Thursday, December 12, 2024
Homeರಾಜ್ಯರಾಯಚೂರು ವಿವಿಗೆ ಮಹರ್ಷಿ ವಾಲ್ಮೀಕಿ ಹೆಸರು ನಾಮಕರಣ

ರಾಯಚೂರು ವಿವಿಗೆ ಮಹರ್ಷಿ ವಾಲ್ಮೀಕಿ ಹೆಸರು ನಾಮಕರಣ

Karnataka to rename residential schools, Raichur University after Maharishi Valmiki

ಬೆಂಗಳೂರು,ಅ.17- ಎಲ್ಲಾ ಎಸ್‌‍ಟಿ ವಸತಿ ಶಾಲೆಗಳಿಗೆ ಮತ್ತು ರಾಯಚೂರು ವಿಶ್ವ ವಿದ್ಯಾನಿಲಯಕ್ಕೆ ಮಹರ್ಷಿ ವಾಲೀಕಿ ಹೆಸರು ನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಶ್ರೀ ವಾಲೀಕಿ ಜಯಂತಿ ಪ್ರಯುಕ್ತ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ, ಐದು ಮಹನೀಯರಿಗೆ ವಾಲೀಕಿ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.

ಶಾಕುಂತಲಾ ನಾಟಕ ಬರೆದ ಕಾಳಿದಾಸ ಕುರುಬ ಸಮುದಾಯದವರು. ಮಹಾಭಾರತ ಬರೆದ ವ್ಯಾಸರು ಬೆಸ್ತ ಸಮುದಾಯದವರು. ರಾಮಾಯಣ ಬರೆದ ಮಹರ್ಷಿ ವಾಲೀಕಿ ಸಮುದಾಯದವರು. ತಳ ಸಮುದಾಯದವರು ಮಹಾನ್‌ ಕಾವ್ಯಗಳನ್ನು ಬರೆದಾಗ ಅದಕ್ಕೆ ಬೇರೆ ರೀತಿಯ ಕಥೆಗಳನ್ನು ಕಟ್ಟಲಾಗಿದೆ ಎಂದು ದೂರಿದರು.

ಶೂದ್ರರು ಶಿಕ್ಷಣ, ಸಂಸ್ಕೃತ ಕಲಿಯುವುದು ನಿಷಿದ್ಧವಾಗಿತ್ತು. ಇಂಥಾ ಸಂದರ್ಭದಲ್ಲೇ ವಾಲೀಕಿ ಸಂಸ್ಕೃತ ಕಲಿತು 24 ಸಾವಿರ ಶ್ಲೋಕಗಳ ಜಗತ್ಪ್ರಸಿದ್ಧ ರಾಮಾಯಣ ಮಹಾಕಾವ್ಯ ಬರೆದಿದ್ದಾರೆ. ದಾರಿಯಲ್ಲಿ ದರೋಡೆ ಮಾಡುತ್ತಿದ್ದವರು ಈ ರೀತಿ ಕಾವ್ಯ ರಚನೆ ಮಾಡಲು ಸಾಧ್ಯವೇ. ನಾವು ಶಿಕ್ಷಣ ಕಲಿಯುವಾಗ ವಾಲೀಕಿ ರಾಮಾಯಣ ಪಠ್ಯದಲ್ಲಿತ್ತು. ಸಮಾಜದಲ್ಲಿ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವ ಕೆಲಸವಾಗಿದೆ. ವಾಲೀಕಿ ಅವರು ಆದಿ ಕವಿ ಮತ್ತು ದಲಿತ ಕವಿ ಎಂಬುದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.

ವಾಲೀಕಿ ಅವರು ಸಮಪಾಲು, ಸಮಬಾಳು, ಸಮಾನ ಅವಕಾಶಗಳ ಬಗ್ಗೆ ಹೇಳಿದ್ದರು. ರಾಮಾಯಣದ ರಾಮರಾಜ್ಯ ಅಂದರೆ ಸಮಪಾಲಿನ ಸಮಾನ ಅವಕಾಶಗಳ ರಾಜ್ಯ ಎಂದರ್ಥ ಎಂದು ಹೇಳಿದರು.ರಾಮನ ಮಕ್ಕಳಾದ ಲವ ಕುಶರಿಗೆ ಆಶ್ರಯ ನೀಡಿ ಶಿಕ್ಷಣ ಕೊಟ್ಟಿದ್ದು ವಾಲೀಕಿ ಮಹರ್ಷಿಗಳು. ವಾಲೀಕಿ ವಿಶ್ವಮಾನವರಾಗಿದ್ದರು ಎನ್ನುವುದಕ್ಕೆ ಇದು ಸಣ್ಣ ಉದಾಹರಣೆ ಎಂದರು.

