Sunday, November 24, 2024
Homeರಾಜ್ಯಮಹಾರಾಷ್ಟ್ರದಲ್ಲಿ ಹೀನಾಯ ಸೋಲಿಗೆ ಮತಯಂತ್ರಗಳನ್ನು ದೂರಿದ ಗೃಹಸಚಿವ ಪರಮೇಶ್ವರ್‌

ಮಹಾರಾಷ್ಟ್ರದಲ್ಲಿ ಹೀನಾಯ ಸೋಲಿಗೆ ಮತಯಂತ್ರಗಳನ್ನು ದೂರಿದ ಗೃಹಸಚಿವ ಪರಮೇಶ್ವರ್‌

Home Minister Parameshwar blames EVMs for Congress's humiliating defeat in Maharashtra

ಬೆಂಗಳೂರು,ನ.24- ಮತಯಂತ್ರಗಳ ವ್ಯವಸ್ಥೆ ಇರುವವರೆಗೂ ಕಾಂಗ್ರೆಸ್‌‍ ಪಕ್ಷ ಅಥವಾ ಬೇರೆ ಪಕ್ಷಗಳು ಗೆಲುವು ಸಾಧಿಸಲು ಕಷ್ಟ ಎಂದು ಬಹುತೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಬಹಳ ಬುದ್ಧಿವಂತಿಕೆಯಿಂದ ಇವಿಎಂಗಳನ್ನು ಹ್ಯಾಕ್‌ ಮಾಡುತ್ತಿದ್ದಾರೆ. ಅವರಿಗೆ ಎಲ್ಲಿ ಬೇಕೋ ಅಲ್ಲಿ ಇವಿಎಂಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ಅವರು ಕರಗತ ಮಾಡಿಕೊಂಡಿದ್ದಾರೆ ಎಂದರು.

ಕರ್ನಾಟಕದಲ್ಲಿ ಇವಿಎಂ ಹ್ಯಾಕ್‌ ಆಗದೇ ಇರುವುದಕ್ಕೆ ಸಕಾರಣವಿದೆ. ಇಲ್ಲಿ ಯಡಿಯೂರಪ್ಪ ಅವರ ನಂತರ ಬಿಜೆಪಿಯಲ್ಲಿ ಸಮರ್ಥ ನಾಯಕತ್ವ ಇರಲಿಲ್ಲ. ಹೀಗಾಗಿ ಕರ್ನಾಟಕವನ್ನು ಬಿಟ್ಟುಬಿಟ್ಟಿದ್ದಾರೆ. ಇವಿಎಂ ಹ್ಯಾಕಿಂಗ್‌ ಇಲ್ಲ ಎಂಬ ನಂಬಿಕೆ ಸೃಷ್ಟಿಸಲು ಒಂದು ರಾಜ್ಯವನ್ನು ಬಿಟ್ಟುಬಿಡುತ್ತಾರೆ ಎಂದು ಹೇಳಿದರು.ಇವಿಎಂ ಹ್ಯಾಕ್‌ ಮಾಡಲು ತಾಂತ್ರಿಕವಾಗಿ ಅವಕಾಶವಿದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಹೀಗಾಗಿಯೇ ನಮಗೆ ಅಪನಂಬಿಕೆ ಹೆಚ್ಚಾಗುತ್ತಿದೆ ಎಂದರು.

ಕಾಂಗ್ರೆಸ್‌‍ ಪಕ್ಷ ಇವಿಎಂ ಹ್ಯಾಕ್‌ ಮಾಡಲು ಅವಕಾಶವಿಲ್ಲ. ಅಧಿಕಾರ ಅವರ ಕೈಲಿದೆ. ಅವಕಾಶಗಳೂ ಅವರಿಗೇ ಇದೆ. ಮುಂದಿನ ದಿನಗಳಲ್ಲಿ ಬಿಜೆಪಿ ಶಾಶ್ವತವಾಗಿ ಅಧಿಕಾರದಲ್ಲಿರುವಂತ ವಾತಾವರಣ ಇವಿಎಂ ಹ್ಯಾಕ್‌ನಿಂದಾಗಿ ಕಂಡುಬರುತ್ತಿದೆ. ಇದು ನನ್ನ ವೈಯಕ್ತಿಕ ಹೇಳಿಕೆ ಅಲ್ಲ. ನಮ ನಾಯಕರುಗಳು ವ್ಯಕ್ತಪಡಿಸಿದ ಅಭಿಪ್ರಾಯಗಳು ಎಂದು ಹೇಳೀದರು.

