Thursday, April 16, 2026
Homeರಾಜಕೀಯಪಂಚರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ನಾಯಕತ್ವ ಬದಲಾವಣೆಗೆ ಬ್ರೇಕ್‌ ಹಾಕಿದ 'ಕೈ'ಕಮಾಂಡ್

ಪಂಚರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ನಾಯಕತ್ವ ಬದಲಾವಣೆಗೆ ಬ್ರೇಕ್‌ ಹಾಕಿದ ‘ಕೈ’ಕಮಾಂಡ್

leadership change

ಬೆಂಗಳೂರು ಜ.17- ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸದ್ಯದ ಮಟ್ಟಿಗೆ ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಯಾವುದೇ ಬದಲಾವಣೆ ಅಸಾಧ್ಯ ಎಂದು ಕಾಂಗ್ರೆಸ್‌‍ ಹೈಕಮಾಂಡ್‌ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಸ್ಪಷ್ಟ ಸಂದೇಶ ರವಾನಿಸಿದೆ.

ಅಸ್ಸಾಂ, ಪಶ್ಚಿಮಬಂಗಾಳ, ಕೇರಳ, ತಮಿಳುನಾಡು ಮತ್ತು ಪುದುಚೇರಿ ರಾಜ್ಯಗಳ ವಿಧಾನಸಭೆ ಚುನಾವಣೆ ಪ್ರಕ್ರಿಯೆ ಮುಂದಿನ ಮೇ ಮತ್ತು ಜೂನ್‌ ವೇಳೆಗೆ ಪೂರ್ಣಗೊಳ್ಳಲಿದೆ. ಆವರೆಗೂ ಕರ್ನಾಟಕ ಸೇರಿದಂತೆ ಯಾವುದೇ ರಾಜ್ಯಗಳ ರಾಜಕೀಯದಲ್ಲಿ ಬದಲಾವಣೆ ಮಾಡುವುದಿಲ್ಲ. ರಾಷ್ಟ್ರ ರಾಜಕಾರಣದಲ್ಲೂ ಯಥಾಸ್ಥಿತಿ ಮುಂದುವರೆಯಲಿದೆಎಂದು ಸ್ಪಷ್ಟ ಪಡಿಸಿರುವುದಾಗಿ ತಿಳಿದು ಬಂದಿದೆ.

ವಿಧಾನಸಭೆ ಚುನಾವಣೆ ಮುಗಿಯುವವರೆಗೂ ನಾಯಕತ್ವ ಬದಲಾವಣೆ ವಿಷಯವಾಗಲಿ ಅಥವಾ ಬೇರೆ ವಿಚಾರಗಳ ಚರ್ಚೆ ಬೇಡ. ರಾಜ್ಯ ರಾಜಕಾರಣದಲ್ಲೂ ಗೊಂದಲಗಳಾಗದಂತೆ ಎಚ್ಚರಿಕೆ ವಹಿಸುವಂತೆ ಡಿ.ಕೆ.ಶಿವಕುಮಾರ್‌ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಹೇಳಲಾಗಿದೆ.

ಅಸ್ಸಾಂ ವಿಧಾನಸಭೆ ಚುನಾವಣೆ ಸಂಬಂಧಪಟ್ಟಂತೆ ನಿನ್ನೆ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಮತ್ತು ಅಸ್ಸಾಂನ ಸ್ಥಳೀಯ ನಾಯಕರ ಮಹತ್ವದ ಸಭೆ ನಡೆದಿತ್ತು.

ಬಳಿಕ ಡಿ.ಕೆ.ಶಿವಕುಮಾರ್‌ ಜೊತೆ ಹೈಕಮಾಂಡ್‌ ನಾಯಕರು ಮಹತ್ವದ ಚರ್ಚೆ ನಡೆದಿದ್ದಾರೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೇಸಿ ವೇಣುಗೋಪಾಲ್‌ ಹೈಕಮಾಂಡ್‌ನ ಸಂದೇಶವನ್ನು ರವಾನಿಸಿದ್ದಾರೆ ಎನ್ನಲಾಗಿದೆ.

ಅಸ್ಸಾಂ ಚುನಾವಣೆಯ ಉಸ್ತುವಾರಿ ನಿರ್ವಹಣೆಯನ್ನು ಡಿ.ಕೆ. ಶಿವಕುಮಾರ್‌ ಅವರಿಗೆ ವಹಿಸಲಾಗಿದೆ. ಚುನಾವಣೆಯ ತಯಾರಿ ಕುರಿತ ಪೂರ್ವಭಾವಿ ಸಭೆಯಲ್ಲಿ ರಾಹುಲ್‌ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಡಿ.ಕೆ.ಶಿವಕುಮಾರ್‌ ಅವರಿಗೆ ಹೆಚ್ಚಿನ ಮನ್ನಣೆ ನೀಡಿರುವುದು ಕಂಡುಬಂದಿದೆ.

