Thursday, December 5, 2024
Homeಬೆಂಗಳೂರುಕೆಎಸ್‌ಆರ್‌ಟಿಸಿ ಕಾರ್ಮಿಕರ ಕಲ್ಯಾಣಕ್ಕಾಗಿ ಹಲವು ಯೋಜನೆ

ಕೆಎಸ್‌ಆರ್‌ಟಿಸಿ ಕಾರ್ಮಿಕರ ಕಲ್ಯಾಣಕ್ಕಾಗಿ ಹಲವು ಯೋಜನೆ

ksrtc-inducts-refurbished-airavat-club-class-on-63rd-foundation-day

ಬೆಂಗಳೂರು,ಅ.17- ರಾಜ್ಯ ರಸ್ತೆ ಸಾರಿಗೆ ನಿಗಮವು ಕಾರ್ಮಿಕರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು ಇದರಿಂದ ಕಾರ್ಮಿಕರು ಸಂತೃಪ್ತಿಯಿಂದ ಕಾರ್ಯನಿರ್ವಹಿಸಲು ಸಹಕಾರಿಯಾಗುತ್ತದೆ ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಕೇಂದ್ರೀಯ ವಿಭಾಗದ ಘಟಕ-2ರ ಆವರಣದಲ್ಲಿ ನಿಗಮದ 63ನೇ ಸಂಸ್ಥಾಪನಾ ದಿನಾಚರಣೆ ಹಾಗೂ ನಿಗಮದಲ್ಲಿ ಪ್ರಪ್ರಥಮವಾಗಿ ಪುನಶ್ಚೇತನಗೊಳಿಸಿದ ಐರಾವತ ಕ್ಲಬ್ ಕ್ಲಾಸ್ ವಾಹನಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ದೇಶದಲ್ಲಿಯೇ ದೊಡ್ಡ ಸಾರಿಗೆ ಸಂಸ್ಥೆಯಾಗಿದ್ದು ಕಾರ್ಮಿಕ ಆಧಾರಿತ ಸಂಸ್ಥೆ ಆಗಿರುತ್ತದೆ. ನಿಗಮದ ವತಿಯಿಂದ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು ಇದು ಕಾರ್ಮಿಕರಿಗೆ ಹಾಗೂ ಅವರ ಕುಟುಂಬ ವರ್ಗಕ್ಕೆ ಅನುಕೂಲವಾಗಿರುತ್ತದೆ. ಜಾಗತಿಕ ಮಟ್ಟದಲ್ಲಿ ಇಂಧನದ ಬೆಲೆ ಹೆಚ್ಚಾದಾಗ ನಿಗಮದ ಪ್ರಯಾಣ ದರಗಳನ್ನು ಪರಿಷ್ಕರಿಸುವ ಕಾರ್ಯವನ್ನು ಕೈಗೊಳ್ಳಬೇಕು ಇದರಿಂದ ಕಾರ್ಮಿಕರಿಗೆ ಹೆಚ್ಚಿನ ರೀತಿಯಲ್ಲಿ ಸೌಲಭ್ಯಗಳನ್ನು ಒದಗಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ವಾಹನಗಳ ಪುನಶ್ಚೇತನ ಕಾರ್ಯವು ನೂತನ ಬಸ್ಸುಗಳನ್ನು ಸೇರ್ಪಡೆ ಮಾಡುವಲ್ಲಿ ಉಂಟಾಗಿರುವ ವಿಳಂಬದ ಕೊರತೆಯನ್ನು ತುಂಬಿದ್ದು, ಈ ಬಸ್ಸುಗಳು ನಾಲ್ಕು ಲಕ್ಷ ಕಿ.ಮೀವರೆಗೆ ಕಾರ್ಯಾಚರಣೆ ಮಾಡಬಹುದಾಗಿರುತ್ತದೆ. ಈ ವಿನೂತನ ಕಾರ್ಯಕ್ಕೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಅಭಿನಂದನಾರ್ಹರು ಎಂದು ಹೇಳಿದರು.

ಅಪಘಾತ ಹಾಗೂ ಕುಟುಂಬ ಕಲ್ಯಾಣ ಯೋಜನೆಯ ಪರಿಹಾರ ಧನವನ್ನು ಪಡೆದಿರುವ ಮೃತರ ಅವಲಂಬಿತರ ಕುಟುಂಬವು ಸದರಿ ಮೊತ್ತವನ್ನು ಸದುಪಯೋಗಪಡಿಸಿಕೊಂಡು ತಮ್ಮ ಮಕ್ಕಳ ವಿದ್ಯಾಭ್ಯಾಸ, ಆಸ್ತಿ ಖರೀದಿಗೆ ಬಳಸಿಕೊಳ್ಳುವಂತೆ ಮತ್ತು ಯಾವುದೇ ಪ್ರಲೋಭನೆಗಳಿಗೆ ಒಳಗಾಗದೆ ಹಣವನ್ನು ದುರುಪಯೋಗ ಮಾಡದಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಕೆಎಸ್‌ಆರ್‌ಟಿಸಿ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್, ಉಪಾಧ್ಯಕ್ಷ ಮೊಹಮ್ಮದ್ ರಿಜ್ವಾನ್ ನವಾಬ್, ಸಾರಿಗೆ ಇಲಾಖೆಯ ಕಾರ್ಯದರ್ಶಿ ಡಾ. ಎನ್.ವಿ.ಪ್ರಸಾದ್, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ವಿ. ಅನ್ಬುಕುಮಾರ್, ಸಿಬ್ಬಂದಿ ಮತ್ತು ಜಾಗೃತಿ ವಿಭಾಗದ ನಿರ್ದೇಶಕರಾದ ಡಾ.ನಂದಿನಿದೇವಿ ಮತ್ತಿತರರು ಪಾಲ್ಗೊಂಡಿದ್ದರು.

RELATED ARTICLES

Latest News