ಬೆಂಗಳೂರು,ಜ.17- ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ರಕ್ಷಣೆಯ ಜೊತೆ ಸಮಾಜವನ್ನು ಕಾಡುವ ಪಿಡುಗುಗಳ ನಿಯಂತ್ರಣಕ್ಕೂ ಪೊಲೀಸರು ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಪೊಲೀಸ್ ಮಹಾ ನಿರ್ದೇಶಕ ಹಾಗೂ ಆರಕ್ಷಕ ಮಹಾ ನಿರೀಕ್ಷಕರ ಕಚೇರಿಯಲ್ಲಿ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚೆಗೆ ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಭೆ ಪ್ರಕರಣ ಮತ್ತು ಮಹಾರಾಷ್ಟ್ರ ಪೊಲೀಸರು ಬೆಂಗಳೂರಿನಲ್ಲಿ ಮಾದಕ ವಸ್ತು ತಯಾರಿಕೆ ಅಡ್ಡೆಯ ಮೇಲೆ ದಾಳಿ ಮಾಡಿದ ಪ್ರಸಂಗಗಳನ್ನು ಪ್ರಮುಖವಾಗಿ ಉಲ್ಲೇಖಿಸಿದ್ದಾರೆ.
ಪೊಲೀಸ್ ಇಲಾಖೆಗೆ ಅಗತ್ಯ ಇರುವ ಎಲ್ಲಾ ಸೌಲಭ್ಯಗಳನ್ನು ಸರ್ಕಾರ ಒದಗಿಸುತ್ತಿದೆ. ಆದರೂ ಅಲ್ಲಲ್ಲಿ ಕಾನೂನು ಸುವ್ಯವಸ್ಥೆಗೆ ಸವಾಲಾಗುವಂತಹ ಪ್ರಕರಣಗಳು ನಡೆಯುತ್ತಲೇ ಇದೆ. ಬಾಂಗ್ಲಾ ದೇಶದ ವಲಸಿಗರು ಸೇರಿದಂತೆ ವಿದೇಶದ ಪ್ರಜೆಗಳು ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬರುತ್ತಿವೆ. ಈ ಮೊದಲು ಅಕ್ರಮ ವಲಸಿಗರನ್ನು ಗಡಿ ಪಾರು ಮಾಡಲು ಅಭಿಯಾನ ನಡೆಸಲಾಗಿತ್ತು. ಅದರ ಹೊರತಾಗಿಯೂ ಹಲವಾರು ಮಂದಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ನೆಲೆಸಿರುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.
ಬಳ್ಳಾರಿಯ ಗಲಭೆ ಪ್ರಕರಣವನ್ನು ಆರಂಭದಲ್ಲೇ ನಿಯಂತ್ರಿಸಲು ಪೊಲೀಸರಿಗೆ ಅವಕಾಶಗಳಿತ್ತು. ಆದರೆ ಹಿರಿಯ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಅಲ್ಲಿ ಒಬ್ಬ ಅಮಾಯಕನ ಪ್ರಾಣ ಹರಣವಾಗಿದೆ. ಅಧಿಕಾರಿಗಳು ಅದರಲ್ಲೂ ಗ್ರಾಮೀಣ ಭಾಗದಲ್ಲಿ ಜಿಲ್ಲಾ, ನಗರ ಪ್ರದೇಶದಲ್ಲಿ ವಿಭಾಗವಾರು ಜವಾಬ್ದಾರಿ ನಿರ್ವಹಣೆ ಮಾಡುವ ಅಧಿಕಾರಿಗಳು ಹೆಚ್ಚು ಜಾಗರೂಕರಾಗಿರಬೇಕು.
