ಹುಬ್ಬಳ್ಳಿ : ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆ ಮಹತ್ವದ ಬೆಳವಣಿಗೆಗಳಾಗುತ್ತಿವೆ. ಬಿಜೆಪಿಯ ಪ್ರಮುಖ ನಾಯಕ ಹಾಗೂ ವಿಧಾನ ಪರಿಷತ್ ಸಿ.ಪಿ.ಯೋಗೇಶ್ವರ್ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿರುವ ಬೆನ್ನಲ್ಲೆ ವಿಧಾನ ಪರಿಷತ್ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹುಬ್ಬಳ್ಳಿಗೆ ತೆರಳಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಎಂಎಲ್ಸಿ ಸ್ಥಾನಕ್ಕೆ ಸ್ವಯಿಚ್ಚೆಯಿಂದ ರಾಜೀನಾಮೆ ನೀಡಿದ್ದೇನೆ. ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಜೆಡಿಎಸ್ ನಾಯಕರ ಜೊತೆ ತಮಗೆ ಯಾವುದೇ ವೈಯಕ್ತಿಕ ದ್ವೇಷ ಇಲ್ಲ. ಆದರೆ ಕಳೆದ 25 ವರ್ಷದಿಂದ ಪರಸ್ಪರ ವಿರುದ್ಧ ರಾಜಕಾರಣ ಮಾಡಿಕೊಂಡು ಬಂದಿದ್ದೇವೆ. ಬಿಜೆಪಿ ಮತ್ತು ಜೆಡಿಎಸ್ ಎರಡು ಪಕ್ಷಗಳ ಕಾರ್ಯಕರ್ತರು ನನಗೆ ಜೆಡಿಎಸ್ನಿಂದ ಸ್ಪರ್ಧೆ ಮಾಡಲು ಒಪ್ಪಿಲ್ಲ ಎಂದು ಹೇಳಿದರು.
ಕಳೆದ 15 ವರ್ಷಗಳಿಂದಲೂ ಬಿಜೆಪಿಯಲ್ಲಿ ಕೆಲಸ ಮಾಡಿದ್ದೇನೆ. ಪಕ್ಷ ಕಟ್ಟಿದ್ದೇನೆ. ಮುಂದೆ ಕೂಡ ಬಿಜೆಪಿಗೆ ಅನುಕೂಲವಾಗಲಿದೆ ಎಂಬ ಕಾರಣಕ್ಕೆ ಎನ್ಡಿಎ ಅಭ್ಯರ್ಥಿಯಾಗಲು ಇಚ್ಚಿದ್ದೇನೆ. ವಿಧಾನ ಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸೇರಿದಂತೆ ಅನೇಕ ತಮ್ಮೊಂದಿಗೆ ನಾಯಕರು ಮಾತನಾಡುತ್ತಿದ್ದಾರೆ. ನೋಡೋಣ. ಮುಂದೆ ಏನಾಗುತ್ತದೆ. ಸದ್ಯಕ್ಕಂತೂ ನಾನು ಸ್ವತಂತ್ರವಾಗಿ ಸ್ಫರ್ಧೆ ಮಾಡಬೇಕು ಎಂದಿದ್ದೇನೆ ಎಂಂದು ಹೇಳಿದರು.
ಸಾರ್ವಜನಿಕ ಬದುಕಿನಲ್ಲಿ ಜನಗಳ ನಡುವೆ ಇರಬೇಕು ಎಂದು ಆಸೆ ಪಟ್ಟವನು ನಾನು. ಮುಂದೆ ವಿಧಾನಸಭೆ ಉಪಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧೆ ಮಾಡುತ್ತೇನೆ. ಕಾಂಗ್ರೆಸ್ ಸೇರುವ ಉದ್ದೇಶ ಇಲ್ಲ,ಆ ಪಕ್ಷದ ಯಾರನ್ನೂ ಸಂಪರ್ಕ ಮಾಡಿಲ್ಲ. ಮುಂದೆ ಏನಾಗುತ್ತೋ ನೋಡೋಣ.
ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಟ್ಟಾಗಿದೆ, ಅಂಗೀಕಾರವೂ ಆಗಿದೆ. ಇದರಲ್ಲಿ ಬ್ಲಾಕ್ ಮೇಲ್ ಇಲ್ಲ. ವಿಧಾನ ಪರಿಷತ್ ಸದಸ್ಯನಾಗಿ ಉಪಚುನಾವಣೆಗೆ ಹೆದರಿಸಲು ಸಾಧ್ಯವಿಲ್ಲ. ಬಿಜೆಪಿ ನಾಯಕರು ನನ್ನ ಪರವಾಗಿ ಧ್ವನಿ ಎತ್ತಿದ್ದಾರೆ.
ಸ್ವಾಭಾವಿಕವಾಗಿ ಚೆನ್ನಪಟ್ಟಣ ಕುಮಾರಸ್ವಾಮಿ ಗೆದ್ದಿದ್ದ ಕ್ಷೇತ್ರ. ಅವರು ಒಪ್ಪಬೇಕಿತ್ತು. ಈಗಲೂ ಬಿಜೆಪಿ ನಾಯಕತ್ವ ಮತ್ತು ಕುಮಾರಸ್ವಾಮಿ ಅವರಲ್ಲಿ ನನ್ನ ಸ್ಪರ್ಧೆಗೆ ಅವಕಾಶ ನೀಡುವಂತೆ ಮನವಿ ಮಾಡಿಕೊಳ್ಳುತ್ತೇನೆ ಎಂದು ಕೇಳಿಕೊಂಡರು.ಒಟ್ಟಿನಲ್ಲಿ ಚನ್ನಪಟ್ಟಣ ಉಪಚುನಾವಣೆ ಎನ್ ಡಿ ಎ ಮಿತ್ರಕೂಟಕ್ಕೆ ಅಗ್ನಿ ಪರೀಕ್ಷೆಯಾಗಿದೆ.