ಒಂದು ದೇಶ, ಒಂದು ಪಕ್ಷ ಎಂಬ ದಿಕ್ಕಿನಲ್ಲೇ ರಾಜಕಾರಣವನ್ನು ಸಜ್ಜುಗೊಳಿಸಲಾಗುತ್ತಿದೆ. ಜಾರ್ಖಂಡ್‌ನಲ್ಲಿ ಜೆಎಂಎಂ ಗೆದ್ದಿದೆ. ಕಾಂಗ್ರೆಸ್‌‍ ಬಲವಾಗಿಲ್ಲ. ಜೆಎಂಎಂನಿಂದ ನಮಗೆ ಅಪಾಯವಿಲ್ಲ. ಹಾಗಾಗಿ ಅಂತಹ ಪಕ್ಷ ಇರಲಿ ಎಂದು ಬಿಟ್ಟುಕೊಡುವಂತಿದೆ ಎಂದರು.

ಕಳೆದ 15 ವರ್ಷಗಳಿಂದಲೂ ಇವಿಎಂ ಬೇಡ, ಮತಯಂತ್ರಗಳೇ ಬೇಕು ಎಂದು ನಾವು ಹೋರಾಟ ಮಾಡುತ್ತಿದ್ದೇವೆ. ಅಮೆರಿಕ, ಯುರೋಪ್‌ ಸೇರಿದಂತೆ ಹಲವು ದೇಶಗಳಲ್ಲಿ ಮತಪತ್ರಗಳನ್ನು ಬಳಕೆ ಮಾಡುತ್ತಿವೆ. ಎಐಸಿಸಿ ಸಮಿತಿ ರಚನೆ ಮಾಡಿ ಚಿದಂಬರಂ, ಕಪಿಲ್‌ ಸಿಬಾಲ್‌, ರಮೇಶ್‌ ಜಯರಾಂ ಮತ್ತು ನಾನು ಸದಸ್ಯರಾಗಿದ್ದೆವು. ನಾವು ಚುನಾವಣಾ ಆಯೋಗದ ಮುಂದೆ ಹೋಗಿ ಇವಿಎಂ ಅನ್ನು ಯಾವ ರೀತಿ ಹ್ಯಾಕ್‌ ಮಾಡಬಹುದು ಎಂದು ತಾಂತ್ರಿಕವಾಗಿ ಪ್ರಾತ್ಯಕ್ಷಿಕೆ ಮಾಡಿ ವಿವರಿಸಿದ್ದೆವು.

ಇಡೀ ದಿನ ಆಯೋಗದವರು ನಮ ಪ್ರಾತ್ಯಕ್ಷಿಕೆ ಯನ್ನು ಗಮನಿಸಿದರು. ನಂತರ ನಾವು ರೂಲಿಂಗ್‌ ನೀಡುತ್ತೇವೆ ಎಂದು ಭರವಸೆ ನೀಡಿದರು. ಮಾರನೇ ದಿನ ಇವಿಎಂ ತೆಗೆಯಲಾಗುವುದಿಲ್ಲ ಎಂದು ಆಯೋಗ ಪ್ರಕಟಿಸಿತ್ತು ಎಂದರು.

