Friday, November 15, 2024
Homeರಾಜ್ಯಸಾರಿಗೆ ಬಸ್ ದರ ಏರಿಕೆ ಗ್ಯಾರಂಟಿ..?

ಸಾರಿಗೆ ಬಸ್ ದರ ಏರಿಕೆ ಗ್ಯಾರಂಟಿ..?

bus fare hike

ಬೆಂಗಳೂರು,ನ.11– ದಿನದಿಂದ ದಿನಕ್ಕೆ ಉಂಟಾಗುತ್ತಿರುವ ನಷ್ಟ ಸರಿದೂಗಿಸುವುದು ಹಾಗೂ ಪೆಟೋಲ್-ಡೀಸೆಲ್ ಮೇಲಿನ ಮಾರಾಟ ತೆರಿಗೆ ಹೆಚ್ಚಳದಿಂದಾಗುತ್ತಿರುವ ಹೊರೆ ತಗ್ಗಿಸಿಕೊಳ್ಳಲು ಪ್ರಯಾಣ ದರ ಹೆಚ್ಚಳಕ್ಕೆ ಮುಂದಾಗಿರುವ ನಾಲ್ಕೂ ಸಾರಿಗೆ ನಿಗಮಗಳು ಈ ಸಂಬಂಧ ದರ ಪರಿಷ್ಕರಣೆಗಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಈ ಮೂಲಕ ಬಸ್ ಪ್ರಯಾಣಿಕರಿಗೂ ದರ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ಇದೆ.

ಬಿಎಂಟಿಸಿ, ಕೆಎಸ್ಆರ್ಟಿಸಿ, ವಾಯವ್ಯ, ಕಲ್ಯಾಣ ಸಾರಿಗೆ ಸಂಸ್ಥೆಗಳು ಕಳೆದ 4-5 ವರ್ಷಗಳಿಂದ ಟಿಕೆಟ್ ದರ ಹೆಚ್ಚಳ ಮಾಡಿಲ್ಲ. ಸದ್ಯ ಮಾಹಿತಿ ಪ್ರಕಾರ, ಶೇ.25 ರಷ್ಟು ದರ ಹೆಚ್ಚಳ ಮಾಡಲು ಅನುಮತಿ ಕೋರಿ ಸರ್ಕಾರಕ್ಕೆ ಮನವಿ ಮಾಡಿವೆ.ಸರಕಾರ ಒಪ್ಪಿಗೆ ಸೂಚಿಸಿದರೆ ಶೇ. 12ರಷ್ಟು ಏರಿಕೆಯಾಗುವ ಅಂದಾಜಿದೆ.

ಸದ್ಯ ಡೀಸೆಲ್ ದರ, ವಾಹನ ಬಿಡಿ ಭಾಗಗಳ ದರ ಹೆಚ್ಚಳವಾಗಿದೆ. ಜತೆಗೆ ನಿರ್ವಹಣಾ ವೆಚ್ಚವು ಏರಿಕೆಯಾಗಿದೆ. ಹೊಸ ಬಸ್ಗಳ ಖರೀದಿ ಅಗತ್ಯವಿದೆ. ಸಿಬ್ಬಂದಿ ಸಂಬಳ ಏರಿಕೆಯೂ ಆಗಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ದರ ಹೆಚ್ಚಳ ಅನುಮೋದನೆ ನೀಡಬೇಕು ಎಂದು ಸಾರಿಗೆ ನಿಗಮಗಳು ಕೋರಿವೆ.

ಈ ಹಿಂದೆ 2019ರಲ್ಲಿ ಕೆಎಸ್ಆರ್ಟಿಸಿ ಬಸ್ ಟಿಕೆಟ್ ದರ ಹೆಚ್ಚಳ ಆಗಿತ್ತು. ಇಲ್ಲಿವರೆಗೂ ಟಿಕಟ್ ದರ ಹೆಚ್ಚಳ ಮಾಡದೆ 5 ವರ್ಷವಾಗಿದೆ. ತೈಲ ಬೆಲೆ ಏರಿಕೆ ಆಗಿರುವುದರಿಂದ ದರ ಏರಿಕೆ ಅನಿವಾರ್ಯವಾಗಿದೆ. ನೌಕರರಿಗೆ ಸಂಬಳ ಹೆಚ್ಚಳ ಮತ್ತು ಸೌಲಭ್ಯಗಳನ್ನು ಕೊಡಬೇಕೆಂದರೆ ದರ ಹೆಚ್ಚಳ ಆಗಲೇಬೇಕು. ಕೆಎಸ್ಆರ್ಟಿಸಿ ನೌಕರರ ವೇತನ ಪರಿಷ್ಕರಣೆ 2020ರಲ್ಲಿ ಮಾಡಬೇಕಿತ್ತು.