ಕಾನೂನು ಸುವ್ಯವಸ್ಥೆ ಮತ್ತು ಯಾವುದೇ ಅಹಿತಕರ ಘಟನೆಗಳಿಗೆ ಹಿರಿಯ ಅಧಿಕಾರಿಗಳನ್ನೇ ಹೊಣೆ ಮಾಡುವುದಾಗಿ ಈ ಮೊದಲೇ ಎಚ್ಚರಿಕೆ ನೀಡಲಾಗಿತ್ತು. ಅದರ ಹೊರತಾಗಿಯೂ ಬಳ್ಳಾರಿಯಲ್ಲಿ ಗಲಭೆ ಪೀಡಿತ ಪ್ರದೇಶದಲ್ಲಿ ಎಸ್ಪಿ ಇರಲಿಲ್ಲ ಎಂದರೆ ಇಂತಹ ನಿರ್ಲಕ್ಷ್ಯವನ್ನು ಸಹಿಸಲಾಗುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಮಾದಕ ವಸ್ತುಗಳ ತಯಾರಿಕೆ ಫ್ಯಾಕ್ಟರಿಗಳು ರಾಜ್ಯದಲ್ಲಿ ನಡೆಯುತ್ತಿರುವುದು ಸಮರ್ಥನೀಯವಲ್ಲ. ನೆರೆ ರಾಜ್ಯದ ಅಧಿಕಾರಿಗಳು ಇಲ್ಲಿ ಬಂದು ದಾಳಿ ಮಾಡುವುದರಿಂದ ಅಪಕೀರ್ತಿ ಹೆಚ್ಚಾಗುತ್ತದೆ. ನಮಲ್ಲಿನ ಗುಪ್ತದಳ ಏನು ಮಾಡುತ್ತಿದೆ. ಕೆಳ ಹಂತದ ಸಿಬ್ಬಂದಿಗಳಿಗೆ ಏಕೆ ಮಾಹಿತಿ ಸಿಕ್ಕಿಲ್ಲ. ಹಿರಿಯ ಅಧಿಕಾರಿಗಳು ಕೆಳ ಹಂತದ ಸಿಬ್ಬಂದಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿಸುವಲ್ಲಿ ವಿಫಲವಾಗಿರುವುದು ಇದರಿಂದ ಕಂಡು ಬರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕರಾವಳಿಯಲ್ಲಿ ಸಣ್ಣ ಪ್ರಮಾಣದ ವರ್ಗಾವಣೆ ಹಾಗೂ ಕಾಳಜಿಯ ಕಾರ್ಯಗಳಿಂದ ಶಾಂತಿ ವಾತಾವಣ ನೆಲೆಸಿದೆ. ಅಲ್ಲಿ ಪರಿಸ್ಥಿತಿ ನಿಯಂತ್ರಿಸಲು ಸಾಧ್ಯವಾಗುವುದಾದರೆ ರಾಜ್ಯದ ಬೇರೆ ಕಡೆ ಏಕೆ ಸಾಧ್ಯವಾಗುವುದಿಲ್ಲ ಎಂದು ಮುಖ್ಯಮಂತ್ರಿ ಪ್ರಶ್ನಿಸಿದ್ದಾರೆ.
ಮಹಿಳೆಯರ ಹಾಗೂ ಪರಿಶಿಷ್ಟರ ರಕ್ಷಣೆಗೆ ಆದ್ಯತೆ ನೀಡಬೇಕು. ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ನಿಯಂತ್ರಿಸಲು ಜಿಲ್ಲಾ ಕೇಂದ್ರಗಳಲ್ಲಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಠಾಣೆಗಳನ್ನು ಸ್ಥಾಪಿಸಲಾಗಿದೆ. ಅದೇ ರೀತಿ ಮಹಿಳಾ ಠಾಣೆಗಳಿವೆ. ಹಿರಿಯ ಅಧಿಕಾರಿಗಳು ಅವುಗಳ ಕಾರ್ಯ ನಿರ್ವಹಣೆಯನ್ನು ಕಾಲಕಾಲಕ್ಕೆ ಪರಿಶೀಲನೆ ನಡೆಸಬೇಕು ಎಂದು ಹೇಳಿದ್ದಾರೆ.
