ಬೆಂಗಳೂರು,ನ.12– ಕಾಮಗಾರಿಯಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಮುಖ್ಯಮಂತ್ರಿ ಸಚಿವಾಲಯ ಸ್ಪಷ್ಟಪಡಿಸಿದೆ. ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಲಾಗಿದ್ದು, ಮತ್ತೊಂದು ಹೊಸ ಸುಳ್ಳಿಗೆ ಸ್ಪಷ್ಟನೆ ಎಂದು ಉಲ್ಲೇಖಿಸಲಾಗಿದೆ.
ಕಾಮಗಾರಿಯಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವ ಪ್ರಸ್ತಾವನೆ ಸರ್ಕಾರದ ಮುಂದಿದೆ ಎಂಬ ವರದಿ ಕೆಲ ಮಾಧ್ಯಮದಲ್ಲಿ ಪ್ರಕಟವಾಗಿದೆ. ಮೀಸಲಾತಿ ನೀಡಬೇಕು ಎಂಬ ಬೇಡಿಕೆ ಬಂದಿರುವುದು ನಿಜ. ಆದರೆ ಈ ಕುರಿತು ಸರ್ಕಾರದ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಕಾಂಗ್ರೆಸ್ ಸರ್ಕಾರ ಬಂದಾಗಿನಿಂದಲೂ ಒಂದಲ್ಲಾ ಒಂದು ವಿವಾದಗಳು ಸೃಷ್ಟಿಯಾಗುತ್ತಲೇ ಇವೆ. ಪ್ರವರ್ಗ 2 ಬಿ ಅಡಿಯಲ್ಲಿ ಬರುವ ಅಲ್ಪಸಂಖ್ಯಾತ ಸಮುದಾಯಕ್ಕೆ ಕಾಮಗಾರಿಯಲ್ಲಿ ಶೇ.4ರಷ್ಟು ಮೀಸಲಾತಿ ನೀಡುವ ಸಂಬಂಧ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯ್ದೆಗೆ ತಿದ್ದುಪಡಿ ತರಲು ಚಿಂತನೆ ನಡೆದಿತ್ತು ಎಂದು ಹೇಳಲಾಗಿದೆ.
ಸಚಿವರಾದ ಜಮೀರ್ ಅಹಮದ್ ಖಾನ್, ರಹೀಂಖಾನ್ , ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಶಾಸಕರಾದ ತನ್ವೀರ್ ಸೇಠ್, ಅಬ್ದುಲ್ ಜಬ್ಬರ್, ಎನ್.ಎ.ಹ್ಯಾರಿಸ್, ರಿಜ್ವಾನ್ ಹರ್ಷದ್, ಆಸಿಫ್ ಸೇಠ್, ಖಲಿಫಾತಿಮಾ, ಇಕ್ಬಾಲ್ ಹುಸೇನ್, ಬಿಲ್ಕಿಸ್ ಬಾನು ಮತ್ತಿತರರು ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದ್ದರು.ಇದನ್ನು ಆಧರಿಸಿ ಮುಖ್ಯಮಂತ್ರಿಯವರು ಒಕ್ಕಣೆ ಬರೆದಿದ್ದು, ಆರ್ಥಿಕ ಇಲಾಖೆ ಪರಿಶೀಲಿಸಿ ಕಡತ ಮಂಡಿಸುವಂತೆ ಸೂಚಿಸಿದ್ದರು. ಆದರೆ ಅಂತಿಮವಾಗಿ ಯಾವುದೇ ಪ್ರಕ್ರಿಯೆಗಳು ಮುಂದುವರೆದಿರಲಿಲ್ಲ ಎನ್ನಲಾಗಿದೆ.
ವಿಧಾನಸಭೆ ಉಪಚುನಾವಣೆ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಓಲೈಕೆಗೆ ಕಾಂಗ್ರೆಸ್ ಸರ್ಕಾರ ಮುಂದಾಗಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.ಈ ಮೊದಲು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಉಪ ಯೋಜನೆ ಅಡಿ ಕಾಮಗಾರಿಯಲ್ಲಿ ಮೀಸಲಾತಿ ಕಲ್ಪಿಸಲಾಗಿತ್ತು. ಅದೇ ಮಾದರಿಯಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೂ ಕಾಮಗಾರಿಯಲ್ಲಿ ಮೀಸಲಾತಿ ನೀಡಬೇಕು ಎಂಬ ಬೇಡಿಕೆ ಸಲ್ಲಿಕೆಯಾಗುತ್ತಿರುವುದು ಕುತೂಹಲ ಕೆರಳಿಸಿದೆ. ಸದ್ಯಕ್ಕೆ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಮುಖ್ಯಮಂತ್ರಿ ಕಚೇರಿ ಸ್ಪಷ್ಟನೆ ನೀಡಿದೆ.