ಬೆಂಗಳೂರು, ಜ.16- ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರನ್ನು ಭೇಟಿ ಮಾಡುವ ಮೊದಲೇ, ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಕೆ.ಜೆ.ಚಾರ್ಜ್ ಮೂಲಕ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರನ್ನು ಸಂಪರ್ಕಿಸುವ ಯತ್ನ ನಡೆಸಿದ್ದಾರೆ.
ದೆಹಲಿ ಮತ್ತು ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಕದನ ಕುತೂಹಲ ಹೆಚ್ಚಿಸಿವೆ. ಅಧಿಕಾರ ಹಂಚಿಕೆ ಸಂಬಂಧಪಟ್ಟಂತೆ ಯಾವುದೇ ಗೊಂದಲಗಳಿಲ್ಲ ಎಂದು ಮುಖ್ಯಮಂತ್ರಿಯವರು ಒಮೆ ಹೇಳಿದರೆ, ಮತ್ತೊಮೆ ಹೈಕಮಾಂಡ್ ಹೇಳಿದಂತೆ ಕೇಳುತ್ತೇವೆ ಎಂದು ಹೇಳುವ ಮೂಲಕ ಗೊಂದಲ ಮೂಡಿಸುತ್ತಿದ್ದಾರೆ. ಇದು ಕಾಂಗ್ರೆಸ್ ಪಾಳಯದಲ್ಲಿ ನಡೆಯುತ್ತಿರುವ ಅಂತರ್ ಯುದ್ಧದ ಗಂಭೀರ ಸ್ವರೂಪವನ್ನು ಅನಾವರಣ ಮಾಡುತ್ತಿದೆ.
ಡಿ.ಕೆ.ಶಿವಕುಮಾರ್ ಅವರು ನಾಯಕತ್ವ ಬದಲಾವಣೆಯ ವಿಚಾರವಾಗಿ ಕಾರ್ಯಾಚರಣೆ ಆರಂಭಿಸುವ ಮೊದಲು ಇದೇ ಕೆ.ಜೆ.ಜಾರ್ಜ್ ಅವರನ್ನು ಭೇಟಿ ಮಾಡಿ ಬೆಂಬಲ ಯಾಚಿಸಿದ್ದರು.
2013ರಿಂದ 2018ರ ನಡುವೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಕೆ.ಜೆ.ಚಾರ್ಜ್ ಬೆಂಗಳೂರು ನಗರ ಅಭಿವೃದ್ಧಿ ಸಚಿವರಾಗಿ ಕೆಲಸ ಮಾಡಿದ್ದರು. ಅಂದಿನಿಂದಲೂ ಸಿದ್ದರಾಮಯ್ಯ ಬಣದಲ್ಲಿ ಕಟ್ಟಾ ಬೆಂಬಲಿಗರಾಗಿ ಗುರುತಿಸಿಕೊಂಡಿದ್ದಾರೆ.
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಆಪ್ತ ಬಳಗದಲ್ಲಿ ಕೆ.ಜೆ.ಜಾರ್ಜ್ ಕೂಡ ಒಬ್ಬರು ಎಂಬ ಪ್ರತೀತಿ ಇದೆ. ಕರ್ನಾಟಕದ ರಾಜಕಾರಣಕ್ಕೆ ಸಂಬಂಧಪಟ್ಟಂತೆ ಸೋನಿಯಾ ಗಾಂಧಿಯವರು ಕೆ.ಜೆ. ಜಾರ್ಜ್ ಅವರ ಸಲಹೆಯನ್ನು ಗಂಭೀರವಾಗಿ ಪರಿಗಣಿಸುತ್ತಾರೆ ಎಂಬ ಮಾತುಗಳಿವೆ.
ನಾಯಕತ್ವದ ಬದಲಾವಣೆ ವಿಚಾರ ಮುನ್ನೆಲೆಗೆ ಬಂದಾಗಲೆಲ್ಲಾ ರಾಹುಲ್ ಗಾಂಧಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಂತಿದ್ದಾರೆ. ಆದರೆ ಡಿ.ಕೆ.ಶಿವಕುಮಾರ್ ಸುಲಭಕ್ಕೆ ಸೋಲೊಪ್ಪಿಕೊಳ್ಳುತ್ತಿಲ್ಲ. ದಿನೇ ದಿನೇ ರಾಜ್ಯದಲ್ಲಿ ನಾಯಕತ್ವದ ಬದಲಾವಣೆಯ ಚರ್ಚೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.