ಇಲ್ಲಿವರೆಗೂ ಮಾಡಿಲ್ಲ. ಈ ಬಾರಿ 2024ರಲ್ಲಿ ವೇತನ ಪರಿಷ್ಕರಣೆ ಮಾಡುತ್ತೇವೆ.ಆದ್ದರಿಂದ ಟಿಕೆಟ್ ದರ ಹೆಚ್ಚಳ ಆಗುತ್ತದೆ. ಕಾಲಕಾಲಕ್ಕೆ ಹೆಚ್ಚಳ ಮಾಡಿದರೆ, ಹೀಗೆ ಆಗುತ್ತಿರಲಿಲ್ಲ. ಕಳೆದ ತ್ರೈ ಮಾಸಿಕದಲ್ಲಿ ಕೆಎಸ್ಆರ್ಟಿಸಿಗೆ 295 ಕೋಟಿ ರೂಪಾಯಿ ನಷ್ಟವಾಗಿದೆ. 40 ಹೊಸ ವೋಲ್ವೋ ಬಸ್ಗಳಿಗೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈಗಾಗಲೆ 600 ಸಾಮಾನ್ಯ ಬಸ್ಗಳನ್ನು ಕೊಂಡುಕೊಳ್ಳಲಾಗಿದ್ದು, ಶೇಕಡ 15-20ರಷ್ಟು ಟಿಕೆಟ್ ದರವನ್ನು ಹೆಚ್ಚಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕೆಎಸ್ಆರ್ಟಿಸಿ, ಬಿಎಂಟಿಸಿ ಸಹಿತ ನಾಲ್ಕೂ ನಿಗಮಗಳು ಆಗಲಿರುವ ಹೊರೆ ಮತ್ತು ಪ್ರಸ್ತುತ ಆರ್ಥಿಕ ಸ್ಥಿತಿಗತಿಯನ್ನು ಲೆಕ್ಕಹಾಕಿ ಸರಾಸರಿ ಶೇ. 25ರಷ್ಟು ಪ್ರಯಾಣ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಒಂದು ವೇಳೆ ಯಥಾವತ್ತಾದ ಪ್ರಸ್ತಾವನೆಗೆ ಅಸ್ತು ಎಂದರೆ ನಿತ್ಯ ಸರಾಸರಿ 6 ಕೋಟಿ ರೂ. ಆದಾಯ ಹೆಚ್ಚಳವಾಗುವ ನಿರೀಕ್ಷೆ ಇದೆ. ಆದರೆ ಆ ಪೈಕಿ ಅರ್ಧಕ್ಕರ್ಧ ಹೊರೆಯನ್ನು ಸರಕಾರವೇ ಹೊರಬೇಕಾಗುತ್ತದೆ.

ಸಾರಿಗೆ ನಿಗಮಗಳ ಬಸ್ಗಳಲ್ಲಿ ಪ್ರಯಾಣಿಸುವ ಒಟ್ಟು ಪ್ರಯಾಣಿಕರ ಪೈಕಿ ಶೇ. 58ರಷ್ಟು ಮಹಿಳೆಯರು. ಅವರ ಪ್ರಯಾಣ ವೆಚ್ಚವನ್ನು ಶಕ್ತಿ ಯೋಜನೆ ಅಡಿ ಸರಕಾರವೇ ಭರಿಸುತ್ತಿದೆ. ಒಂದು ವೇಳೆ ಪ್ರಸ್ತಾವನೆಯಂತೆ ಪ್ರಯಾಣ ದರವನ್ನು ಶೇ. 25ರಷ್ಟು ಹೆಚ್ಚಳ ಮಾಡಿದರೆ, ಅದರಿಂದ ನಿತ್ಯ 5-6 ಕೋಟಿ ರೂ. ಆದಾಯವಂತೂ ಹೆಚ್ಚಳ ಆಗುತ್ತದೆ. ಇದರಲ್ಲೂ ಅರ್ಧದಷ್ಟನ್ನು ಶಕ್ತಿ ಯೋಜನೆಯಡಿ ಸರಕಾರವೇ ಕೊಡಬೇಕಿದೆ.

