Friday, November 22, 2024
Homeಬೆಂಗಳೂರುಬೆಂಗಳೂರಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುವ ಸ್ಥಳಕ್ಕೆ ಪ್ರಾಯೋಗಿಕ ಚಾಲನೆ

ಬೆಂಗಳೂರಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುವ ಸ್ಥಳಕ್ಕೆ ಪ್ರಾಯೋಗಿಕ ಚಾಲನೆ

Hundreds step forward to feed stray dogs in Bengaluru with BBMP’s innovative drive

ಬೆಂಗಳೂರು,ಅ.17- ಬಿಬಿಎಂಪಿ ಎಂಟು ವಲಯಗಳ ಒಂದೊಂದು ಸ್ಥಳದಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುವ ಸ್ಥಳಕ್ಕೆ ಇಂದು ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದ್ದು, ಯಶಸ್ವಿಯಾದರೆ ಎಲ್ಲಾ ಕಡೆ ಅನುಷ್ಠಾನಗೊಳಿಸಲಾಗುವುದೆಂದು ಪಶು ಸಂಗೋಪನಾ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ತಿಳಿಸಿದರು.

ಬಿಬಿಎಂಪಿಯ ಪಶುಸಂಗೋಪನಾ ಇಲಾಖೆ ವತಿಯಿಂದ ಎಲ್ಲಾ ವಲಯಗಳ ಆಯ್ದ ಸ್ಥಳಗಳಲ್ಲಿ ಇಂದು ಶ್ವಾನ ಮಹೋತ್ಸವ(ಕುಕುರ್ ತಿಹಾರ್) ಆಚರಿಸಲಾಗಿದ್ದು, ಪಾಲಿಕೆ ಕೇಂದ್ರ ಕಛೇರಿಯ ಡಾ. ರಾಜ್ ಕುಮಾರ್ ಗಾಜಿನ ಮನೆಯ ಬಳಿ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಹಬಾಳ್ವೆ ಹಾಗೂ ಒನ್ ಹೆಲ್ತ್ ಭಾಗವಾಗಿ ಬೀದಿ ನಾಯಿಗಳಿಗೆ ಆಹಾರ ನೀಡುವ ಪ್ರಕ್ರಿಯೆಯನ್ನು ಆರಂಭಿಸಲಾಗುತ್ತಿದೆ ಎಂದು ಹೇಳಿದರು.

ಈ ಯೋಜನೆಯಡಿ ಪೌರಕಾರ್ಮಿಕರು, ಆರೋಗ್ಯ ಅಧಿಕಾರಿಗಳು, ಪಶುಸಂಗೋಪನೆ ಅಧಿಕಾರಿಗಳು, ಪ್ರಾಣಿ ಪ್ರಿಯರು, ಪ್ರಾಣಿ ಪಾಲಕರು ಮತ್ತು ಆಸಕ್ತ ನಾಗರಿಕರು ಒಟ್ಟಾಗಿ ಹೋಟೆಲ್ /ರೆಸ್ಟೋರೆಂಟ್ ಗಳಿಮದ ಬೀದಿ ನಾಯಿಗಳಿಗೆ ಆಹಾರ ನೀಡುವ ಕೆಲಸ ಮಾಡುತ್ತದೆ. ಸಮುದಾಯ ನಾಯಿಗಳಿಗೆ ಆಹಾರ ದೊರಕದ ಪ್ರದೇಶಗಳಲ್ಲಿ ದಿನಕ್ಕೆ ಒಂದು ಬಾರಿ ಆಹಾರ ನೀಡುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.

ಪ್ರಾಯೋಗಿಕ ಜಾರಿ: ಪಾಲಿಕೆಯ 8 ವಲಯುಗಳಲ್ಲಿ ಗುರುತಿಸಿರುವ ಆಹಾರ ನೀಡುವ ಸ್ಥಳಗಳಲ್ಲಿಯೇ ಪ್ರತಿನಿತ್ಯ ಬೀದಿ ನಾಯಿಗಳಿಗೆ ಆಹಾರ ನೀಡಲಾಗುವುದು. ಸ್ಥಳದಲ್ಲಿ ಬೌಲ್ ನೀರು ಹಾಗೂ ಆಹಾರ ನೀಡುವ ಸ್ಥಳ ಎಂಬ ನಾಮ-ಫಲಕದ ವ್ಯವಸ್ಥೆ ಮಾಡಲಾಗಿರುತ್ತದೆ. ಒಂದು ತಿಂಗಳ ಕಾಲ ಪ್ರಾಯೋಗಿಕವಾಗಿ ಪರಿಶೀಲಿಸಲಾಗುವುದು.

