ಬೆಂಗಳೂರು, ನ.4- ವಕ್‌್ಫ ವಿಚಾರವಾಗಿ ಬಿಜೆಪಿ ನಡೆಸುತ್ತಿರುವುದು ಪ್ರತಿಭಟನೆಯಲ್ಲ, ರಾಜಕಾರಣ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್‌್ಫ ಆಸ್ತಿ ಒತ್ತುವರಿಗೆ ನೀಡಿದ್ದ ನೋಟಿಸ್‌ಗಳನ್ನು ಸರ್ಕಾರ ಹಿಂಪಡೆಯುವುದಾಗಿ ತಿಳಿಸಿದೆ. ಆದಾಗ್ಯೂ ಬಿಜೆಪಿ ರಾಜಕಾರಣವನ್ನು ಮುಂದುವರೆಸಿದೆ ಎಂದರು.
ಪ್ರಜಾಪ್ರಭುತ್ವದಲ್ಲಿ ನಾಯಕನಾಗಿದ್ದವನು ಜನ ಬದುಕನ್ನು ಯಾವ ರೀತಿ ಬದಲಾವಣೆ ಮಾಡಿದ್ದಾನೆ ಎಂಬುದು ಮುಖ್ಯವಾಗುತ್ತದೆ. ಚುನಾವಣೆ ಸಂದರ್ಭದಲ್ಲಿ ಯಾರ್ಯಾರು ಏನೇನು ಮಾಡಿದ್ದಾರೆ ಎಂಬದನ್ನು ಜನ ಪಟ್ಟಿ ಮಾಡುತ್ತಾರೆ. ಅದರ ಆಧಾರದ ಮೇಲೆ ಅಂಕ ನೀಡುತ್ತಾರೆ ಎಂದರು.
ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್, ಸಿ.ಪಿ.ಯೋಗೇಶ್ವರ್, ಹೆಚ್.ಡಿ.ಕುಮಾರಸ್ವಾಮಿ ಯಾವ ಕೊಡುಗೆ ನೀಡಿದ್ದಾರೆ ಎಂಬುದನ್ನು ಪರಿಗಣಿಸಿ ಚುನಾವಣೆಯಲ್ಲಿ ಮತದಾರರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಅದನ್ನು ಹೊರತು ಪಡಿಸಿ, ರಣನೂ ಇಲ್ಲ, ರಂಗವೂ ಇಲ್ಲ. ಇದು ಜನರ ಭಾವ ಮಾತ್ರ ಎಂದು ಹೇಳಿದರು.
ಈ ಹಿಂದೆ ಬೆಂಗಳೂರಿನಿಂದ ಮೈಸೂರುವರೆಗೂ ಬಿಜೆಪಿ ಪಾದಾಯಾತ್ರೆ ನಡೆಸಿದಾಗ ಜೆಡಿಎಸ್ ಸಾಥ್ ನೀಡಿರಲಿಲ್ಲ. ಈಗ ಉಪಚುನಾವಣೆಯ ಜೆಡಿಎಸ್‌ಗೆ ಬಿಜೆಪಿ ಸಾಥ್ ನೀಡಬೇಕಲ್ಲ. ಒಳ್ಳೆಯದಾಗಲಿ ಎಂದರು. ಜಯನಗರ ವಿಧಾನಸಭಾ ಕ್ಷೇತ್ರಕ್ಕೆ ಈಗಾಗಲೇ 40 ಕೋಟಿ ರೂಪಾಯಿಗಳನ್ನು ನೀಡಿದ್ದೇನೆ. ಆ ಕ್ಷೇತ್ರದ ಬೇರೆ ಒಂದು ಸ್ಥಳಕ್ಕೆ ಭೇಟಿ ನೀಡಬೇಕಿದೆ. ನಿನ್ನೆ ಶಾಸಕರು ಬಂದಿದ್ದರು. ಏನೇನೋ ಹೇಳುತ್ತಿದ್ದರು. ಅದಕ್ಕೆಲ್ಲಾ ಉತ್ತರ ಕೇಳಿದ್ದೇನೆ, ಎಲ್ಲವೂ ಗೊತ್ತಿದೆ ತಿರುಗೇಟು ನೀಡಿದರು.