ಇತ್ತೀಚೆಗೆ ಪೊಲೀಸ್ ಸಿಬ್ಬಂದಿಗಳು ಮತ್ತು ಅಧಿಕಾರಿಗಳೇ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಕಂಡು ಬರುತ್ತಿದೆ. ಇದನ್ನು ತಮ ಸರ್ಕಾರ ಸಹಿಸುವುದಿಲ್ಲ. ಇಲಾಖೆಯವರೇ ತಪ್ಪು ಮಾಡಿರುವುದು ಕಂಡು ಬಂದರೆ ಅಮಾನತುಗೊಳಿಸುವು ದಕ್ಕಷ್ಟೀ ಸೀಮಿತವಾಗುವುದಿಲ್ಲ. ಇತರೆ ಅಪರಾಧಿಗಳ ವಿರುದ್ಧ ಕಾನೂನು ಅಸ್ತ್ರ ಬಳಸಿದಂತೆಯೇ ಕಠಿಣ ಕ್ರಮ ಜರುಗಿಸುವು ದಾಗಿ ಮುಖ್ಯಮಂತ್ರಿ ಎಚ್ಚರಿಕೆ ನೀಡಿದ್ದಾರೆ.
ಜೈಲುಗಳಲ್ಲಿ ಖೈದಿಗಳಿಗೆ ರಾಜಾತಿಥ್ಯ ನೀಡುತ್ತಿರುವದನ್ನು ಪ್ರಸ್ತಾಪಿಸಿದ ಮುಖ್ಯಮಂತ್ರಿಯವರು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋಗಳು ಹಿಂದಿನ ಕಾಲದ್ದು ಎಂದು ಸಮರ್ಥನೆ ಬೇಡ. ಜೈಲುಗಳು ಜೈಲುಗಳಂತೆ ಇರಬೇಕು. ಇಲ್ಲವಾದರೆ ಜನರಿಗೆ ಕಾನೂನು ಸುವ್ಯಸ್ಥೆಯ ಮೇಲಿನ ನಂಬಿಕೆ ಕುಸಿಯುತ್ತದೆ ಎಂದು ಹೇಳಿದ್ದಾರೆ. ಜೈಲು ಬಂಧಿಗಳ ಜೊತೆ ಶಾಮೀಲಾಗಿ ವಿಶೇಷ ಸೌಲಭ್ಯ ಒದಗಿಸುವ ಸಿಬ್ಬಂದಿಗಳು ಮತ್ತು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಸೂಚನೆ ನೀಡಿದ್ದಾರೆ.
ಗೃಹ ಸಚಿವ ಡಾ.ಜಿ.ಪರಮೇಶ್ವರ್, ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಪೊಲೀಸ್ ಮಹಾ ನಿರ್ದೇಶಕ ಡಾ.ಎಂ.ಎ.ಸಲೀಂ, ಒಳಾಡಳಿತ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಮುಖ್ಯಮಂತ್ರಿ ಅವರ ಕಾರ್ಯದರ್ಶಿ ಬಿ.ಬಿ.ಕಾವೇರಿ ಮತ್ತಿತರರು ಉಪಸ್ಥಿತರಿದ್ದರು.
ಪೊಲೀಸ್ ಆಸರೆ ಯೋಜನೆ ಲೋಕಾರ್ಪಣೆ
ಪೊಲೀಸ್ ಪ್ರಧಾನ ಕಚೇರಿಯ 7ನೇ ಮಹಡಿಯ ಸಮೇಳನ ಸಭಾಂಗಣದಲ್ಲಿ ಹಮಿಕೊಂಡಿದ್ದ ಕರ್ನಾಟಕ ರಾಜ್ಯ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶ ಸಭೆಯಲ್ಲಿ ಕೆಎಸ್ಪಿ ಹಾಗೂ ಸಿಐಡಿ ಮಾಹಿತಿ ಒಳಗೊಂಡ ಕೈಪಿಡಿ ಬಿಡುಗಡೆ ಮತ್ತು ಪೊಲೀಸ್ ಆಸರೆ ಯೋಜನೆಯನ್ನು ಲೋಕಾರ್ಪಣೆಗೊಳಿಸಲಾಯಿತು.
