Sunday, November 24, 2024
Homeರಾಜಕೀಯ | Politicsಸ್ವತಂತ್ರವಾಗಿ ಸ್ಪರ್ಧಿಸಲು ಮುಂದಾದ ಸಿ.ಪಿ.ಯೋಗೇಶ್ವರ್‌

ಸ್ವತಂತ್ರವಾಗಿ ಸ್ಪರ್ಧಿಸಲು ಮುಂದಾದ ಸಿ.ಪಿ.ಯೋಗೇಶ್ವರ್‌

CP Yogeshwar to contest as an independent in Channapatna Bypoll

ಬೆಂಗಳೂರು, ಅ.21-ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ನನಗೆ ಬಿಜೆಪಿ ಟಿಕೆಟ್‌ ಸಿಗದಿದ್ದರೆ, ಸ್ವತಂತ್ರವಾಗಿ ಸ್ಪರ್ಧಿಸುವ ಯೋಚನೆಯಿದೆ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಹೇಳಿರುವುದು ಬಿಜೆಪಿ ಹಾಗೂ ಜೆಡಿಎಸ್‌‍ ಮೈತ್ರಿ ನಡುವೆ ಇನ್ನಷ್ಟು ಬಿಕ್ಕಟ್ಟು ಸೃಷ್ಟಿಸಿದೆ.

ಜೆಡಿಎಸ್‌‍ನಿಂದ ಸ್ಪರ್ಧಿಸಿದರೆ ಕಷ್ಟ ಆಗುತ್ತದೆ. ಬಿಜೆಪಿಯಿಂದಲೇ ಸ್ಪರ್ಧಿಸಬೇಕೆಂಬ ಆಸೆ ಇದೆ. ಆದರೆ, ಅವರು ಆಗಲ್ಲ ಎನ್ನುತ್ತಿದ್ದಾರೆ. ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಮನಸ್ಸಿನಲ್ಲಿ ಅವರ ಮಗನಿಗೆ ಟಿಕೆಟ್‌ ಕೊಡಬೇಕು ಎಂಬ ಆಸೆ ಇದೆ. ಅವರ ಮನಸಲ್ಲೇ ಆ ರೀತಿ ಇದ್ದರೆ, ಏನು ಮಾಡಲಾಗುತ್ತದೆ ಎಂದು ಅವರು ಪ್ರಶ್ನಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾನು ಸ್ವತಂತ್ರವಾಗಿ ಸ್ಪರ್ಧಿಸುವ ಯೋಚನೆ ಇದೆ. ಇನ್ನೂ ಎರಡು ದಿನ ಕಾದು ನೋಡುವ ತಂತ್ರವನ್ನು ಉಪಯೋಗಿಸುತ್ತೇನೆ. ನಾನು ಈ ಕ್ಷಣಕ್ಕೂ ಬಿಜೆಪಿಯಿಂದ ಸ್ಪರ್ಧೆ ಮಾಡಬೇಕು ಎಂದುಕೊಂಡಿದ್ದೇನೆ. ಬೆಳಿಗ್ಗೆ ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಾರೆ ಎಂದು ನಮ ಜಿಲ್ಲಾಧ್ಯಕ್ಷರು ಹೇಳಿದ್ದರು. ಆ ರೀತಿ ಹೇಳಿದ ಮೇಲೆ ಇನ್ನೇನು ಇದೆ? ಒಳ್ಳೆಯದಾಗಲಿ ಎಂದು ಶುಭ ಹಾರೈಸುವುದಾಗಿ ಅವರು ಹೇಳಿದರು.

