Monday, December 2, 2024
Homeಅಂತಾರಾಷ್ಟ್ರೀಯ | Internationalನನ್ನ ಹತ್ಯೆಗೆ ಯತ್ನಿಸಿದ ಹಿಜ್ಬುಲ್ಲಾ ಭಾರೀ ಬೆಲೆ ತೆರಬೇಕಾಗುತ್ತದೆ : ನೆತನ್ಯಾಹು ವಾರ್ನಿಂಗ್

ನನ್ನ ಹತ್ಯೆಗೆ ಯತ್ನಿಸಿದ ಹಿಜ್ಬುಲ್ಲಾ ಭಾರೀ ಬೆಲೆ ತೆರಬೇಕಾಗುತ್ತದೆ : ನೆತನ್ಯಾಹು ವಾರ್ನಿಂಗ್

"Grave mistake": Netanyahu warns Iran, Hezbollah after "assassination" attempt

ಜೆರುಸಲೇಂ, ಅ.20- ನನ್ನನ್ನು ಹತ್ಯೆಗೈಯಲು ಯತ್ನಿಸಿ ಹಿಜ್ಬುಲ್ಲಾ ಸಂಘಟನೆ ಘೋರ ತಪ್ಪು ಮಾಡಿದೆ, ಇದಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಇಸ್ರೇಲ್ ಕರಾವಳಿಯ ಕೆಸರಿಯಾ ನಗರದಲ್ಲಿರುವ ತಮ್ಮ ಖಾಸಗಿ ನಿವಾಸದ ಮೇಲೆ ಹಿಜ್ಬುಲ್ಲಾ ನಡೆಸಿದ ಡ್ರೋನ್ ದಾಳಿಯ ಬಗ್ಗೆ ಕುರಿತು ನೆತನ್ಯಾಹು ಅವರು ಪ್ರತಿಕ್ರಿಯೆ ನೀಡಿದ್ದಾರೆ.

ದಾಳಿ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಹಿಜ್ಬುಲ್ಲಾ ಸಂಘಟನೆಯನ್ನು ಇರಾನ್ನ ಪ್ರಾಕ್ಸಿ ಎಂದು ಉಲ್ಲೇಖಿಸಿದ್ದು, ನನ್ನ ಮೇಲಿನ ಈ ಹತ್ಯೆ ಪ್ರಯತ್ನವು ನನ್ನನ್ನಾಗಲೀ ಅಥವಾ ಇಸ್ರೇಲ್ ಯುದ್ಧವನ್ನು ಮುಂದುವರೆಸುವುದನ್ನಾಗಲೀ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ನನ್ನನ್ನು ಮತ್ತು ನನ್ನ ಪತ್ನಿಯನ್ನು ಹತ್ಯೆ ಮಾಡಲು ಇರಾನ್ನ ಪ್ರಾಕ್ಸಿ ಹಿಜ್ಬುಲ್ಲಾ ನಡೆಸಿದ ಪ್ರಯತ್ನವು ಒಂದು ದೊಡ್ಡ ತಪ್ಪು. ಇದು ನಮ್ಮ ಭವಿಷ್ಯವನ್ನು ಭದ್ರಪಡಿಸುವ ಸಲುವಾಗಿ ನಮ್ಮ ಶತ್ರುಗಳ ವಿರುದ್ಧ ನಮ್ಮ ನ್ಯಾಯಯುತ ಯುದ್ಧವನ್ನು ಮುಂದುವರಿಸುವುದರಿಂದ ನನ್ನನ್ನಾಗಲೀ ಅಥವಾ ಇಸ್ರೇಲ್ ರಾಷ್ಟçವನ್ನಾಗಲೀ ತಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ನಿನ್ನೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಖಾಸಗಿ ನಿವಾಸದ ಮೇಲೆಯೇ ಏಕಾಏಕಿ ಡ್ರೋನ್ ದಾಳಿ ನಡೆದಿತ್ತು. ಆದರೆ, ಯಾವುದೇ ಹಾನಿ ಸಂಭವಿಸಿಲ್ಲ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಲೆಬನಾನ್‌ನಿಂದ ಈ ಡ್ರೋನ್ ದಾಳಿ ನಡೆದಿದ್ದು, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಖಾಸಗಿ ನಿವಾಸದ ಮೇಲೆ ಉಡಾಯಿಸಲಾಗಿದೆ. ಈ ವೇಳೆ ನೆತನ್ಯಾಹು ಮತ್ತು ಅವರ ಪತ್ನಿ ಸಾರಾ ಮನೆಯಲ್ಲಿ ಇರಲಿಲ್ಲ ಎಂದು ಇಸ್ರೇಲ್ ಪ್ರಧಾನ ಮಂತ್ರಿ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.

