ಬೆಂಗಳೂರು,ಅ.15- ಜಾಮೀನು ಸಿಗದೆ ಬಳ್ಳಾರಿ ಜೈಲಿನಲ್ಲಿ ಕಾಲ ನೂಗುತ್ತಿರುವ ನಟ ದರ್ಶನ್ ಬೆನ್ನು ನೋವು ನಿಯಂತ್ರಣಕ್ಕೆ ಫಿಜಿಯೋ ಥೆರಪಿ ಜೊತೆಗೆ ಎರಡು ಬಾರಿ ಸ್ಕ್ಯಾನ್ ಮಾಡಿಸಿಕೊಳ್ಳಬೇಕೆಂದು ವೈದ್ಯರು ಸಲಹೆ ಮಾಡಿದ್ದಾರೆ.ಬಳ್ಳಾರಿ ಜೈಲು ಸೇರಿದ ನಂತರ ತೀವ್ರ ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್‌ಗೆ ಕೂಡಲೇ ಫಿಜಿಯೋ ಸ್ಕ್ಯಾನಿಂಗ್ ಮತ್ತು ಮಾತ್ರೆಗಳನ್ನು ಕೊಡಬೇಕೆಂದು ಜೈಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬಳ್ಳಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆ(ವಿಮ್ಸ್)ಯ ನರರೋಗ ತಜ್ಞ ಡಾ.ವಿಶ್ವನಾಥ್ ಅವರು ನಡೆಸಿರುವ ವೈದ್ಯಕೀಯ ತಪಾಸಣೆಯಲ್ಲಿ ದರ್ಶನ್‌ಗೆ ನರಗಳಿಂದಾಗಿ ಬೆನ್ನು ನೋವು ಕಾಣಿಸಿಕೊಂಡಿದೆ ಎಂಬುದನ್ನು ಖಚಿತಪಡಿಸಿದ್ದಾರೆ. ಕೂಡಲೇ ಅವರಿಗೆ ಜೈಲಿನಲ್ಲಿ ಫಿಜಿಯೋ ಥೆರಪಿ ನಡೆಸಬೇಕು. ಸೂಕ್ತ ವೈದ್ಯರಿಂದ ವೈದ್ಯಕೀಯ ಚಿಕಿತ್ಸೆಯನ್ನು ನೀಡುವಂತೆ ವಿಶ್ವನಾಥ್ ಅವರು ಬಳ್ಳಾರಿ ಜೈಲು ಅಧಿಕಾರಿಗಳಿಗೆ ವೈದ್ಯಕೀಯ ವರದಿ ಕುರಿತು ಇ-ಮೇಲ್ ಮಾಡಿದ್ದಾರೆ.
ಕಳೆದ ವಾರವಷ್ಟೇ ಬಳ್ಳಾರಿ ವಿಮ್ಸ್ ಆಸ್ಪತ್ರೆಯ ಆರ್ಥೋಪಿಡಿಷನ್ ಹಾಗೂ ನ್ಯೂರೋ ವೈದ್ಯರು ದರ್ಶನ್ ಅವರ ಆರೋಗ್ಯ ತಪಾಸಣೆ ನಡೆಸಿದ್ದರು. ಇದೀಗ ಮೆಡಿಕಲ್ ರಿಪೋರ್ಟ್ ಸಲ್ಲಿಸಿರುವ ವೈದ್ಯರು ಒಂದಷ್ಟು ಸಲಹೆ ಕೊಟ್ಟಿದ್ದಾರೆ. ಬೆನ್ನು ನೋವು ನಿಯಂತ್ರಣಕ್ಕೆ ಫಿಜಿಯೋ ಜೊತೆಗೆ ಎರಡು ಬಾರಿ ಸ್ಕ್ಯಾನಿಂಗ್ ಮಾಡಿಸಿಕೊಳ್ಳಬೇಕು ಹಾಗೂ ಕೆಲವು ಮಾತ್ರೆ, ಮುಲಾಮು ನೀಡುವಂತೆ ಉಲ್ಲೇಖಿಸಿದ್ದಾರೆ.
ವಿಮ್ಸ್ ನರರೋಗ ತಜ್ಞ ವೈದ್ಯ ಡಾ.ವಿಶ್ವನಾಥ್ ಸಲ್ಲಿಕೆ ಮಾಡಿರುವ ವೈದ್ಯಕೀಯ ವರದಿಯಲ್ಲಿ ಆರೋಪಿ ದರ್ಶನ್‌ಗೆ ನರಗಳಿಂದ ಬೆನ್ನು ನೋವಾಗುತ್ತಿದೆ. ಹೀಗಾಗಿ ಇಂದಿನಿಂದಲೇ ಜೈಲಿನಲ್ಲಿ ಫಿಜಿಯೋಥೆರಪಿ ನೀಡಬೇಕು ಎಂದು ಸೂಚಿಸಿದ್ದಾರೆ. ಮತ್ತೊಂದೆಡೆ ಮೆಡಿಕಲ್ ಬೆಡ್, ಚೇರ್ ಬಗ್ಗೆಯೂ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಬಳ್ಳಾರಿ ಜೈಲಾಧಿಕಾರಿಗಳು ವೈದ್ಯಕೀಯ ವರದಿಯನ್ನು ಮೇಲಾಧಿಕಾರಿಗಳಿಗೆ ಇ-ಮೇಲ್ ಮಾಡಿದ್ದಾರೆ. ಜೈಲು ವಿಭಾಗದ ಹಿರಿಯ ಅಧಿಕಾರಿಗಳ ಅನುಮತಿ ಸಿಕ್ಕ ಬಳಿಕ ಬಳ್ಳಾರಿ ಜಿಲ್ಲಾಸ್ಪತ್ರೆಯಿಂದ ಮೆಡಿಕಲ್ ಬೆಡ್, ಚೇರ್ ನೀಡುವ ಸಾಧ್ಯತೆಯಿದೆ.