ಪ್ರಸ್ತಾವನೆಯ ಅರ್ಧದಷ್ಟು ಅಂದರೆ ಶೇ. 10ರಿಂದ 12ರಷ್ಟು ದರ ಏರಿಕೆಗೆ ಅನುಮತಿ ನೀಡಿದರೂ ನಿಗಮಗಳಿಗೆ ಬರುವ ಆದಾಯ ದಿನಕ್ಕೆ 2.50 ರಿಂದ 3 ಕೋಟಿ ರೂ. ಆಗುತ್ತದೆ. ವಾರ್ಷಿಕ 1,100-1,200 ಕೋಟಿ ರೂ. ಆಗಲಿದೆ. ಇದರಲ್ಲಿ ಮಹಿಳಾ ಪ್ರಯಾಣಿಕರ ಪ್ರಯಾಣ ದರ ಶೇ. 55-60ರಷ್ಟು ಎಂದು ಲೆಕ್ಕ ಹಾಕಿದರೂ ವಾರ್ಷಿಕ 550-600 ಕೋಟಿ ರೂ. ಆಗುತ್ತದೆ. ಒಟ್ಟಾರೆಯಾಗಿ ತೈಲ ದರ ಏರಿಕೆಯಿಂದ 3 ಸಾವಿರ ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ಈ ಪೈಕಿ ಶೇ. 20ರಷ್ಟು ಶಕ್ತಿ ಯೋಜನೆ ಅಡಿ ನಿಗಮಗಳಿಗೆ ಪಾವತಿಸಬೇಕಾಗುತ್ತದೆ ಎಂದು ಕೆಎಸ್ಆರ್ಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸರ್ಕಾರ ಅನುಮತಿ ಕೊಡುತ್ತಾ? :
ಒಂದು ವೇಳೆ ದರ ಹೆಚ್ಚಳ ಮಾಡಿದರೆ ಸಾರ್ವಜನಿಕರಿಂದ ಮತ್ತಷ್ಟು ವಿರೋಧ ವ್ಯಕ್ತವಾಗುತ್ತದೆ. ಹೀಗಾಗಿ, ತಕ್ಷಣವೇ ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಸರ್ಕಾರ ಒಪ್ಪುವುದು ಕಷ್ಟಸಾಧ್ಯ ಎನ್ನಲಾಗುತ್ತಿದೆ. ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಸರ್ಕಾರ ಅನುಮತಿ ಕೊಟ್ಟರೂ ಪ್ರಸ್ತಾವನೆ ಸಲ್ಲಿಕೆಯಾಗಿರುವಂತೆ ಶೇ. 25 ರಷ್ಟು ಏರಿಕೆಗೆ ಒಪ್ಪುವುದಿಲ್ಲ. ಕನಿಷ್ಠ ಶೇ. 10 ರಷ್ಟು, ಗರಿಷ್ಠ ಶೇ. 12 ರಷ್ಟು ಹೆಚ್ಚಳಕ್ಕೆ ಒಪ್ಪಿಗೆ ನೀಡಬಹುದು ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಗ್ಯಾರಂಟಿ ಯೋಜನೆಯಲ್ಲಿ ಒಂದಾಗ ಶಕ್ತಿ ಯೋಜನೆಯಡಿ ನಿತ್ಯ 15 ರಿಂದ 25 ಲಕ್ಷಕ್ಕೂ ಅಧಿಕ ಮಹಿಳೆಯರು ಬಸ್ಗಳಲ್ಲಿ ಉಚಿತ ಸಂಚಾರ ಮಾಡುತ್ತಿದ್ದಾರೆ. ಈ ಯೋಜನೆಯಿಂದ ಸಾರಿಗೆ ಸಂಸ್ಥೆಗಳು ನಷ್ಟದಲ್ಲಿವೆ. ದಿವಾಳಿಯಾಗುತ್ತವೆ ಎಂಬ ಅಪಪ್ರಚಾರ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿದೆ. ಒಂದು ವೇಳೆ ಟಿಕೆಟ್ ದರ ಹೆಚ್ಚಿಸಿದರೆ ಪುರುಷರ ಬಳಿ ಹೆಚ್ಚು ಹಣ ಕಿತ್ತುಕೊಂಡು ಮಹಿಳೆಯರಿಗೆ ಉಚಿತವಾಗಿ ಟಿಕೆಟ್ ನೀಡುತ್ತಾರೆ ಎಂಬ ಮಾತುಗಳು ಕೇಳಿಬರುತ್ತವೆ.

