Thursday, November 21, 2024
Homeರಾಜ್ಯಕಾಂಗ್ರೆಸ್‌‍ ಸರ್ಕಾರದ ಗ್ಯಾರಂಟಿ ಯೋಜನೆಗಳ ಮೋದಿ ಅಪಪ್ರಚಾರ ಮಾಡುತ್ತಿದ್ದಾರೆ : ಖರ್ಗೆ ಆಕ್ರೋಶ

ಕಾಂಗ್ರೆಸ್‌‍ ಸರ್ಕಾರದ ಗ್ಯಾರಂಟಿ ಯೋಜನೆಗಳ ಮೋದಿ ಅಪಪ್ರಚಾರ ಮಾಡುತ್ತಿದ್ದಾರೆ : ಖರ್ಗೆ ಆಕ್ರೋಶ

Congress Chief Mallikarjun Kharge Challenges PM Modi To Discuss Fulfilled Guarantees

ಬೆಂಗಳೂರು, ನ. 9- ಕಾಂಗ್ರೆಸ್‌‍ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ದುರುದ್ದೇಶ ಪೂರ್ವಕವಾಗಿ ಅಪಪ್ರಚಾರ ಮಾಡುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ನಾಯಕರು ನಮ ಬಜೆಟ್‌ನ್ನು ಸರಿಯಾಗಿ ಓದಿಲ್ಲ, ಮೊದಲು ಸ್ಪಷ್ಟ ಮಾಹಿತಿ ಪಡೆದು ನಂತರ ಮಾತನಾಡಲಿ ಎಂದು ತಿರುಗೇಟು ನೀಡಿದರು.

ಕರ್ನಾಟಕ ಸರ್ಕಾರದ 5 ಗ್ಯಾರಂಟಿ ಯೋಜನೆಯನ್ನು ನಕಲು ಮಾಡಿ ಬಿಜೆಪಿ ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್‌, ರಾಜಸ್ಥಾನ ಸೇರಿದಂತೆ ಹಲವು ವಿಧಾನಸಭೆ ಚುನಾವಣೆಗಳಲ್ಲಿ ತಾನೂ ಕೂಡ ಗ್ಯಾರಂಟಿಯ ಭರವಸೆಗಳನ್ನು ನೀಡುತ್ತಿದೆ. ಆದರೆ ದುರುದ್ದೇಶ ಪೂರ್ವಕವಾಗಿ ಕರ್ನಾಟಕಕ್ಕೆ ಕೆಟ್ಟ ಹೆಸರು ತರಲು ನಮ ಗ್ಯಾರಂಟಿಗಳನ್ನು ಟೀಕಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌‍ ಪಕ್ಷ ಕರ್ನಾಟಕ ಹಾಗೂ ಇತರ ಕಡೆಗಳಲ್ಲಿ ನೀಡಿದ್ದ ಭರವಸೆಯನ್ನು ಅನುಷ್ಠಾನಕ್ಕೆ ತಂದಿದೆ. ಪಂಚಖಾತ್ರಿ ಯೋಜನೆಗಳನ್ನು ಕರ್ನಾಟಕದಲ್ಲಿ ಯಶಸ್ವಿಯಾಗಿ ಜಾರಿಗೊಳಿಸಿದ್ದೇವೆ. ಆದರೆ ಬಿಜೆಪಿಯವರು ಚುನಾವಣೆಯ ಕಾರಣಕ್ಕೆ ಸುಳ್ಳು ಭರವಸೆ ನೀಡಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ನರೇಂದ್ರ ಮೋದಿ ಅವರು ಈ ಹಿಂದೆ ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದರು. ಅದನ್ನು ಜಾರಿ ಮಾಡಿದ್ದಾರೆಯೇ? ಕೃಷಿ ಬೆಂಬಲ ಬೆಲೆಯನ್ನು ದುಪ್ಪಟಗೊಳಿಸಿ ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಹೇಳಿದ್ದರು. ಪ್ರತಿಯೊಬ್ಬರ ಖಾತೆಗೆ 15ಲಕ್ಷ ರೂ. ಹಾಕುವುದಾಗಿ ಭರವಸೆ ನೀಡಿದ್ದರು. ನೋಟು ಅಮಾನೀಕರಣ ವೈಫಲ್ಯವಾದರೆ ನನ್ನನ್ನು ಶೋಲಕ್ಕೇರಿಸಿ ಎಂದಿದ್ದರು. ಎರಡು ವರ್ಷದಲ್ಲೇ ಬುಲೆಟ್‌ ಟ್ರೈನ್‌ ತರುವುದಾಗಿ ಹೇಳಿದ್ದರು.

ಈಗಾಗಲೇ ಬುಲೆಟ್‌ ಟ್ರೈನ್‌ ಕಂಬ ಬಿದ್ದು ಹೋಯಿತು. ಮೋದಿ ನೀಡಿದ್ದ ಯಾವ ಭರವಸೆಗಳು ಈಡೇರಿಲ್ಲ ಎಂದು ಟೀಕಾ ಪ್ರಹಾರ ನಡೆಸಿದ್ದರು.ನಮ ಸರ್ಕಾರ ಜನ ಕಲ್ಯಾಣಕ್ಕಾಗಿ ಕರ್ನಾಟಕದಲ್ಲಿ ಪಂಚಖಾತ್ರಿಗಳನ್ನು ಜಾರಿಗೆ ತಂದಿದೆೆ. ಕಾಂಗ್ರೆಸ್‌‍ ಪಕ್ಷ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗ ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಭರವಸೆಗಳನ್ನು ಈಡೇರಿಸಿದೆ. ಆದರೆ ಮೋದಿ ಅವರು ನೀಡಿದ್ದ ಭರವಸೆಗಳು ಜುಮ್ಲಾ ಆಗಿ ಹೋಗಿವೆ ಎಂದು ಲೇವಡಿ ಮಾಡಿದ್ದರು.