ಈ ವೇಳೆ ಸಾರ್ವಜನಿಕರ ಸ್ಪಂದನೆ, ಆಹಾರ ನೀಡುವ ಸ್ಥಳ, ಸಮಯ, ಸ್ಥಳೀಯ ಪ್ರದೇಶಗಳಲ್ಲಿ ಬರುವ ಸಲಹೆ-ಸೂಚನೆಗಳು ಹಾಗೂ ಆಕ್ಷೇಪಣೆಗಳನ್ನು ಪರಿಶೀಲಿಸಲಾಗುವುದು. ಏನಾದರು ನ್ಯೂನ್ಯತೆಗಳಿದ್ದರೆ ಅದನ್ನು ಸರಿಪಡಿಸಿಕೊಂಡು ಪಾಲಿಕೆಯ ಎಲ್ಲಾ ಕಡೆ ಅನುಷ್ಠಾನಕ್ಕೆ ತರಲು ಸೂಕ್ತ ಕ್ರಮವಹಿಸಲಾಗುವುದು.

ಹೋಟೆಲ್ ಮತ್ತು ರೆಸ್ಟೋರೆಂಟ್ ಗಳಿಂದ ಉತ್ತಮ ಸ್ಪಂದನೆ: ಪಾಲಿಕೆ ವ್ಯಾಪ್ತಿಯ ಸ್ಥಳೀಯ ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರೊಟ್ಟಿಗೆ ಉಳಿಯುವ ಆಹಾರವನ್ನು ಬೀದಿ ನಾಯಿಗಳಿಗೆ ನೀಡುವ ಕುರಿತು ಚರ್ಚಿಸಲಾಗಿದ್ದು, ಅದಕ್ಕೆ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ. ಬೀದಿ ನಾಯಿಗಳಿಗೆ ಮಸಾಲೆ, ಎಣ್ಣೆ ಸೇರಿದಂತೆ ನಾಯಿಗಳಲ್ಲಿ ರೋಷ ಹೆಚ್ಚಲು ಕಾರಣವಾಗುವ ಅಂಶಗಳಿಲ್ಲದ ಆರೋಗ್ಯಕರ ಮತ್ತು ರುಚಿಕರವಾದ ಆಹಾರವನ್ನು ಒದಗಿಸಲು ಆಯಾ ಪ್ರದೇಶಗಳಲ್ಲಿನ ಹೋಟೆಲ್ ಗಳಿಗೆ ತಿಳಿಸಲಾಗಿದೆ ಎಂದು ಹೇಳಿದರು.

2.70 ಲಕ್ಷ ಬೀದಿ ನಾಯಿಗಳು: ಪಾಲಿಕೆ ವ್ಯಾಪ್ತಿಯಲ್ಲಿ 2.70 ಲಕ್ಷಕ್ಕೂ ಹೆಚ್ಚು ಬೀದಿ ನಾಯಿಗಳಿವೆ. ಬೀದಿ ನಾಯಿಗಳ ಕಚ್ಚುವ ಸಂಖ್ಯೆ, ಉದ್ರೇಖಗೊಳ್ಳುವದನ್ನು ನಾವು ತಡೆಯಬೇಕಿದೆ. ಈ ಬಗ್ಗೆ ಪಶು ವೈದ್ಯರು, ಪರಿಣಿತ ತಜ್ಞರು, ಪ್ರಾಣಿ ಪ್ರಿಯ ಸ್ವಯಂಸೇವಕರು ಬಳಿ ಚರ್ಚೆ ನಡೆಸಿದಾಗ ಬೀದಿ ನಾಯಿಗಳಿಗೆ ಆಹಾರ ಸರಿಯಾಗಿ ಸಿಗದಿರುವ ಪರಿಣಾಮ ಕಚ್ಚುವ ಹಾಗೂ ಉದ್ರೇಕಗೊಳ್ಳುವ ಘಟನೆಗಳು ನಡೆಯುತ್ತಿವೆ ಎಂಬುದು ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ಬೀದಿ ನಾಯಿಗಳಿಗೆ ಆಹಾರ ಸಿಗುವಂತಾಗಬೇಕೆಂಬ ಉದ್ದೇಶದಿಂದ ಈ ಕ್ರಮವನ್ನು ಅನುಸರಿಸಲಾಗುತ್ತಿದೆ.

