ಛತ್ರಪತಿ ಸಂಭಾಜಿನಗರ, ನ. 11: ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ವೋಟ್ ಜಿಹಾದ್ ಹೇಳಿಕೆಯನ್ನು ಗುರಿಯಾಗಿಸಿಕೊಂಡಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಅವರು ಬಿಜೆಪಿ ನಾಯಕನ ಪೂರ್ವಜರು ಬ್ರಿಟಿಷರ ವಿರುದ್ಧ ಹೋರಾಡುವ ಬದಲು ಅವರಿಗೆ ಪ್ರೇಮ ಪತ್ರಗಳನ್ನು ಬರೆದಿದ್ದರು ಎಂದು ಟಾಂಗ್ ನೀಡಿದ್ದಾರೆ.
ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಓವೈಸಿ, ಪ್ರಧಾನಿ ನರೇಂದ್ರ ಮೋದಿಯವರ ಏಕ್ ಹೈ ತೋ ಸೇಫ್ ಹೈ ಘೋಷಣೆಯು ವೈವಿಧ್ಯತೆಯ ನೀತಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದರು.
ಮಹಾರಾಷ್ಟ್ರದಲ್ಲಿ ವೋಟ್ ಜಿಹಾದ್ ಪ್ರಾರಂಭವಾಗಿದೆ ಎಂದು ಫಡ್ನವೀಸ್ ಶನಿವಾರ ಹೇಳಿದ್ದಾರೆ, ಇದನ್ನು ಮತದ ಧರ್ಮ ಯುದ್ಧ ದಿಂದ ಎದುರಿಸಬೇಕು. ಧುಲೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಅಲ್ಪ ಸೋಲನ್ನು ಅವರು ಉಲ್ಲೇಖಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಓವೈಸಿ, ನಮ ಪೂರ್ವಜರು ಬ್ರಿಟಿಷರ ವಿರುದ್ಧ ಜಿಹಾದ್ ಮಾಡಿದರು ಮತ್ತು ಫಡ್ನವೀಸ್ ಈಗ ನಮಗೆ ಜಿಹಾದ್ ಬಗ್ಗೆ ಕಲಿಸುತ್ತಿದ್ದಾರೆ. ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಮತ್ತು ದೇವೇಂದ್ರ ಫಡ್ನವೀಸ್ ಒಟ್ಟಾಗಿ ಚರ್ಚೆಯಲ್ಲಿ ನನ್ನನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಧರ್ಮಯುದ್ಧ-ಜಿಹಾದ್ ಹೇಳಿಕೆಗಳು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಓವೈಸಿ ಹೇಳಿದ್ದಾರೆ.