ಪ್ರಸ್ತಾವನೆಯ ಅರ್ಧದಷ್ಟು ಅಂದರೆ ಶೇ. 10ರಿಂದ 12ರಷ್ಟು ದರ ಏರಿಕೆಗೆ ಅನುಮತಿ ನೀಡಿದರೂ ನಿಗಮಗಳಿಗೆ ಬರುವ ಆದಾಯ ದಿನಕ್ಕೆ 2.50ರಿಂದ 3 ಕೋಟಿ ರೂ. ಆಗುತ್ತದೆ. ವಾರ್ಷಿಕ 1,100-1,200 ಕೋಟಿ ರೂ. ಆಗಲಿದೆ. ಇದರಲ್ಲಿ ಮಹಿಳಾ ಪ್ರಯಾಣಿಕರ ಪ್ರಯಾಣ ದರ ಶೇ. 55-60ರಷ್ಟು ಎಂದು ಲೆಕ್ಕ ಹಾಕಿದರೂ ವಾರ್ಷಿಕ 550-600 ಕೋಟಿ ರೂ. ಆಗುತ್ತದೆ. ಒಟ್ಟಾರೆಯಾಗಿ ತೈಲ ದರ ಏರಿಕೆಯಿಂದ 3 ಸಾವಿರ ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ಈ ಪೈಕಿ ಶೇ. 20ರಷ್ಟು ಶಕ್ತಿ ಯೋಜನೆ ಅಡಿ ನಿಗಮಗಳಿಗೆ ಪಾವತಿಸಬೇಕಾಗುತ್ತದೆ.

ಈ ಹಿಂದೆ 2019ರಲ್ಲಿ ಕೆಎಸ್ಆರ್ಟಿಸಿ ಬಸ್ ಟಿಕೆಟ್ ದರ ಹೆಚ್ಚಳವಾಗಿತ್ತು. ತೈಲ ಬೆಲೆ ಏರಿಕೆ ಆಗಿರುವುದರಿಂದ ಟಿಕೆಟ್ ದರ ಹೆಚ್ಚಳ ಅನಿವಾರ್ಯ. ನೌಕರರಿಗೆ ಹೆಚ್ಚಿನ ಸಂಬಳ, ಸೌಲಭ್ಯ ಕಲ್ಪಿಸಲು ಟಿಕೆಟ್ ದರ ಹೆಚ್ಚಳ ಅನಿವಾರ್ಯವಾಗಿದೆ. 2020ರಲ್ಲೇ ನೌಕರರ ವೇತನ ಪರಿಷ್ಕರಣೆ ಆಗಬೇಕಿತ್ತು. ಹೀಗಾಗಿ ಟಿಕೆಟ್ ದರ ಹೆಚ್ಚಳದ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎನ್ನುತ್ತಾರೆ ಹಿರಿಯ ಅಧಿಕಾರಿಯೊಬ್ಬರು.

ಕಳೆದ ತ್ರೈಮಾಸಿಕದಲ್ಲಿ ಕೆಎಸ್ಆರ್ಟಿಸಿಗೆ 295 ಕೋಟಿ ರೂ. ನಷ್ಟವಾಗಿದೆ. 40 ಹೊಸ ವೋಲ್ವೋ ಬಸ್ಗಳಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಈಗಾಗಲೇ 600 ಸಾಮಾನ್ಯ ಬಸ್ಗಳನ್ನು ಖರೀದಿ ಮಾಡಲಾಗಿದೆ. ಸಂಸ್ಥೆ ಉಳಿಯಬೇಕಾದರೆ ಟಿಕೆಟ್ ದರ ಹೆಚ್ಚಳ ಅನಿವಾರ್ಯ. ಈಗಾಗಲೇ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯವಿದೆ. ಟಿಕೆಟ್ ದರ ಹೆಚ್ಚಳ ಮಾಡುವುದರಿಂದ ಪುರುಷ ಪ್ರಯಾಣಿಕರಿಗೆ ಕೊಂಚ ಹೊರೆಯಾಗಲಿದೆ. ಮಹಿಳೆಯ ಟಿಕೆಟ್ ದರವೂ ಏರಿಕೆಯಾಗಲಿದ್ದು, ಅದನ್ನು ಸರ್ಕಾರವೇ ಭರಿಸಲಿದೆ. ಟಿಕೆಟ್ ದರ ಏರಿಕೆ ವಿಚಾರಕ್ಕೆ ಸಂಬಂಧಿಸಿದ ಇನ್ನುಳಿದ ವಿಷಯ ಸಿಎಂ ವಿವೇಚನೆಗೆ ಬಿಟ್ಟಿದ್ದು ಎನ್ನುವುದು ಇಲಾಖೆಯ ಅಧಿಕಾರಿಗಳ ಮಾಹಿತಿಯಾಗಿದೆ.

RELATED ARTICLES

Latest News