ಲೆಬನಾನ್‌ನಿಂದ ಹಾರಿಬಿಟ್ಟ ಡ್ರೋನ್‌ಗಳನ್ನು ಇಸ್ರೇಲ್‌ನ ವಾಯು ರಕ್ಷಣೆಯಾದ ಐರನ್ಡೋಮ್ ಹೊಡೆದು ಹಾಕಿದೆ. ಬಳಿಕ ರಾಜಧಾನಿ ಟೆಲ್ ಅವಿವ್‌ನಲ್ಲಿ ಎಚ್ಚರಿಕೆ ಗಂಟೆ ಕೂಗಿಸಲಾಗಿದೆ. ಹೈಪ್ ಕೊಲ್ಲಿ ಪ್ರದೇಶದಲ್ಲೂ ರಾಕೆಟ್‌ಗಳು ಹಾರಿಬರುತ್ತಿರುವ ಕಾರಣ ಸೈರನ್ ಮೊಳಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡ ನೆತನ್ಯಾಹು ಅವರು, ಹಮಾಸ್ ನಾಯಕ ಯಾಹ್ಯಾ ಸಿನ್ವಾರ್‌ನನ್ನು ಹೊಡೆದು ಹಾಕಲಾಗಿದೆ. ಇಸ್ರೇಲಿ ರಕ್ಷಣಾ ಪಡೆಗಳ ಕೆಚ್ಚೆದೆಯ ಸೈನಿಕರ ದಾಳಿಗೆ ಆತ ಸಾವನ್ನಪ್ಪಿದ್ದಾನೆ. ಇದು ಗಾಜಾದಲ್ಲಿ ಯುದ್ಧದ ಅಂತ್ಯವಲ್ಲ. ಅಂತ್ಯದ ಆರಂಭ. ಗಾಜಾದ ಜನರೇ, ಯುದ್ಧ ನಿಲ್ಲಲು ನನ್ನ ಬಳಿ ಒಂದು ಸರಳ ಉಪಾಯವಿದೆ. ಅದೇನೆಂದರೆ, ಹಮಾಸ್ ಉಗ್ರರು ಶಸ್ರಸ್ತ್ರಗಳನ್ನು ತ್ಯಜಿಸಿ ಶರಣಾಗಲಿ, ನಮ್ಮವರನ್ನು ಹಿಂದಿರುಗಿಸಿದರೆ ಸಂಘರ್ಷ ಕೊನೆಗೊಳ್ಳಲಿದೆ ಎಂದು ಹೇಳಿದ್ದರು.

ಅ.7 ರ ದಾಳಿಯಲ್ಲಿ ಹಮಾಸ್ ಉಗ್ರರು ಒತ್ತೆಯಾಳುಗಳನ್ನಾಗಿ ಕರೆದೊಯ್ದಿರುವವರಲ್ಲಿ 101 ಜನರಿದ್ದಾರೆ. ಇದರಲ್ಲಿ ಇಸ್ರೇಲ್ ಸೇರಿದಂತೆ ವಿವಿಧ ದೇಶಗಳ ಜನರು ಇದ್ದಾರೆ ಎಂದೂ ಇದೇ ವೇಳೆ ನೆತನ್ಯಾಹು ಬಹಿರಂಗಪಡಿಸಿದ್ದಾರೆ. ಹಮಾಸ್ ಉಗ್ರರು ಗಾಜಾದಲ್ಲಿ 101 ಜನರನ್ನು ಒತ್ತೆ ಇಟ್ಟುಕೊಂಡಿದ್ದಾರೆ. ಅವರೆಲ್ಲರನ್ನೂ ವಾಪಸ್ ಕರೆತರಲು ಇಸ್ರೇಲ್ ಬದ್ಧವಾಗಿದೆ. ಒತ್ತೆಯಾಳುಗಳ ಸುರಕ್ಷತೆ ಮುಖ್ಯವಾಗಿದೆ. ನ್ಯಾಯೋಚಿತವಾಗಿ ಅವರನ್ನು ಕರೆತರಲಾಗುವುದು ಎಂದು ಪ್ರತಿಜ್ಞೆ ಮಾಡಿದರು.

ಭಯೋತ್ಪಾದನೆಯ ವಿರುದ್ಧ ದೇಶ ನಡೆಸುತ್ತಿರುವ ಯುದ್ಧವು ತಾರ್ಕಿಕ ಅಂತ್ಯ ಕಾಣಲಿದೆ. ಅಲ್ಲಿಯವರೆಗೂ ಸಂಘರ್ಷ ನಡೆಯಲಿದೆ. ಒತ್ತೆಯಾಳುಗಳಿಗೆ ಹಾನಿಯಾದಲ್ಲಿ ಇಸ್ರೇಲ್ ಅಂಥವರಿಗೆ ಶಿಕ್ಷಿಸದೆ ಬಿಡುವುದಿಲ್ಲ ಎಂದೂ ಕಠಿಣ ಎಚ್ಚರಿಕೆ ನೀಡಿದ್ದಾರೆ.

RELATED ARTICLES

Latest News