ಶ್ವಾನ ಮಹೋತ್ಸವ ಆಚರಣೆ: ಪಾಲಿಕೆಯ ಪಶಸುಸಂಗೋಪನಾ ವಿಬಾಗದಿಂದ ಇಂದು 8 ಕಡೆ ಶ್ವಾನ ಮಹೋತ್ಸವ ಕುಕುರ್ ತಿರ್ಹಾ ಆಚರಿಸುವ ಮೂಲಕ ಬೀದಿ ಬದಿ ನಾಯಿಗಳಿಗೆ ಆಹಾರ ಸಿಗುವಂತೆ ಮಾಡಲಾಗಿದೆ. ಸಮುದಾಯದ ನಾಯಿಗಳಿಗೆ ಆಹಾರ ನೀಡಲು ಪಾಲಿಕೆ ಜೊತೆ ಕೈ ಜೋಡಿಸಲು ಸ್ಥಳೀಯ ನಿವಾಸಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ.

200ಕ್ಕೂ ಹೆಚ್ಚು ನೋಂದಣಿ: ಪ್ರಾಣಿ ಕಲ್ಯಾಣ ಯೋಜನೆಗಳಲ್ಲಿ ಭಾಗಿಯಾಗುವ ಸಲುವಾಗಿ ನೋದಂಣಿ ಮಾಡಿಕೊಳ್ಳಲು ಆಹ್ವಾನಿಸಲಾಗಿತ್ತು. ಈ ಪೈಕಿ 200ಕ್ಕೂ ಹೆಚ್ಚು ನೋಂದಣಿ ಮಾಡಿಕೊಂಡಿರುತ್ತಾರೆ.

ಬಿಬಿಎಂಪಿಯಿಂದ ಆಹಾರ ನೀಡುವ ಸ್ಥಳಗಳ ವಿವರ:

  • ಪೂರ್ವ ವಲಯ: ಪಾಲಿಕೆ ಕೇಂದ್ರ ಕಛೇರಿ, ಎನ್ ಆರ್ ಚೌಕ, ಹಡ್ಸನ್ ವೃತ್ತ.
  • ಮಹದೇವಪುರ ವಲಯ: ಸದಾಮಂಗಲ ರಸ್ತೆ ಮತ್ತು ಗ್ರಾಮದೇವತೆ ದೇವಸ್ಥಾನ, ಹೂಡಿ.
  • ಬೊಮ್ಮನಹಳ್ಳಿ ವಲಯ: ಗುಬ್ಬಲಾಲ ಮುಖ್ಯ ರಸ್ತೆ, ಕೋಣನಕುಂಟೆ, ಸುಬ್ರಹ್ಮಣ್ಯಪುರ,
    ವಸಂತಪುರ – ಆಯ್ದ ಸ್ಥಳಗಳು.
  • ಆರ್ .ಆರ್ ನಗರ ವಲಯ: ಬಿಸಿಎಂಸಿ ಲೇಔಟ್ , ಆರ್ .ಆರ್ ನಗರ
  • ದಾಸರಹಳ್ಳಿ ವಲಯ: ಬಾಗಲಗುಂಟೆ, ಮಂಜುನಾಥ ನಗರ ಮುಖ್ಯ ರಸ್ತೆ
  • ದಕ್ಷಿಣ ವಲಯ: ಸಿದ್ದಾಪುರ ವಾರ್ಡ್, ಗುಟ್ಟೆಪಾಳ್ಯ
  • ಯಲಹಂಕ ವಲಯ: ಟೆಲಿಕಾಂ ಲೇಔಟ್ , ಜಕ್ಕೂರ್
  • ಪಶ್ಚಿಮ ವಲಯ: ಗಾಯತ್ರಿ ನಗರ, ಬಹು ಸ್ಥಳಗಳು.

ಈ ವೇಳೆ ಪಶುಸಂಗೋಪನಾ ವಿಭಾಗದ ಜಂಟಿ ನಿರ್ದೇಶಕ ಡಾ. ಚಂದ್ರಯ್ಯ, ಸಹಾಯಕ ನಿರ್ದೇಶಕ ಡಾ. ಮಲ್ಲಪ್ಪ ಬಜಂತ್ರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

RELATED ARTICLES

Latest News