ಈವರೆಗೂ ಡಿ.ಕೆ.ಶಿವಕುಮಾರ್ ಅವರ ಭೇಟಿಗೆ ಸಮಯ ನೀಡದೆ ರಾಹುಲ್ ಗಾಂಧಿಯವರು ತಪ್ಪಿಸಿಕೊಳ್ಳುತ್ತಿದ್ದರು. ತಮಿಳುನಾಡಿಗೆ ತೆರಳಲು ಮೈಸೂರಿಗೆ ಆಗಮಿಸಿದ ವೇಳೆ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದ ಡಿ.ಕೆ.ಶಿವಕುಮಾರ್ ಮುಖಾಮುಖಿಯಾಗಿ ಅಧಿಕಾರ ಹಂಚಿಕೆಯ ಕುರಿತು ಪ್ರಸ್ತಾಪಿಸಿದ್ದರು. ವಿಮಾನ ನಿಲ್ದಾಣದ ರನ್ ವೇನಲ್ಲಿ ಚರ್ಚೆ ಬೇಡ, ದೆಹಲಿಗೆ ಬನ್ನಿ ಎಂದು ಹೇಳಿ ರಾಹುಲ್ ಗಾಂಧಿ ತೆರಳಿದ್ದರು. ಅದರಂತೆ ಇಂದು ಡಿ.ಕೆ.ಶಿವಕುಮಾರ್ ದೆಹಲಿಗೆ ತೆರಳಿದ್ದಾರೆ. ಅಲ್ಲಿ ಅಸ್ಸಾಂ ವಿಧಾನಸಭೆಯ ಚುನಾವಣೆ ಪೂರ್ವ ತಯಾರಿ ಸಂಬಂಧಪಟ್ಟಂತೆ ಕಾಂಗ್ರೆಸ್ಸಿನ ಪ್ರಮುಖ ನಾಯಕರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಇದೇ ವೇಳೆ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಲಿದ್ದಾರೆ.
ಅಧಿಕಾರ ಹಂಚಿಕೆಯ ಸಂಬಂಧ ಪಟ್ಟಂತೆ ಸ್ಪಷ್ಟ ನಿರ್ಧಾರ ತಿಳಿಸದೇ ಇಷ್ಟು ದಿನ ಒಬ್ಬರ ಮೇಲೆ ಒಬ್ಬರು ಸಬೂಬು ಹೇಳಿ ಜಾರಿಕೊಳ್ಳುತ್ತಿದ್ದ ವರಿಷ್ಠ ನಾಯಕರು ಈಗ ತಮ ನಿಲುವು ತಿಳಿಸಲೇಬೇಕಿದೆ.
ಇತ್ತೀಚಿನ ಬೆಳವಣಿಗೆಗಳು ಸಿದ್ದರಾಮಯ್ಯ ಅವರ ಬಣಕ್ಕೆ ಹಿನ್ನಡೆಯಾದಂತೆ ಕಂಡುಬರುತ್ತಿದೆ. ರಾಹುಲ್ ಗಾಂಧಿಯವರು ಒಂದು ವೇಳೆ ಡಿ.ಕೆ.ಶಿವಕುಮಾರ್ ಅವರಿಗೆ ಭರವಸೆ ಕೊಟ್ಟುಬಿಟ್ಟರೆ ಮುಂದಿನ ಬೆಳವಣಿಗೆಗಳು ಕೈತಪ್ಪಿ ಹೋಗಲಿವೆ ಎಂಬ ಆತಂಕ ಸಿದ್ದರಾಮಯ್ಯ ಅವರನ್ನು ಕಾಡುತ್ತಿದೆ.
ಈ ಹಿನ್ನೆಲೆಯಲ್ಲಿ ಅತ್ತ ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿ ರಾಹುಲ್ ಗಾಂಧಿಯನ್ನು ಭೇಟಿ ಮಾಡುವ ಮೊದಲೇ ಸಿದ್ದರಾಮಯ್ಯ ಅವರು ಕೆ.ಜೆ.ಜಾರ್ಜ್ ಅವರ ಮೂಲಕ ಸೋನಿಯಾ ಗಾಂಧಿಯವರೊಂದಿಗೆ ಮಾತುಕತೆ ನಡೆಸುವ ಪ್ರಯತ್ನ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಅಧಿಕಾರ ಹಂಚಿಕೆಯ ಪೈಪೋಟಿ ದಿನೇ ದಿನೇ ಬಿರುಸುಗೊಳ್ಳುತ್ತಿವೆ. ದೆಹಲಿ ಕರ್ನಾಟಕ ಸೇರಿದಂತೆ ಎಲ್ಲೆಡೆ ಕುರ್ಚಿ ಕಿತ್ತಾಟ ಚಟುವಟಿಕೆಗಳು ರಾಜ್ಯ ಕಾಂಗ್ರೆಸ್ಸಿನ ಭಿನ್ನಮತವನ್ನು ಬಯಲು ಮಾಡುತ್ತಿವೆ.