1952 ರಿಂದ ಇತ್ತೀಚಿನವರೆಗೂ ಬ್ಯಾಲೆಟ್‌ ಪೇಪರ್‌ನಲ್ಲೇ ಯಶಸ್ವಿಯಾಗಿ ಚುನಾವಣಾ ವ್ಯವಸ್ಥೆಯನ್ನು ನಡೆಸಿರಲಿಲ್ಲವೇ?, ಅದರಲ್ಲೂ ಒಂದೊಂದೇ ರಾಜ್ಯಗಳ ಚುನಾವಣೆ ನಡೆದಿತ್ತು. ಯಾವುದೇ ತೊಂದರೆ ಇರಲಿಲ್ಲ. ಈಗಲೂ ಮತಯಂತ್ರ ತೆಗೆದು ಮತಪತ್ರಗಳಿಗೆ ಮರಳುವುದು ಸೂಕ್ತ ಎಂದು ಹೇಳಿದರು.

ಸುಪ್ರೀಂಕೋರ್ಟ್‌ನಲ್ಲೂ ಈ ಬಗ್ಗೆ ಮೇಲನವಿ ಸಲ್ಲಿಸಲಾಗಿತ್ತು. ಅವರೂ ಕೂಡ ಒಪ್ಪಿಲ್ಲ. ಚುನಾವಣಾ ಆಯೋಗಕ್ಕೆ ಮನವರಿಕೆಯಾದ ಮೇಲೆ ವ್ಯವಸ್ಥೆ ಬದಲಾವಣೆ ಬೇಡ ಎಂದಿದ್ದಾರೆ. ಮತ್ತೆ ಎಲ್ಲಿ ಹೋಗಿ ನಾವು ಕೇಳಬೇಕು?, ಜನರಂತೂ ಮತಯಂತ್ರಗಳಿಗೆ ವಿರುದ್ಧವಾಗಿದ್ದಾರೆ ಎಂದರು.

ತಾಂತ್ರಿಕವಾಗಿ ಇವಿಎಂ ಹ್ಯಾಕ್‌ ಮಾಡಲು ಅವಕಾಶವಿದೆ ಎಂದು ಆಯೋಗದ ಮುಂದೆ ನೇರವಾಗಿ ಸಾಬೀತುಪಡಿಸಿದ್ದೇವೆ. ಜರ್ಮನ್‌ ಸಂಸದರ ನಿಯೋಗ ಒಮೆ ಭಾರತಕ್ಕೆ ಬಂದಾಗ ಇವಿಎಂ ಮಿಷಿನ್‌ನಲ್ಲಿ ಏನಾಗಲಿದೆ ಎಂಬುದನ್ನು ನೋಡಲು ಸಾಧ್ಯವಿಲ್ಲ. ಹೀಗಾಗಿ ಆ ಯಂತ್ರದ ಮೇಲೆ ಏಕೆ ನಂಬಿಕೆ ಇಡಬೇಕು ಎಂದು ಪ್ರಶ್ನೆ ಮಾಡಿದರು. ತಂತ್ರಜ್ಞಾನದಲ್ಲಿ ಮುಂದೆ ಇರುವ ಜರ್ಮನ್‌ನವರು ಈ ರೀತಿ ಹೇಳುತ್ತಿದ್ದಾರೆ ಎಂದರು.

ನಿನ್ನೆ ಮಹಾರಾಷ್ಟ್ರ ಚುನಾವಣೆಯಲ್ಲಿ ಕೆಸಿಸಿ ಅಧ್ಯಕ್ಷ ನಾನಾಪಟೋಲೆ 136 ಮತಗಳಲ್ಲಿ ಸೋಲು ಕಂಡಿದ್ದರು. ಮರು ಎಣಿಕೆಯಾದಾಗ ಅವರು ಗೆದ್ದರು. ಮತಯಂತ್ರಗಳಲ್ಲಿ ಕರಾರುವಕ್ಕಾಗಿದ್ದರೆ ಫಲಿತಾಂಶ ಖಚಿತವಾಗಿರಬೇಕಿತ್ತು. ಬದಲಾವಣೆ ಆಗಿದ್ದೇಗೆ ಎಂದು ಪ್ರಶ್ನಿಸಿದರು.