ಚನ್ನಪಟ್ಟಣ ಕ್ಷೇತ್ರದ ಚುನಾವಣೆಯಲ್ಲಿ ನನಗೆ ಅವಕಾಶ ಕೊಟ್ಟರೆ ಎನ್‌ಡಿಎ ಅಭ್ಯರ್ಥಿ ಆಗುತ್ತೇನೆ. ಆದರೆ, ಅವಕಾಶ ಸಿಗಬೇಕು ಅಷ್ಟೇ. ನಾನು ನನ್ನ ಪಾರ್ಟನರ್‌ ಕುಮಾರಸ್ವಾಮಿ ಮೂರು ದಿನಗಳಿಂದ ಚರ್ಚೆ ಮಾಡುತ್ತಿದ್ದೇವೆ. ಜೆಡಿಎಸ್‌‍ ಚಿನ್ಹೆಯಡಿ ಸ್ಪರ್ಧಿಸಿ ಎಂದು ಅವರು ಮುಕ್ತವಾಗಿ ಹೇಳಿಲ್ಲ. ಅವರ ಪಕ್ಷದ ಮುಖಂಡರು ಬಂದಾಗ ಹೇಳಿದ್ದರೂ ಅಷ್ಟೇ. ನಾನು ನನ್ನ ತಾಲ್ಲೂಕಿನ ಜನರ ಜೊತೆಗೂ ಇದರ ಬಗ್ಗೆ ಚರ್ಚೆ ಮಾಡಿದ್ದೇನೆ. ಬಹಳ ಭಿನ್ನಾಭಿಪ್ರಾಯ ಬಂದಿದೆ ಎಂಬುದನ್ನು ಅವರು ಒಪ್ಪಿಕೊಂಡರು.

ಚನ್ನಪಟ್ಟಣದಲ್ಲಿ ಕುಮಾರಸ್ವಾಮಿಯವರಿಗೆ ತಮ ಕುಟುಂಬದವರಿಗೇ ಟಿಕೆಟ್‌ ಕೊಡಬೇಕೆಂಬ ಆಸೆಯಿದೆ. ತಾವು ರಾಜೀನಾಮೆ ಕೊಟ್ಟ ನಂತರದಿಂದಲೂ ನಿಖಿಲ್‌ ಕಣಕ್ಕಿಳಿಸಬೇಕು ಎಂದು ಅವರ ಮನಸಿನಲ್ಲಿದೆ. ಅದಕ್ಕಾಗಿ ಪ್ರಯತ್ನ ಮಾಡುತ್ತಿದ್ದಾರೆ. ಮನಸಲ್ಲಿ ಆ ಭಾವನೆ ಇರುವಾಗ ಒತ್ತಡ ತರಲು ಹೇಗೆ ಸಾಧ್ಯ? ಇಷ್ಟು ವರ್ಷ ವಿರೋಧ ಮಾಡಿಕೊಂಡು ಬಂದಿದ್ದೀರಿ, ಈಗ ಮೈತ್ರಿ ಆಗಿದೆ.

