ಬೆಂಗಳೂರು, ನ.22- ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕರ್ನಾಟಕವು ಬೆಲೆ ಏರಿಕೆಯ ರಾಜ್ಯವಾಗಿ ಮಾರ್ಪಟ್ಟಿದೆ ಎಂದು ಜೆಡಿಎಸ್ ಟೀಕಿಸಿದೆ.
ಈ ಸಂಬಂಧ ಎಕ್ಸ್ ನಲ್ಲಿ ಸರಣಿ ಪೋಸ್ಟ್ ಮಾಡಿರುವ ಜೆಡಿಎಸ್, ಹಾಲಿನಿಂದ ಇಂಧನದವರೆಗೆ, ವಿದ್ಯುತ್‌ನಿಂದ ಸಾರಿಗೆವರೆಗೆ, ಆರೋಗ್ಯ ಸೇರಿದಂತೆ ಪ್ರತಿಯೊಂದು ದಿನಬಳಕೆಯ ಅಗತ್ಯ ವಸ್ತುಗಳು ಮತ್ತು ಸೇವೆಗಳು ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ದುಪ್ಪಟ್ಟು, ದುಬಾರಿಯಾಗಿವೆ ಎಂದು ಆರೋಪಿಸಿದೆ.
ಭ್ರಷ್ಟ ಕಾಂಗ್ರೆಸ್ ದುರಾಡಳಿತದಲ್ಲಿ ಬೆಲೆ ಏರಿಕೆ ದುಪ್ಪಟ್ಟು, ದುಬಾರಿಯಾಗಿದೆ. ಕಾಂಗ್ರೆಸ್‌ಗೆ ಅಧಿಕಾರ ಕೊಟ್ಟಿದ್ದಕ್ಕೆ ಕರ್ನಾಟಕದ ಜನರಿಗೆ ಏಕೆ ಬೆಲೆ ಏರಿಕೆ ಶಿಕ್ಷೆ? ಸಿದ್ದರಾಮಯ್ಯ ಅವರೇ ಇದೇನಾ, ನೀವು ಜನರಿಗೆ ಭರವಸೆ ನೀಡಿದ ಗ್ಯಾರಂಟಿ? ಎಂದು ಟೀಕಿಸಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಜನರ ಜೇಬಿಗೆ ಹೇಗೆಲ್ಲಾ ಕತ್ತರಿ ಹಾಕುತ್ತಿದೆ, ಪಿಕ್ ಪಾಕೆಟ್ ಮಾಡುತ್ತಿದೆ ಎನ್ನುವುದಕ್ಕೆ ಸಾಕ್ಷಿಗಳು ಕಣ್ಣ ಮುಂದಿವೆ ಎಂದಿರುವ ಜೆಡಿಎಸ್, ಪೆಟ್ರೋಲ್, ಡಿಸೆಲ್ ಬೆಲೆ ಲೀಟರ್‌ಗೆ 3 ರೂ. ಜೂನ್ 8ರಿಂದ ಏರಿಕೆಯಾಗಿದೆ.
ನಂದಿನಿ ಹಾಲು ಲೀಟರ್‌ಗೆ 2 ರೂ. ಜೂನ್ 26ರಿಂದ ಹೆಚ್ಚಳ, ಒಂದು ಯೂನಿಟ್ ವಿದ್ಯುತ್‌ಗೆ ಜೂನ್ ನಿಂದ 2.89 ರೂ. ಏರಿಕೆ, ಶೇ. 20ರಷ್ಟು ಅಬಕಾರಿ ಸುಂಕ ಹೆಚ್ಚಳ, ಸಾರಿಗೆ ಸೆಸ್,ವಾಣಿಜ್ಯ ವಾಹನಗಳ ಮೇಲೆ ಶೇ. 3 ರಷ್ಟು ಏರಿಕೆ ಹಾಗೂ ಮುದ್ರಾಂಕ ಶುಲ್ಕವನ್ನು ಶೇ. 200-300ರಷ್ಟು ಹೆಚ್ಚಳ ಮಾಡಲಾಗಿದೆ ಎಂದು ಬೆಲೆ ಏರಿಕೆ ಪಟ್ಟಿ ಮಾಡಿ ಆರೋಪಿಸಿದೆ.
ವೋಟಿಗಾಗಿ ಉಚಿತ, ಚುನಾವಣೆ ಬಳಿಕ ದರ ಏರಿಕೆ ಖಚಿತ ಎಂದು ವ್ಯಂಗ್ಯವಾಡಿದೆ. ಸರ್ಕಾರಿ ಆಸ್ಪತ್ರೆ ಸೇವೆಗಳ ದರ ಹೆಚ್ಚಳ ಯಾವ ಮಾದರಿ? ಸರ್ಕಾರಿ ಆಸ್ಪತ್ರೆಗಳು ಜನಸಾಮಾನ್ಯರಿಗೆ ಕೊನೆಯ ಆಶಾಕಿರಣವಾಗಿದ್ದವು. ಆದರೆ ಕಾಂಗ್ರೆಸ್ ಆಡಳಿತದಲ್ಲಿ ಬಡವರಿಗೆ ದುಬಾರಿಯಾಗುತ್ತಿವೆ.
ಈಗ ಸರ್ಕಾರಿ ಆಸ್ಪತ್ರೆಯಲ್ಲಿ 30 ರೂ. ಇದ್ದ ಒಳರೋಗಿ ಹಾಸಿಗೆ ಈಗ 50 ರೂ., 750 ರೂ. ಯಾರ ಅಭಿವೃದ್ಧಿಗಾಗಿ ಈ ದರ ಏರಿಕೆ ? ಇದು ನಿಮ ಜನತಾ ಸ್ನೇಹಿ ಆಡಳಿತವೇ?, ವಿಕ್ಟೋರಿಯಾ, ಮಿಂಟೋ ಸೇರಿದಂತೆ ಇನ್ನಿತರ ಆಸ್ಪತ್ರೆಗಳಲ್ಲಿ ಶೇ. 20ರಷ್ಟು ದರ ಏರಿಕೆ. ಸ್ಪೆಷಲ್ ವಾರ್ಡ್ ದರ 750 ರೂ.ನಿಂದ 1000 ರೂ.ಗೆ ಏರಿಕೆಯಾಗಿದ್ದು, ಒಪಿಡಿ ಶುಲ್ಕ ದ್ವಿಗುಣವಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಇನುಂದೆ ಬಡವರಿಗೆ ಆರೋಗ್ಯಕ್ಕೂ ಸಾಲದ ಅಗತ್ಯವಿದೆ ಎಂದು ವಾಗ್ದಾಳಿ ಮಾಡಿರುವ ಜೆಡಿಎಸ್, ಆರೋಗ್ಯ ಸೇವೆ ದುಬಾರಿ, ಬೆಲೆ ಏರಿಕೆ ಬರೆ, ಕಾಂಗ್ರೆಸ್ ಹಗಲು ದರೋಡೆ ಮೊದಲಾದ ಹ್ಯಾಶ್ ಟ್ಯಾಗ್ ಮಾಡಿದೆ.