ಇದೇ ವೇಳೆ ಅಖಿಲ ಭಾರತ 3ನೇ ಉತ್ತಮ ಠಾಣೆ ಎಂಬ ಪ್ರಶಸ್ತಿ ಪಡೆದಿರುವ ರಾಯಚೂರು ಜಿಲ್ಲೆಯ ಕವಿತಾಳ ಪೊಲೀಸ್ ಠಾಣೆಯ ಕಾರ್ಯವೈಖರಿಯನ್ನು ಅಭಿನಂದಿಸಿ ಪ್ರಶಂಸನಾ ಪತ್ರ ವಿತರಿಸಲಾಯಿತು.ಕೇಂದ್ರ ಗಹ ಸಚಿವಾಲಯವು ದೇಶದ ಉತ್ತಮ ಪೊಲೀಸ್ ಠಾಣೆಗಳಲ್ಲಿ ಒಂದೆಂದು (2025ಕ್ಕೆ) ಎಂದು ಕವಿತಾಳ ಪೊಲೀಸ್ ಠಾಣೆಯನ್ನು ಆಯ್ಕೆ ಮಾಡಿದೆ.
ಇದು ಸಾರ್ವಜನಿಕ ಜನಸ್ನೇಹಿ ಮೂಲಸೌಕರ್ಯ, ಸಿಬ್ಬಂದಿ ಸಾಮರ್ಥ್ಯ ಮತ್ತು ಪ್ರಕರಣಗಳ ವಿಲೇವಾರಿ ಆಧಾರದ ಮೇಲೆ ಗೌರವ ಮತ್ತು ಈ ನಿಟ್ಟಿನಲ್ಲಿ ಈ ಠಾಣೆಗೆ ಟ್ರೋಫಿ ಮತ್ತು ಕೇಂದ್ರದಿಂದ ಅನುದಾನ ಸಿಗಲಿದೆ. ಪ್ರಮುಖ ಅಂಶಗಳು: 2025ನೇ ಸಾಲಿಗೆ ದೇಶದ ಟಾಪ್ 3 ಮಾದರಿ ಪೊಲೀಸ್ ಠಾಣೆಗಳಲ್ಲಿ ಒಂದಾಗಿ ಕವಿತಾಳ ಪೊಲೀಸ್ ಠಾಣೆ ಆಯ್ಕೆಯಾಗಿದೆ.
ನೀಡಿದ ಮಾನದಂಡಗಳು:
ಸಾರ್ವಜನಿಕರೊಂದಿಗೆ ಉತ್ತಮ ಸಂಬಂಧ, ಮೂಲಸೌಕರ್ಯ, ಸಿಬ್ಬಂದಿ ಶಿಸ್ತು, ಪ್ರಕರಣಗಳ ವಿಲೇವಾರಿ, ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವಿಕೆ ಮುಂತಾದವುಗಳನ್ನು ಆಧರಿಸಿ ಈ ಆಯ್ಕೆ ಮಾಡಲಾಗಿದೆ.ಗೌರವ: ಕೇಂದ್ರ ಗೃಹ ಸಚಿವರು ಇತ್ತೀಚೆಗೆ ರಾಯಪುರದ IIMನಲ್ಲಿ ನಡೆದ ಸಮಾರಂಭದಲ್ಲಿ ಟ್ರೋಫಿಯನ್ನು ಹಸ್ತಾಂತರಿಸಿದ್ದಾರೆ.
ಅನುದಾನ:
ಕೇಂದ್ರ ಸರ್ಕಾರದಿಂದ ಈ ಪೊಲೀಸ್ ಠಾಣೆಗೆ ವಿಶೇಷ ಅನುದಾನ ಮತ್ತು ಪೀಠೋಪಕರಣಗಳು, ಲ್ಯಾಪ್ಟಾಪ್ಗಳಂತಹ ಸೌಲಭ್ಯಗಳು ಸಿಗಲಿವೆ. ಈ ಸಾಧನೆಯು ಕರ್ನಾಟಕ ಪೊಲೀಸ್ ಇಲಾಖೆಗೆ ಹೆಮೆ ತಂದಿದೆ.