ಈಗ ಅನಾವಶ್ಯಕವಾಗಿ ಜೆಡಿಎಸ್‌‍ಗೆ ಹೋಗುವುದು ಬೇಡವೆಂದು ತಾಲೂಕಿನ ಜನರಲ್ಲಿ ಅಭಿಪ್ರಾಯ ಬಂದಿದೆ. ಮೊದಲೇ ನನಗೆ ಪಕ್ಷಾಂತರಿ ಎಂದು ಕರೆಯುತ್ತಾರೆ. ಹಾಗಾಗಿ ಬಿಜೆಪಿಯಿಂದಲೇ ಸ್ಪರ್ಧಿಸಿ ಎಂದು ಹೇಳುತ್ತಿದ್ದಾರೆ. ನಾನು ಬಿಜೆಪಿಯಿಂದಲೇ ನಿಲ್ಲಲು ನಿರ್ಧರಿಸಿದ್ದೇನೆ. ಆದರೆ, ನನಗೆ ಯಾರೂ ಬೆಂಬಲ ಕೊಡುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಕಾಂಗ್ರೆಸ್‌‍ ನಾಯಕರ ಭೇಟಿಯಾಗಿದ್ದಾರೆಂಬ ಆರೋಪ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ನನ್ನ ಮೇಲೆ ಅನವಶ್ಯಕವಾಗಿ ಆರೋಪ ಮಾಡುವ ಅಗತ್ಯ ಇಲ್ಲ. ಕುಮಾರಸ್ವಾಮಿ ನನಗೆ ಟಿಕೆಟ್‌ ಕೊಡದಿದ್ದರೆ ಅವರ ಮಗನಿಗೇ ಕೊಡಲಿ. ಆದರೆ, ಕಾಂಗ್ರೆಸ್ಸಿಗರ ಭೇಟಿ ಮಾಡಿದ್ದೆ ಎಂಬ ಆರೋಪ ಮಾಡಬೇಡಿ. ನಾನು ಈವರೆಗೆ ಕಾಂಗ್ರೆಸ್‌‍ನ ಯಾವ ನಾಯಕರನ್ನೂ ಭೇಟಿಯಾಗಿಲ್ಲ. ಒಂದು ವೇಳೆ ಕಾಂಗ್ರೆಸ್‌‍ ನಾಯಕರ ಭೇಟಿ ಮಾಡಿದ್ದರೂ ತಪ್ಪೇನಿಲ್ಲ. ಆದರೆ, ಇಲ್ಲಿಯವರೆಗೆ ಕಾಂಗ್ರೆಸನ ಯಾರನ್ನೂ ಭೇಟಿ ಮಾಡಿಲ್ಲ ಎಂದು ಯೋಗೇಶ್ವರ್‌ ಸ್ಪಷ್ಟಪಡಿಸಿದರು.

ಚನ್ನಪಟ್ಟಣ ಜೆಡಿಎಸ್‌‍ ಕ್ಷೇತ್ರ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌‍.ಯಡಿಯೂರಪ್ಪ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪನವರು ಈ ಹೇಳಿಕೆ ಕೊಡುವ ಅಗತ್ಯವಿರಲಿಲ್ಲ. ಅವರೇ ತೀರ್ಮಾನ ಮಾಡಬೇಕು. ಆದರೆ, ಕುಮಾರಸ್ವಾಮಿ ಅವರಿಗೆ ದೊಡ್ಡ ಮನಸ್ಸು ಇದ್ದಿದ್ದರೆ ಅನುಕೂಲ ಆಗುತ್ತಿತ್ತು. ಅವರು ಉದ್ದೇಶಪೂರ್ವಕವಾಗಿ ಈ ಹೇಳಿಕೆ ಕೊಟ್ಟಿದ್ದಾರೆ. ಇದರ ಹಿಂದೆ ದುರುದ್ದೇಶ ಇದೆ ಎಂದು ಕಿಡಿಕಾರಿದರು.

ಜೆಡಿಎಸ್‌‍ ಕ್ಷೇತ್ರವೆಂಬುದು ಗೊತ್ತಿದೆ. ಯಡಿಯೂರಪ್ಪ ಹೇಳಿಕೆ ಹಿಂದೆ ದುರದ್ದೇಶ ಇದೆ. ಅವರು ಯಾರು ಹೇಳಿಕೆ ಕೊಡುವುದಕ್ಕೆ? ಪಕ್ಷದ ರಾಜ್ಯಾಧ್ಯಕ್ಷರು ಹೇಳಿಕೆ ಕೊಟ್ಟಿದ್ದರೆ ನಡೆಯುತ್ತಿತ್ತು. ಉದ್ದೇಶಪೂರ್ವಕವಾಗಿ ಯಡಿಯೂರಪ್ಪ ಅವರ ಮೂಲಕ ಹೇಳಿಕೆ ಕೊಡಿಸಿದ್ದಾರೆ. ನಾನು ಸೂಕ್ಷ್ಮವಾಗಿ ಗಮನಿಸಿದ್ದೇನೆಎಂದು ಯೋಗೇಶ್ವರ್‌ ಹೇಳಿದರು.

RELATED ARTICLES

Latest News