ಜಾರ್ಖಂಡ್‌ನಲ್ಲಿ ಭಾಷಣ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಸುಳ್ಳು ಪ್ರಚಾರ ನಡೆಸಿದ್ದಾರೆ. ಅದಕ್ಕೆ ತಾವು ಸ್ಪಷ್ಟ ಉತ್ತರವನ್ನು ಜಾರ್ಕಂಡ್‌ನಲ್ಲೇ ನೀಡಿದ್ದೇನೆ. ಕರ್ನಾಟಕದಲ್ಲಿ ಪಂಚಖಾತ್ರಿಗಳಿಗೆ 52 ಸಾವಿರ ಕೋಟಿ ರೂ. ಗಳನ್ನು ಕಾಯ್ದಿರಿಸಲಾಗಿದೆ. ಅದರಲ್ಲಿ ಶೇ. 47ರಷ್ಟು ಖರ್ಚು ಮಾಡಲಾಗಿದೆ, ಇಷ್ಟು ದೊಡ್ಡ ಫಲಿತಾಂಶ ಕಣ್ಣೆದುರಿಗೇ ಇದ್ದರೂ ಬಿಜೆಪಿ ದುರುದ್ದೇಶ ಪೂರ್ವಕವಾಗಿ ಸುಳ್ಳು ಪ್ರಚಾರ ನಡೆಸುತ್ತಿದೆ ಎಂದು ಆರೋಪಿಸಿದರು.

ಬಿಜೆಪಿ ಅವರು ನಮ ಸರ್ಕಾರದ ಬಜೆಟ್‌ನ್ನು ಓದಿಲ್ಲ, ಚುನಾವಣೆಯ ಕಾರಣಕ್ಕಾಗಿ ಸುಳ್ಳು ಪ್ರಚಾರ ನಡೆಸುತ್ತಿದ್ದಾರೆ. ಜನ ಇದಕ್ಕೆ ಮರುಳಾಗಬಾರದು ಎಂದು ಮನವಿ ಮಾಡಿದರು.
ಚುನಾವಣೆಯ ಸಲುವಾಗಿ ಕಾಂಗ್ರೆಸ್‌‍ ಭರವಸೆಗಳನ್ನು ನೀಡುವುದಿಲ್ಲ ಬಿಜೆಪಿ ಅವರು ಕೇವಲ ಮತ ಗಳಿಸಲು ಮಾತ್ರ ಪ್ರಯತ್ನ ಮಾಡುತ್ತಾರೆ. ನಾವು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ. ಬಿಜೆಪಿ ಬಜೆಟ್‌ ಇಲ್ಲದೆಯೇ ಗ್ಯಾರಂಟಿಗಳನ್ನು ಘೋಷಣೆ ಮಾಡುತ್ತಿದೆ. ನಮ ವಿರುದ್ಧ ತಪ್ಪು ಭಾವನೆ ಮೂಡಿಸುವ ಸಲುವಾಗಿ ಪದೇ ಪದೇ ಟೀಕೆ ಮಾಡುತ್ತಿದ್ದಾರೆ ಎಂದರು.

ವಕ್‌್ಫ ವಿಚಾರಕ್ಕೆ ಸಂಬಂಧ ಪಟ್ಟಂತೆ ಸದ್ಯಕ್ಕೆ ತಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಕಾಯ್ದೆ ವಿಚಾರವಾಗಿ ರಚಿಸಲಾಗಿರುವ ಜಂಟಿ ಸಂಸದೀಯ ಸಮಿತಿ ಸಭೆಯಲ್ಲಿ ನಾನು ಸದಸ್ಯನಾಗಿದ್ದೇನೆ. ಸಮಿತಿಯ ವರದಿ ಲೋಕಸಭೆಯಲ್ಲಿ ಬಂದಾಗ ಅದರ ಕುರಿತು ನನ್ನ ಅಭಿಪ್ರಾಯ ತಿಳಿಸುತ್ತೇನೆ ಎಂದರು.

ಮತಯಂತ್ರಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮಾನ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಖರ್ಗೆ ಅವರು, ನಾನು ಈ ಬಗ್ಗೆ ಪದೇ ಪದೇ ಹೇಳಿಕೆ ನೀಡುವುದಿಲ್ಲ. ನಮಲ್ಲಿ ಇವಿಎಂ ಅಧ್ಯಯನಕ್ಕೆ ಒಂದು ತಂಡ ರಚಿಸಲಾಗಿದೆ. ಅವರಲ್ಲಿ ಅಭಿಷೇಕ್‌ ಮನು ಸಿಂಘ್ವಿ, ಕಪಿಲ್‌ ಸಿಬಲ್‌ ಸೇರಿದಂತೆ ಹಲವರು ಕೆಲಸ ಮಾಡುತ್ತಿದ್ದಾರೆ. ಅದರ ವರದಿ ನಿರೀಕ್ಷೆಯಲ್ಲಿದ್ದೇವೆ ಎಂದರು.

RELATED ARTICLES

Latest News