ಬೆಂಗಳೂರು,ನ.11– ಕೆಲವು ದಿನಗಳಿಂದ ತಟಸ್ಥವಾಗಿದ್ದ ಈರುಳ್ಳಿ ಬೆಲೆ ದಿನೇದಿನೇ ಏರುತ್ತಿದ್ದು, ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದೆ.ಅಡುಗೆಗೆ ಒಂದು ವೇಳೆ ತರಕಾರಿ ಇಲ್ಲದಿದ್ದರೂ ನಡೆಯುತ್ತದೆ. ಆದರೆ ಈರುಳ್ಳಿ ಬೇಕೇಬೇಕು. ಇದಿಲ್ಲದಿದ್ದರೆ ತಿಂಡಿ, ಅಡುಗೆ ಅಪೂರ್ಣ. ಹಾಗಾಗಿ ಅಡುಗೆ ಮನೆಯಲ್ಲಿ ಈರುಳ್ಳಿಗೆ ಅಗ್ರಗಣ್ಯ ಸ್ಥಾನವಿದೆ.
ಆದರೆ ರಾಜ್ಯದ ವಿವಿಧೆಡೆ ಸುರಿದ ಹಿಂಗಾರುಮಳೆಯಿಂದ ಬೆಳೆ ನಾಶವಾಗಿದ್ದು, ಮಾರುಕಟ್ಟೆಗೆ ನಿಗದಿತ ಪ್ರಮಾಣದಲ್ಲಿ ಮಾಲು ಬಾರದಿರುವುದರಿಂದ ಬೆಲೆ ಹೆಚ್ಚಳವಾಗುತ್ತಿದೆ. ಹೆಚ್ಚು ಈರುಳ್ಳಿ ಬೆಳೆಯುವ ಉತ್ತರ ಕರ್ನಾಟಕ ಭಾಗದ ಬಳ್ಳಾರಿ, ರಾಯಚೂರು, ಹುಬ್ಬಳ್ಳಿ-ಧಾರವಾಡ, ದಾವಣಗೆರೆ ಭಾಗದಲ್ಲಿ ಹೆಚ್ಚಾಗಿ ಮಳೆಯಾದ್ದರಿಂದ ಕೈಗೆ ಬಂದ ಫಸಲು ಭೂಮಿಯಲ್ಲೇ ಕೊಳೆತು ನಾಶವಾಗಿದ್ದರಿಂದ ಅನ್ನದಾತನ ಬದುಕು ತೀವ್ರ ಸಂಕಷ್ಟಕ್ಕೆ ಸಿಲುಕಿದೆ.
ಮಾರುಕಟ್ಟೆಯಲ್ಲಿ ಗುಣಮಟ್ಟದ ಈರುಳ್ಳಿ ದಾಸ್ತಾನು ಕಡಿಮೆಯಿದ್ದು, ಬೇಡಿಕೆ ಹೆಚ್ಚಾದ ಕಾರಣ 100 ರೂ. ಗಳ ಗಡಿಯತ್ತ ಸಾಗುತ್ತಿದೆ.ಬೆಂಗಳೂರಿನಲ್ಲಿ ಚಿಲ್ಲರೆಯಾಗಿ ಕೆ.ಜಿ.ಗೆ 60 ರಿಂದ 80 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಮಹಾರಾಷ್ಟ್ರದಿಂದ ಈರುಳ್ಳಿಯನ್ನು ಆಮದು ಮಾಡಕೊಳ್ಳಲಾಗುತ್ತಿದ್ದು, ಅಲ್ಲೂ ಕೂಡ ನಿರೀಕ್ಷಿತ ಪ್ರಮಾಣದಲ್ಲಿ ಪೂರೈಕೆಯಾಗದ ಕಾರಣ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನಬಹುದಾಗಿದೆ.
ಒಂದೆಡೆ ಪೂರೈಕೆ ಕಡಿಮೆಯಾಗಿದ್ದು, ಮತ್ತೊಂದೆಡೆ ಬೇಡಿಕೆಯು ಗಣನೀಯವಾಗಿ ಹೆಚ್ಚಾದ ಪರಿಣಾಮ ಬೆಲೆ ಹೆಚ್ಚಳವಾಗಿದೆ. ಇನ್ನೂ ಏರಿಕೆಯಾಗುವ ಸಾಧ್ಯತೆಯಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.ಡಿಸೆಂಬರ್ ವೇಳೆಗೆ 150 ರೂ.ಗೂ ತಲುಪಿದರೂ ಆಶ್ಚರ್ಯ ಪಡುವಂತಿಲ್ಲ.
ರೈತರಿಗೆ ಲಾಭ ಕಡಿಮೆಯೇ :
ಮಳೆಯ ನಡುವೆ ಕಷ್ಟಪಟ್ಟು ರೈತರು ಬೆಳೆಯನ್ನು ಉಳಿಸಿಕೊಂಡಿದ್ದು, ದಾಸ್ತಾನು ಮಾಡಲಾಗಿದ್ದ ಬೆಳೆಯನ್ನು ಮಾರುಕಟ್ಟೆಗೆ ತಂದಿದ್ದರೆ ಇಲ್ಲಿ ಸೂಕ್ತ ಬೆಲೆ ದೊರೆಯದೆ ಕಡಿಮೆ ಬೆಲೆಗೆ ಈರುಳ್ಳಿಯನ್ನು ರೈತರಿಂದ ಖರೀದಿಸಲಾಗುತ್ತಿದೆ.ಇದರಿಂದ ಮಧ್ಯವರ್ತಿಗಳಿಗೆ ಮಾತ್ರ ಲಾಭವಾಗುತ್ತಿದ್ದು, ರೈತರು ಮತ್ತು ಗ್ರಾಹಕರಿಗೆ ಹೊರೆಯಾಗುತ್ತಿದೆ.