ಬೆಂಗಳೂರು, ನ. 22- ವಿಶ್ವದ ಅತ್ಯಂತ ಐಷಾರಾಮಿ ಟಿ20-ಐ ಫ್ರಾಂಚೈಸಿ ಲೀಗ್ ಎಂದೇ ಬಿಂಬಿಸಿಕೊಂಡಿರುವ ಐಪಿಎಲ್ ಟೂರ್ನಿಯ ಮೂರು ಆವೃತ್ತಿಗಳಿಗೂ ಇಂದು ಬಿಸಿಸಿಐ ವೇಳಾಪಟ್ಟಿ ಪ್ರಕಟಿಸಿದೆ.
ಹದಿನೆಂಟನೇ ಸೀಸನ್ ಮಾರ್ಚ್ 14ರಂದು ಚಾಲನೆ ಪಡೆದರೆ, ಮೇ 25 ರಂದು ಫೈನಲ್ ಪಂದ್ಯ ನಿಗದಿಗೊಂಡಿದೆ. ಅದರಂತೆಯೇ 206ರ ಸೀಸನ್ ಮಾರ್ಚ್ 15 ರಿಂದ 31, ಅದರ ಮುಂದಿನ ಆವೃತ್ತಿ ಮಾರ್ಚ್ 14 ರಿಂದ ಮೇ 30ರವರೆಗೆ ಜರುಗಲಿದೆ.
ಐಪಿಎಲ್ ಟೂರ್ನಿಯಲ್ಲಿ ವಿದೇಶದ ಹಲವು ಆಟಗಾರರು ಪಾಲ್ಗೊಳ್ಳಲಿದ್ದು, ಆಯಾಯಾ ದೇಶಗಳ ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ವೇಳಾಪಟ್ಟಿಯನ್ನು ಅವಲೋಕಿಸಿಯೇ ಐಪಿಎಲ್ ದಿನಾಂಕಗಳನ್ನು ನಿಗದಿಪಡಿಸಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ನವೆಂಬರ್ 24 ಮತ್ತು 25 ರಂದು ಹದಿನೆಂಟನೇ ಆವೃತ್ತಿಯ ಐಪಿಎಲ್ ಟೂರ್ನಿಯ ಮೆಗಾಹರಾಜು ನಡೆಯಲಿದ್ದು, ಎಲ್ಲಾ 10 ತಂಡಗಳ ಫ್ರಾಂಚೈಸಿಗಳು ತಮ ತಂಡಕ್ಕೆ ಟ್ರೋಫಿ ಗೆದ್ದುಕೊಡಬಲ್ಲ ಆಟಗಾರರ ಖರೀದಿಗೆ ಮುಂದಾಗಿದ್ದು, ಮೊದಲ ಆವೃತ್ತಿಯಿಂದಲೂ ಆಡಿ ಕಪ್ ಗೆಲ್ಲುವಲ್ಲಿ ಎಡವಿರುವ ಆರ್ ಸಿಬಿ ಫ್ರಾಂಚೈಸಿ ಕೂಡ ತವರು ನೆಲವಾದ ಎಂ.ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೆಚ್ಚು ಸೂಕ್ತವಾಗುವಂತಹ ಆಟಗಾರರನ್ನು ಖರೀದಿಸಲು ಮುಂದಾಗಿದೆ.