ಮೂಲಗಳ ಪ್ರಕಾರ ಡಿ.ಕೆ.ಶಿವಕುಮಾರ್‌ ಅವರನ್ನು ರಾಷ್ಟ್ರ ರಾಜಕಾರಣದತ್ತ ಬರಲು ಹೈಕಮಾಂಡ್‌ ನಾಯಕರು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಮುಂದಿನ ಅವಧಿಗೆ ಕೇಂದ್ರದಲ್ಲಿ ಕಾಂಗ್ರೆಸ್‌‍ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ. ಮುಂದಿನ ಚುನಾವಣೆಗಳಲ್ಲಿ ಯಾವುದೇ ಪಕ್ಷದ ಜೊತೆ ಮೈತ್ರಿ ಇಲ್ಲದೆ ಸ್ವತಂತ್ರವಾಗಿ ಚುನಾವಣೆ ನಡೆಸಿದರೆ ಗೆಲ್ಲುವ ಎಲ್ಲಾ ಸಾಧ್ಯತೆಗಳಿವೆ. ನೀವು ರಾಷ್ಟ್ರ ರಾಜಕಾರಣಕ್ಕೆ ಬಂದರೆ ಹೆಚ್ಚಿನ ಅವಕಾಶಗಳಿವೆ ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಬಜೆಟ್‌ ಮಂಡನೆಗೂ ಮುನ್ನಾ ತಮಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡಬೇಕು ಎಂದು ಪಟ್ಟು ಹಿಡಿದಿದ್ದರು ಎಂದು ಹೇಳಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ನಾಯಕತ್ವ ಬದಲಾವಣೆ ಮಾಡಿದರೆ ಅದು ರಾಜ್ಯಗಳ ವಿಧಾನಸಭೆಯ ಚುನಾವಣೆ ಫಲಿತಾಂಶದ ಮೇಲೆ ಅಡ್ಡ ಪರಿಣಾಮ ಬೀರಲಿದೆ. ಮುಂಬೈ ಮಹಾನಗರ ಪಾಲಿಕೆ ಸೇರಿದಂತೆ ಎಲ್ಲಾ ಚುನಾವಣೆಗಳಲ್ಲೂ ಕಾಂಗ್ರೆಸ್‌‍ ಗೆ ಹಿನ್ನಡೆಯಾಗಿದೆ. ಬಹು ನಿರೀಕ್ಷಿತ ಬಿಹಾರದಲ್ಲೂ ಕಾಂಗ್ರೆಸ್‌‍ ಗೆಲುವು ಸಾಧ್ಯವಾಗಿಲ್ಲ. ಪಂಚ ರಾಜ್ಯಗಳ ಪೈಕಿ ಕಾಂಗ್ರೆಸ್‌‍ ಅಧಿಕಾರಕ್ಕೆ ಬರಲು ಅಸ್ಸಾಂನಲ್ಲಿ ಹೆಚ್ಚಿನ ಅವಕಾಶಗಳಿವೆ.

ಕರ್ನಾಟಕದ ರಾಜಕಾರಣದ ಬಗ್ಗೆ ತಲೆ ಕೆಡಿಸಿಕೊಳ್ಳದೆ ಅಸ್ಸಾಂನಲ್ಲಿನ ಗೆಲುವಿನತ್ತ ಗಮನ ಹರಿಸುವಂತೆ ಡಿ.ಕೆ.ಶಿವಕುಮಾರ್‌ ಅವರಿಗೆ ಸಲಹೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಸ್ಸಾಂ ಚುನಾವಣೆಯ ಬಳಿಕ ಹೈಕಮಾಂಡ್‌ ನಿಲುವೇನು ಎಂಬ ಬಗ್ಗೆ ಸ್ಪಷ್ಟತೆ ನೀಡುವಂತೆ ಡಿ.ಕೆ.ಶಿವಕುಮಾರ್‌ ಪ್ರಶ್ನಿಸಿದ್ದು, ಸೂಕ್ತ ಸಂದರ್ಭದಲ್ಲಿ ನಿಮ ಶ್ರಮ ಮತ್ತು ಬದ್ಧತೆಗೆ ಪ್ರತಿಫಲ ಸಿಗಲಿದೆ. ನಿಮ ಪಕ್ಷ ನಿಷ್ಠೆಯ ಬಗ್ಗೆ ವರಿಷ್ಠರಿಗೆ ಅರಿವಿದೆ. ನಿಮ ಕಾಳಜಿಯನ್ನು ನಾವು ನೋಡಿಕೊಳ್ಳುತ್ತೇವೆ. ಈಗ ವಹಿಸಿರುವ ಜವಾಬ್ದಾರಿಗಳ ನಿರ್ವಹಣೆಯತ್ತ ನಿಮ ಗಮನ ಇರಲಿ ಎಂದು ಕೆ.ಸಿ.ವೇಣುಗೋಪಾಲ್‌ ಹೇಳಿದ್ದಾರೆ ಎನ್ನಲಾಗಿದೆ.ಸಂಕ್ಷಿಪ್ತ ಅವಧಿಯಲ್ಲಿನ ಮಾತುಕತೆಯಿಂದ ಡಿ.ಕೆ.ಶಿವಕುಮಾರ್‌ ಉತ್ಸಾಹ ಇಮಡಿಯಾಗಿದೆ ಎಂಬ ಮಾಹಿತಿ ಇದೆ.

RELATED ARTICLES

Latest News