ಮೇಲ್ವರ್ಗದವರು ಮಾತ್ರ ವಿದ್ಯಾಭ್ಯಾಸ ಕಲಿಯುವ ಅವಕಾಶವಿತ್ತು. ಶೂದ್ರ, ಪರಿಶಿಷ್ಟರಿಗೆ ಈ ಅವಕಾಶ ಇರಲಿಲ್ಲ. ಅದನ್ನು ಮೀರಿ ಸಿಕ್ಕ ಅವಕಾಶದಲ್ಲೇ ವಿದ್ಯಾವಂತರಾಗಿ ಕಾಳಿದಾಸ, ವ್ಯಾಸ, ವಾಲೀಕಿ ಶ್ರೇಷ್ಠ ಸಾಧನೆ ಮಾಡಿದ್ದಾರೆ. ಅವರನ್ನು ಜಾತಿಯಿಂದ ಗುರುತಿಸಬಾರದು ಎಂದು ಹೇಳಿದರು.

ತಳ ಸಮುದಾಯಗಳಿಗೆ ವಸತಿ ಶಾಲೆಗಳನ್ನು ಮೊದಲು ಆರಂಭಿಸಿದ್ದು ನಾನು. ಪ್ರತೀ ಹೋಬಳಿಗೂ ಒಂದು ವಸತಿ ಶಾಲೆ ಮಾಡಿಯೇ ಮಾಡುತ್ತೇನೆ ಎಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ಪುನರುಚ್ಚರಿಸಿದರು. ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರವಾಗಲೀ, ಬಿಜೆಪಿ ಅಧಿಕಾರದಲ್ಲಿರುವ ಒಂದೇ ಒಂದು ರಾಜ್ಯದಲ್ಲಾಗಲೀ ಎಸ್‌‍ಸಿಎಸ್‌‍ಪಿ/ಟಿಎಸ್‌‍ಪಿ ಕಾಯ್ದೆಯನ್ನು ಜಾರಿಗೆ ತಂದಿಲ್ಲ ಏಕೆ? ಎಂದು ಪ್ರಶ್ನಿಸಿದರು.

ಬರೀ ಬಾಯಿ ಮಾತಲ್ಲಿ ಸಮಾನತೆ ಬರುವುದಿಲ್ಲ. ಆರ್ಥಿಕ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕು. ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ ಹೋಗದ ಹೊರತು ಸಮಾನತೆ ಬರುವುದಿಲ್ಲ ಎನ್ನುವ ಎಚ್ಚರಿಕೆಯನ್ನು ಬಾಬಾ ಸಾಹೇಬ್‌ ಅಂಬೇಡ್ಕರ್‌ ನೀಡಿದ್ದಾರೆ.
ಗ್ಯಾರಂಟಿಗಳ ಫಲಾನುಭವಿಗಳು ಬಿಜೆಪಿಯವರಿಗೆ ಸರಿಯಾಗಿ ಪಾಠ ಹೇಳಿ. ಬಿಜೆಪಿಯವರ ಸುಳ್ಳುಗಳಿಗೆ ಕಿವಿಗೊಟ್ಟು ಮೋಸ ಹೋಗದೆ ಬಿಜೆಪಿ ಸುಳ್ಳುಗಳಿಗೆ ಸರಿಯಾದ ಉತ್ತರ ಕೊಡಿ. ಬಡ್ತಿಯಲ್ಲಿ ಮೀಸಲಾತಿಯನ್ನು ಸುಪ್ರೀಂಕೋರ್ಟ್‌ ಎತ್ತಿ ಹಿಡಿಯಿತು. ಅದನ್ನು ಮೊದಲಿಗೆ ಜಾರಿಗೆ ತಂದಿದ್ದು ನಮ ಸರ್ಕಾರ. ಗುತ್ತಿಗೆಯಲ್ಲಿ ಮೀಸಲಾತಿ ಮೊದಲಿಗೆ ತಂದಿದ್ದು ನಮ ಸರ್ಕಾರ. ಇದನ್ನು ನಾಡಿನ ಜನತೆ ಅರ್ಥ ಮಾಡಿಕೊಳ್ಳಬೇಕು ಎಂದರು.

ರಾಜನಹಳ್ಳಿ ವಾಲೀಕಿ ಸಮುದಾಯದ ಮಠದ ಜಗದ್ಗುರು ಪ್ರಸನ್ನಾ ನಂದಪುರಿ ಶ್ರೀಗಳ ಸಾನಿದ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರಾದ ಸತೀಶ್‌ ಜಾರಕಿಹೊಳಿ, ಕೆ.ಎನ್‌.ರಾಜಣ್ಣ, ಹೆಚ್‌.ಕೆ.ಪಾಟೀಲ್‌‍, ಮಾಜಿ ಸಂಸದ ವಿ.ಎಸ್‌‍.ಉಗ್ರಪ್ಪ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವನಗೌಡ ದದ್ದಲ್‌‍, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಕೆಕೆಆರ್‌ಡಿಬಿ ಅಧ್ಯಕ್ಷರಾದ ಅಜಯ್‌ ಸಿಂಗ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಹಾಗೂ ವಿಧಾನಸಭೆ ಮತ್ತು ವಿಧಾನಪರಿಷತ್‌ ಸದಸ್ಯರುಗಳು ಸೇರಿ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

RELATED ARTICLES

Latest News