Thursday, November 21, 2024
Homeಜಿಲ್ಲಾ ಸುದ್ದಿಗಳು | District Newsಹಾಸನಾಂಬೆ ದೇವಸ್ಥಾನ ವಿಶ್ವದಾದ್ಯಂತ ಖ್ಯಾತಿ ಗಳಿಸುತ್ತಿದೆ : ವಿ.ಸೋಮಣ್ಣ

ಹಾಸನಾಂಬೆ ದೇವಸ್ಥಾನ ವಿಶ್ವದಾದ್ಯಂತ ಖ್ಯಾತಿ ಗಳಿಸುತ್ತಿದೆ : ವಿ.ಸೋಮಣ್ಣ

Hasanamba is gained world fame : V. Somanna

ಹಾಸನ,ಅ.28- ನಗರ ದೇವತೆ ಹಾಸನಾಂಬೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಸೂರ್ಯ-ಚಂದ್ರ ಇರುವವರೆಗೂ ತಾಯಿಯ ಶಕ್ತಿ ವಿಶ್ವದಾದ್ಯಂತ ಇದ್ದೇ ಇರುತ್ತದೆ ಎಂದು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ಕುಟುಂಬ ಸಮೇತರಾಗಿ ದೇವಿಯ ದರ್ಶನ ಪಡೆದು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಹಾಸನ ಜಿಲ್ಲಾ ಉಸ್ತುವಾರಿ ಸಚಿವನಾಗಿ ದೇವಿಯ ಮಹಾತ್ಮೆಯನ್ನು ಬಲ್ಲವನಾಗಿದ್ದೇನೆ. ನನ್ನ ಅನುಭವದಲ್ಲಿ ಈ ಬಾರಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅತ್ಯಂತ ಶಿಸ್ತುಬದ್ಧವಾಗಿ ಭಕ್ತರಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅವರಿಗೆ ಭಾರತ ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಹಾಸನಾಂಬೆ ದೇವಿ ವಿಶ್ವದಾದ್ಯಂತ ಖ್ಯಾತಿ ಗಳಿಸಿದೆ. ತಾಯಿಯ ಪವಾಡಗಳು ಅಪಾರ. ಈ ಭಾಗದ ಭಕ್ತರಿಗೆ ಇಷ್ಟಾರ್ಥಗಳನ್ನು ಕರುಣಿಸುವ ಶಕ್ತಿರೂಪಿ ದೇವಿಯಾಗಿದ್ದಾಳೆ. ಜಾತ್ರಾ ಮಹೋತ್ಸವದ ಕೊನೆಯ ದಿನ ಹಚ್ಚಿದ ದೀಪ ಹಾಗೂ ನೈವೇದ್ಯ ಒಂದು ವರ್ಷದ ಬಳಿಕ ಬಾಗಿಲು ತೆಗೆದಾಗ ಹಾಗೆಯೇ ಇರುತ್ತದೆ. ಇದರಿಂದಲೇ ತಿಳಿಯುತ್ತದೆ. ದೇವಿ ಎಷ್ಟು ಶಕ್ತಿಶಾಲಿ ಎಂದು ಹೇಳಿದರು.

ಈ ಬಾರಿ ಸುರಿದ ಮಳೆಯಿಂದ ಜನರು ಹಾಗೂ ಅನ್ನದಾತರು ಭಾರಿ ಅನಾಹುತಗಳಿಂದ ತತ್ತರಿಸಿ ಹೋಗಿದ್ದಾರೆ. ಅವರಿಗೆ ದೇವಿ ಶಕ್ತಿ ನೀಡಿ ಎಲ್ಲವನ್ನೂ ಸಹ ಸಂಬಾಳಿಸಿಕೊಂಡು ಹೋಗುವಂತಾಗಲಿ ಎಂದು ಪ್ರಾರ್ಥಿಸಿದರು. ಶಾಸಕರಾದ ಎಚ್.ಕೆ.ಸುರೇಶ್, ಮಂಜುನಾಥ್, ಜಿಲ್ಲಾಽಕಾರಿ ಸತ್ಯಭಾಮ, ಅಪರ ಜಿಲ್ಲಾಧಿಕಾರಿ ಶಾಂತಲಾ ಮತ್ತಿತರರಿದ್ದರು.

ಹರಿದುಬರುತ್ತಲೇ ಇದೆ ಜನಸಾಗರ :
ದೇವಿಯ ದರ್ಶನಕ್ಕೆ ರಾಜ್ಯ ಹಾಗೂ ಹೊರರಾಜ್ಯಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತಸಾಗರವೇ ಹರಿದುಬರುತ್ತಿದೆ. ವಿಶೇಷ ದರ್ಶನದ ಟಿಕೆಟ್‌ಗಳಿಗೆ ಭಾರಿ ಬೇಡಿಕೆ ಉಂಟಾಗಿದೆ. ನಿನ್ನೆ ರಾತ್ರಿ 7 ಗಂಟೆಯವರೆಗೂ 300 ರೂ. ವಿಶೇಷ ದರ್ಶನದ ಟಿಕೆಟ್‌ಗಳನ್ನು ಪಡೆದು 22,217 ಭಕ್ತರು ದರ್ಶನ ಪಡೆದಿದ್ದಾರೆ. ಇದರಿಂದ 66,35,100 ರೂ. ಸಂಗ್ರಹವಾಗಿದೆ.

ಅದೇ ರೀತಿ 1000 ರೂ. ವಿಶೇಷ ದರ್ಶನ ಟಿಕೆಟ್‌ಗಳನ್ನು ಪಡೆದು 15,713 ಮಂದಿ ದರ್ಶನ ಪಡೆದಿದ್ದಾರೆ. ಇದರಿಂದ 1,57,13,000 ರೂ. ಸಂಗ್ರಹವಾಗಿದ್ದು, ಲಾಡು ಪ್ರಸಾದ ಮಾರಾಟ 30,750 ರೂ. ಆಗಿದೆ. ಅದರಿಂದ 18,45,000 ರೂ. ಸಂಗ್ರಹವಾಗಿದೆ. ನಿನ್ನೆ ರಾತ್ರಿ 7 ಗಂಟೆವರೆಗೂ 2,41,93,100 ರೂ. ಆದಾಯ ಸಂಗ್ರಹವಾಗಿದೆ. ಇಂದೂ ಕೂಡ ಭಕ್ತ ಸಮೂಹವೇ ದೇವಿ ದರ್ಶನಪಡೆದಿದ್ದಾರೆ.

RELATED ARTICLES

Latest News