ಬಿಜೆಪಿಯವರು ಬೇಕಾದ ಕಡೆಯಲ್ಲಿ ಇವಿಎಂ ಹ್ಯಾಕ್‌ ಮಾಡುತ್ತಾರೆ. ಮಹಾರಾಷ್ಟ್ರದಂತಹ ದೊಡ್ಡ ರಾಜ್ಯ ನಮ ಕೈಯಲ್ಲಿರಬೇಕು. ಜಾರ್ಖಂಡ್‌ನಂತಹ ಸಣ್ಣ ರಾಜ್ಯ ಹೋದರೆ ಹೋಗಲಿ ಎಂಬಂತೆ ನಡೆದುಕೊಂಡಿದ್ದಾರೆ. ರಾಜ್ಯದಲ್ಲಿ ಇವಿಎಂ ಹ್ಯಾಕ್‌ ಮಾಡಿದರೆ ಮೂರೂ ಕ್ಷೇತ್ರದ ಉಪಚುನಾವಣೆಯಲ್ಲಿ ಅವರೇ ಗೆಲ್ಲುತ್ತಿದ್ದರು. ಆದರೆ ಇಲ್ಲಿ ಅದಾಗಿಲ್ಲ. ಇವಿಎಂ ಹ್ಯಾಕಿಂಗ್‌ ಉನ್ನತ ಮಟ್ಟದ ರಹಸ್ಯ. ಕುಮಾರಸ್ವಾಮಿ, ಬಸವರಾಜ ಬೊಮಾಯಿ ಅವರಂತವರ ಹಂತದಲ್ಲಿ ಇಲ್ಲ ಎಂದರು.

ಮಹಾರಾಷ್ಟ್ರದಲ್ಲಿ ಟಿಕೆಟ್‌ ನೀಡುವಲ್ಲಿ ಕಾಂಗ್ರೆಸ್‌‍ನಲ್ಲಿ ಸಾಕಷ್ಟು ವಿಳಂಬವಾಗಿತ್ತು. ನಾಮಪತ್ರ ಸಲ್ಲಿಸಲು ಕೊನೆಯ ದಿನದವರೆಗೂ ಅಭ್ಯರ್ಥಿಗಳ ಆಯ್ಕೆ ನಡೆದಿತ್ತು. ಪಕ್ಷದಲ್ಲೂ ಸಾಕಷ್ಟು ಗೊಂದಲಗಳಿದ್ದವು. ನಾಯಕತ್ವಕ್ಕಾಗಿ 2-3 ಮಂದಿ ಪ್ರಯತ್ನಿಸುತ್ತಿದ್ದರು. ಮಹಾವಿಕಾಸ ಅಘಾಡಿ ಪಾಲುದಾರ ಪಕ್ಷವಾಗಿರುವ ಎನ್‌ಸಿಪಿಯಲ್ಲಿ ಶರದ್‌ ಪವಾರ್‌ ಅವರ ಗುಂಪು, ಶಿವಸೇನೆಯ ಉದ್ದವ್‌ ಠಾಕ್ರೆ ಗುಂಪುಗಳ ನಡುವೆ ಕೂಡ ಗೊಂದಲವಿತ್ತು. ಅದರ ಪರಿಣಾಮ ಕೂಡ ನಮ ಪಕ್ಷದ ಮೇಲಾಗಿದೆ ಎಂದು ಹೇಳಿದರು.

ಕಾಂಗ್ರೆಸ್‌‍ 103 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು, 16 ರಲ್ಲಿ ಮಾತ್ರ ಗೆದ್ದಿದ್ದೇವೆ. ಬಹಳಷ್ಟು ಕಡೆ ಮೈತ್ರಿ ಇದ್ದರೂ ಕೂಡ ನಮ ಪಕ್ಷದ ಕಾರ್ಯಕರ್ತರಿಗೆ ಅವರ ಪಕ್ಷದವರು ನಮಗೆ ಕೆಲಸ ಮಾಡಲಿಲ್ಲ. ವಿಧರ್ಭದಲ್ಲಿ 50 ಕ್ಷೇತ್ರಗಳ ಪೈಕಿ ಕೇವಲ 8 ಕ್ಷೇತ್ರಗಳು ಮಾತ್ರ ಗೆಲುವು ಸಾಧಿಸಿದ್ದೇವೆ ಎಂದರು.

RELATED ARTICLES

Latest News