ಬಹ್ರೈಚ್,ಅ.17-ಕಳೆದ ಅ.13ರಂದು ಬಹ್ರೈಚ್‌ನಲ್ಲಿ ನಡೆದ ದುರ್ಗಾ ಮೂರ್ತಿ ಮೆರವಣಿಗೆ ವೇಳೆ ರಾಮ್ ಗೋಪಾಲ್ ಮಿಶ್ರಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ ಸರ್ಫರಾಜ್ ಮತ್ತು ತಾಲಿಬ್ ಮೇಲೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.
ಆರೋಪಿಗಳು ನೇಪಾಳಕ್ಕೆ ಪರಾರಿಯಾಗಲು ಯತ್ನಿಸಿದ್ದಾಗ ಗಡಿಯಲ್ಲಿ ಎನ್‌ಕೌಂಟರ್ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.ಆರೋಪಿಗಳ ಪತ್ತೆಗೆ ವಿಶೇಷ ಕಾರ್ಯಾಚರಣೆ ನಡೆಸಲಾಗಿತ್ತು.ಪಾತಕಿಗಳು ದೇಶ ಬಿಟ್ಟು ಪರಾರಿಯಾಗುತ್ತಿದ್ದಾರೆ ಎಂಬ ಮಾಹಿತಿ ಪಡೆದು ಅವರನ್ನು ಬಂಧಿಸಲು ಹೋದ ಪೊಲೀಸರ ಮೇಲೆ ಗುಂಡಿನ ದಾಳಿ ನಡೆದಿದೆ.
ಈ ವೇಳೆ ಪೊಲೀಸರು ಪ್ರತಿ ದಾಳಿ ನಡೆಸಿದಾಗ ಈ ಇಬ್ಬರು ಪಾತಕಿಗಳು ಗಾಯಗೊಂಡಿದ್ದು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹತ್ಯೆ ಪ್ರಕರಣದಲ್ಲಿ ಹೆಸರಿಸಲಾದ ಆರು ಆರೋಪಿಗಳಲ್ಲಿ ಒಬ್ಬನಾದ ಡ್ಯಾನಿಶ್ ಅಲಿಯಾಸ್ ಶಾಹೀರ್ ಖಾನ್ ಎಂಬಾತನನ್ನು ಬುಧವಾರ ಪೊಲೀಸರು ಬಂಧಿಸಿದ್ದರು.
ಕೊತ್ವಾಲಿ ನಗರದಲ್ಲಿ ಪ್ರಕರಣ ದಾಖಲಿಸಲಾಗಿದೆ, ಧ್ವಂಸ ಮತ್ತು ಬೆಂಕಿ ಹಚ್ಚಿದ ಆರೋಪದ ಮೇಲೆ ಎರಡೂ ಸಮುದಾಯಗಳಿಂದ ಒಂಬತ್ತು ಪ್ರಕರಣಗಳು ಪರಸ್ಪರರ ವಿರುದ್ಧ ದಾಖಲಾಗಿವೆ. ಬಹ್ರೈಚ್ ನೇಪಾಳದೊಂದಿಗೆ ಅಂತಾರಾಷ್ಟ್ರೀಯ ಗಡಿಯನ್ನು ಹಂಚಿಕೊಂಡಿದೆ. ಸಶಸ್ತ್ರ ಸೀಮಾ ಪಡೆ ಗಡಿಯಲ್ಲಿ ಜಾಗರೂಕತೆಯನ್ನು ಹೆಚ್ಚಿಸಿದೆ.
ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬಹ್ರೈಚ್‌ನಲ್ಲಿನ ಪರಿಸ್ಥಿತಿಯ ಕುರಿತು ಮಾಹಿತಿ ಪಡೆಯುತ್ತಿದ್ದಾರೆ ಮತ್ತು ಹಿರಿಯ ಪೊಲೀಸ್ ಮತ್ತು ಆಡಳಿತ ಅಧಿಕಾರಿಗಳ ಜೊತೆಗೆ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲು ನಿರ್ದೇಶನ ನೀಡಿದ್ದಾರೆ ಎಂದು ಸರ್ಕಾರ ತಿಳಿಸಿದೆ.