ್ದಾಗ ಬೆಂಗಳೂರು-ಮೈಸೂರು ರಸ್ತೆಯ ಅಪಾರ್ಟ್‌ಮಂಟ್ ವೊಂದರ ಮುಂಭಾಗ ದರೋಡೆಕೋರರು ಆಟೋ ಅಡ್ಡಗಟ್ಟಿ ದಂಪತಿಯನ್ನು ಚಾಕುವಿನಿಂದ ಬೆದರಿಸಿ 1 ಲಕ್ಷ ಹಣ ಹಾಗೂ ಚಿನ್ನದ ಉಂಗುರ ಕಿತ್ತುಕೊಂಡು ಪರಾರಿಯಾಗಿದ್ದರು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ, ಮಾಹಿತಿಯನ್ನು ಕಲೆಹಾಕಿದ್ದಾರೆ. ತನಿಖೆ ಮುಂದುವರೆಸಿದ ಪೊಲೀಸರು ಖಚಿತ ಮಾಹಿತಿ ಮೇರೆಗೆ ರಾಮೋಹಳ್ಳಿಯಲ್ಲಿ ಮೂವರು ಆರೋಪಿಗಳನ್ನು ಆಟೋರಿಕ್ಷಾ, ದ್ವಿಚಕ್ರ ವಾಹನ ಸಮೇತ ಬಂಧಿಸಿ 5 ಸಾವಿರ ಹಣ ವಶಪಡಿಸಿಕೊಂಡಿದ್ದಾರೆ.
ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ದಂಪತಿಯನ್ನು ಸುಲಿಗೆ ಮಾಡಿರುವುದಾಗಿ ಹೇಳಿದ್ದಾರೆ. ಅಲ್ಲದೇ ನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ ಜಿಲ್ಲೆಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಕೊಲೆ, ಕೊಲೆ ಯತ್ನ,ಸುಲಿಗೆ , ಕಳವು, ಹಲ್ಲೆ ಪ್ರಕರಣಗಳಲ್ಲಿ ಭಾಗಿಯಾಗಿ ರುವುದು ಗೊತ್ತಾಗಿದೆ.
ಆರೋಪಿಗಳ ಮಾಹಿತಿಯಂತೆ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡಗೊಲ್ಲರಹಟ್ಟಿಯ ಖಾಲಿ ಜಾಗವೊಂದರಲ್ಲಿ ನಿಲ್ಲಿಸಿದ್ದ 1 ಆಟೋರಿಕ್ಷಾ, 2 ದ್ವಿಚಕ್ರ ವಾಹನಗಳು ಹಾಗೂ ಬೆಳ್ಳಿಯ ಚೈನ್, ಕಡಗವನ್ನು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದಲ್ಲಿ ಇಬ್ಬರು ಬಾಲಾಪರಾಧಿಗಳು ಭಾಗಿಯಾಗಿದ್ದು, ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ರಿಮೇಂಡರ್ ಹೋಂಗೆ ಕಳುಹಿಸಲಾಗಿದೆ ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.
