ಮೈಸೂರು,ಅ.20- ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ವಿರುದ್ಧ ಮತ್ತೊಂದು ಗಂಭೀರ ಭೂ ಅಕ್ರಮ ಆರೋಪವನ್ನು ಮೈಸೂರಿನಲ್ಲಿ ಆರ್‌ಟಿಐ ಕಾರ್ಯಕರ್ತ ಗಂಗರಾಜು ಮಾಡಿದ್ದಾರೆ. ಆರ್‌ಟಿಐ ಕಾರ್ಯಕರ್ತ ಗಂಗರಾಜು ಅವರು ಸಿಎಂ ಪತ್ನಿ ಪಾರ್ವತಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಅನುಮೋದಿತ 20 ಗುಂಟೆ ಜಾಗವನ್ನು ಖರೀದಿ ಮಾಡಿದ್ದಾರೆ.
ಅದರಲ್ಲಿ ರಸ್ತೆ ಮತ್ತು ಪೈಪ್ ಲೈನ್‌ಗೆ ಸೇರಿದ್ದ ಜಾಗವನ್ನು ರಿಜಿಸ್ಟರ್ ಮಾಡಿಕೊಂಡಿದ್ದು, ಆ ವಿಚಾರ ತಿಳಿಯುತ್ತಿದ್ದಂತೆ ರಿಜಿಸ್ಟ್ರೇಷನ್ ತಿದ್ದುಪಡಿ ಮಾಡಿಸಿದ್ದಾರೆ ಎಂದು ಆರ್‌ಟಿಐ ಕಾರ್ಯಕರ್ತ ಗಂಗರಾಜು ದಾಖಲೆ ಸಮೇತ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಪತ್ನಿ ಪಾರ್ವತಿ ಮುಡಾ ಅನುಮೋದಿತ 20 ಗುಂಟೆ ಜಾಗವನ್ನು 29.06.2023 ರಲ್ಲಿ ತಮ ಹೆಸರಿಗೆ ನೋಂದಣಿ ಮಾಡಿಕೊಂಡಿದ್ದಾರೆ. ಕೆಆರ್‌ಎಸ್ ರಸ್ತೆಯಲ್ಲಿರುವ ಸರ್ವೆ ನಂಬರ್ 454 ರಲ್ಲಿ ಗಣೇಶ್ ದೀಕ್ಷಿತ್ ಎಂಬುವರಿಗೆ ಸೇರಿದ 4 ಎಕರೆ 11 ಗುಂಟೆ ಜಾಗದಲ್ಲಿ, 20 ಗುಂಟೆ ಜಾಗವನ್ನು 1 ಕೋಟಿ 85 ಲಕ್ಷ ರೂ. ಕೊಟ್ಟು ಖರೀದಿಸಿದ್ದಾರೆ.
20 ಗುಂಟೆ ಅಂದರೆ 21,771/99 ಚದರ ಅಡಿ ಜಾಗದ ಪೈಕಿ 8998 ಚದರ ಅಡಿ ಜಾಗ ರಸ್ತೆ ಮತ್ತು ಪೈಪ್ ಲೈನ್ ಜಾಗವಾಗಿದ್ದು, ಅದನ್ನು ಸೇರಿಸಿ ರಿಜಿಸ್ಟ್ರೇಷನ್ ಮಾಡಿಕೊಂಡಿದ್ದಾರೆ ಎಂದು ದೂರಿದರು.ಆರ್‌ಟಿಐ ಕಾರ್ಯಕರ್ತ ಗಂಗರಾಜು ಈ ಬಗ್ಗೆ ಆರ್‌ಟಿಐ ಕಾರ್ಯಕರ್ತರು ಅರ್ಜಿ ಹಾಕುತ್ತಿದ್ದಂತೆ ಆ.31ರಲ್ಲಿ ಮುಡಾಗೆ ಸೇರಿದ ರಸ್ತೆ ಮತ್ತು ಪೈಪ್ ಲೈನ್ ಜಾಗವನ್ನು ಬಿಟ್ಟು ರಿಜಿಸ್ಟ್ರೇಷನ್ ತಿದ್ದುಪಡಿ ಮಾಡಿಸಿದ್ದಾರೆ ಎಂದು ಆರೋಪಿಸಿದರು.